ADVERTISEMENT

ಜಿಲ್ಲೆಗೆ ಬ್ಯಾಡಗಿ ತಾಲ್ಲೂಕು ಪ್ರಥಮ

​ಪ್ರಜಾವಾಣಿ ವಾರ್ತೆ
Published 9 ಮೇ 2018, 12:23 IST
Last Updated 9 ಮೇ 2018, 12:23 IST

ಬ್ಯಾಡಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಶೇ 86.10ರಷ್ಟು ಉತ್ತೀರ್ಣರಾಗಿದ್ದಾರೆ. ಜಿಲ್ಲೆಗೆ ತಾಲ್ಲೂಕು ಮೊದಲ ಸ್ಥಾನದಲ್ಲಿದ್ದು, ರಾಜ್ಯಕ್ಕೆ 46ನೇ ಸ್ಥಾನ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುನಾಥ ಸ್ವಾಮಿ ತಿಳಿಸಿದರು.

ಮಂಗಳವಾರ ಮಾಹಿತಿ ನೀಡಿದ ಅವರು ಪರೀಕ್ಷೆಗೆ ಹಾಜರಾದ 881 ಬಾಲಕರು, 911 ಬಾಲಕಿಯರು ಸೇರಿದಂತೆ ಒಟ್ಟು 1,792 ವಿದ್ಯಾರ್ಥಿಗಳ ಪೈಕಿ 743 ಬಾಲಕರು, 800 ಬಾಲಕಿಯರು ಸೇರಿದಂತೆ ಒಟ್ಟು 1,543 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪಟ್ಟಣದ ನೂತನ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ಪಲ್ಲವಿ ಪ್ರಕಾಶ ಅಂಗಡಿ 616 (ಶೇ 98.56) ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾಳೆ. ಕಳಸೂರಮಠ ಪ್ರೌಢ ಶಾಲೆಯ ಉಮೇಶ ಬ್ಯಾಟಪ್ಪನವರ 613 (ಶೇ 97.92) ತಾಲ್ಲೂಕಿಗೆ ದ್ವಿತೀಯ ಸ್ಥಾನ, ನೂತನ ಪ್ರೌಢ ಶಾಲೆಯ ಕೀರ್ತಿ ಗರಡಿ 610 (ಶೇ 97.6) ತೃತೀಯ ಸ್ಥಾನ ಪಡೆದಿದ್ದಾರೆ.

ADVERTISEMENT

ತಾಲ್ಲೂಕಿನ ಹಿರೇಅಣಜಿ, ಹಿರೇಹಳ್ಳಿ, ಮತ್ತೂರು, ಹೆಡಿಗ್ಗೊಂಡ ಮತ್ತು ರಾಣಿ ಚನ್ನಮ್ಮ ವಸತಿಯುತ ಶಾಲೆ ಸೇರಿದಂತೆ 5 ಸರ್ಕಾರಿ, ಕಾಗಿನೆಲೆ ಕನಕ ಗುರು ಪೀಠದ ಅನುದಾನಿತ ಪ್ರೌಢಶಾಲೆ ಹಾಗೂ ಎಂಡಿಎಚ್, ಕದರಮಂಡಲಗಿಯ ಸ್ಪಂದನ ಮೋಟೆಬೆನ್ನೂರಿನ ವಿ.ಬಿ. ಕಳಸೂರಮಠ ಅನುದಾನ ರಹಿತ ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ ಎಂದು ವಿವರಿಸಿದರು.

ಗುಡಿ ಹೊನ್ನತ್ತಿ ಶಾಲೆಗೆ ಶೇ 85

ರಾಣೆಬೆನ್ನೂರು: ತಾಲ್ಲೂಕಿನ ಗುಡಿ ಹೊನ್ನತ್ತಿ ಸರ್ಕಾರಿ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯ ಒಟ್ಟು ಫಲಿತಾಂಶ ಶೇ 85.07ರಷ್ಟು ಬಂದಿದೆ. 134 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 114 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸಚಿನ್ ಬಸವರಾಜ ಹೊಳಲು ಎಂಬ ವಿದ್ಯಾರ್ಥಿ ಒಟ್ಟು 614 (ಶೇ 98.24) ಅಂಕಗಳನ್ನು ಗಳಿಸಿದ್ದಾನೆ.
ಕನ್ನಡ 125 ಕ್ಕೆ 125, ಗಣಿತ 100, ಸಮಾಜ ವಿಜ್ಞಾನ 100, ಹಿಂದಿ- 99, ಇಂಗ್ಲಿಷ್‌ 96, ವಿಜ್ಞಾನ -94 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ.

ನಾಗರಾಜ ಹುಲಮನಿ ಶೇ 88.64 (554), ಡಿ.ಕಿರಣಕುಮಾರ ಶೇ 88.16 (551), ಶರಣಕುಮಾರ ಬಣಕಾರ ಶೇ 87.68 (548), ಅರ್ಪಿತಾ ಹೆಗ್ಗಣ್ಣನವರ ಶೇ 86.24 (539), ಯಲ್ಲಮ್ಮ ನಾಣಾಪುರ ಶೇ 84.64 (529) ರಷ್ಟು ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಸಚಿನ ಬಸವರಾಜ ಹೊಳಲು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ನಿತ್ಯ 6 ತಾಸು ನಿರಂತರ ಅಭ್ಯಾಸ ಮಾಡುತ್ತಿದ್ದೆ. ಬೆಳಗಿನ ಜಾವ ಹೆಚ್ಚು ಓದುತ್ತಿದ್ದೆ. ದಿನ ಪತ್ರಿಕೆಗಳಲ್ಲಿನ ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆಗಳನ್ನು ಬಿಡಿಸುತ್ತಿದ್ದೆ. ಗೊತ್ತಾಗದ ವಿಷಯಗಳ ಬಗ್ಗೆ ಶಿಕ್ಷಕರನ್ನು ಪ್ರಶ್ನೆಗಳನ್ನು ಕೇಳುವ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದೆ. ಅಂದಿನ ದಿನದ ಅಭ್ಯಾಸವನ್ನು ಅಂದೇ ಓದಿ ಮನನ ಮಾಡಿಕೊಳ್ಳುತ್ತಿದ್ದೆನು. ಸಹಪಾಠಿಗಳೊಂದಿಗೆ ಮತ್ತು ಶಿಕ್ಷಕರೊಂದಿಗೆ ಚರ್ಚೆ ಮಾಡುತ್ತಿದ್ದೆನು. ಮುಂದೆ ಎಂಬಿಬಿಎಸ್‌ ಮಾಡಿ ವೈದ್ಯನಾಗಬೇಕು ಎಂಬ ಕನಸು ಇದೆ’ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.

ಮುಖ್ಯ ಶಿಕ್ಷಕ ಆರ್.ಜಿ.ಮೇಟಿ ಮಾತನಾಡಿ, ‘ಸಂತೋಷ ತನ್ನ ಅಣ್ಣನಿಗಿಂತ ಹೆಚ್ಚು ಅಂಕಗಳನ್ನು ಗಳಿಸುವ ಮಹಾದಾಸೆ ಹೊಂದಿದ್ದನು. ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚುಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ. ಜಿಲ್ಲಾಮಟ್ಟದ ಷಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ತಂದೆ ತಾಯಿ ವ್ಯವಸಾಯ ಮಾಡುತ್ತಾರೆ, ಈತನ ಅಣ್ಣ ಕೂಡ ಇದೇ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದು, ಸರ್ಕಾರದಿಂದ ಲ್ಯಾಪ್‌ಟಾಪ್‌ ಪಡೆದಿದ್ದ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.