ADVERTISEMENT

ಜಿಲ್ಲೆಗೆ ಸಿ.ಎಂ ಸಿದ್ದರಾಮಯ್ಯ ನಾಳೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 9:25 IST
Last Updated 22 ಡಿಸೆಂಬರ್ 2017, 9:25 IST
ಸಚಿವ ರುದ್ರಪ್ಪ ಲಮಾಣಿ
ಸಚಿವ ರುದ್ರಪ್ಪ ಲಮಾಣಿ   

ಹಾವೇರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ. 23ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ಬ್ಯಾಡಗಿ ಮತ್ತು ಹಾವೇರಿ ವಿಧಾನಸಭಾ ಕ್ಷೇತ್ರಗಳ ಸುಮಾರು ₹ 400 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಹೊರಟು ನಗರದ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಮೈದಾನದ ಹೆಲಿಪ್ಯಾಡ್‌ಗೆ ಬರುವರು. 10.30ಕ್ಕೆ ತಾಲ್ಲೂಕಿನ ದೇವಗಿರಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ನಂತರ ಅಗಡಿ ಕೆರೆಗೆ ಬಾಗಿನ ಅರ್ಪಿಸುವರು.

ಮಧ್ಯಾಹ್ನ 12 ಗಂಟೆಗೆ ನಗರದ ಮುನ್ಸಿಪಲ್ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ ಕಾಗಿನೆಲೆಗೆ ಭೇಟಿ ನೀಡುವರು. ಬಳಿಕ ನಗರದಲ್ಲಿ ವಾಸ್ತವ್ಯ ಹೂಡುವರು. ಡಿ.24ರಂದು ಬೆಳಿಗ್ಗೆ ಕುಂದಗೋಳಕ್ಕೆ ಪ್ರಯಾಣ ಬೆಳೆಸುವರು’ ಎಂದರು.

ADVERTISEMENT

ಉದ್ಘಾಟನೆ: ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಸಮಾರಂಭ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸುವರು.

ಸಚಿವರಾದ ಎಚ್.ಕೆ.ಪಾಟೀಲ, ರಮಾನಾಥ ರೈ, ಡಾ.ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ, ರೋಷನ್ ಬೇಗ್, ತನ್ವೀರ್‌ ಸೇಠ್‌, ಬಸವರಾಜ ರಾಯರೆಡ್ಡಿ, ಈಶ್ವರ ಖಂಡ್ರೆ, ಟಿ.ಬಿ.ಜಯಚಂದ್ರ, ಎಚ್.ಎಂ.ರೇವಣ್ಣ, ಎಂ.ಬಿ.ಪಾಟೀಲ, ಡಿ.ಕೆ.ಶಿವಕುಮಾರ, ಕೃಷ್ಣ ಬೈರೇಗೌಡ, ಕೆ.ಆರ್.ರಮೇಶಕುಮಾರ, ಎಂ.ಕೃಷ್ಣಪ್ಪ, ಪ್ರಿಯಾಂಕ ಖರ್ಗೆ ಪಾಲ್ಗೊಳ್ಳುವರು.

ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಲೀಂ ಅಹಮ್ಮದ್, ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಎಸ್.ಹಲಗಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ ಪಾಲ್ಗೊಳ್ಳುವರು.

ಶಾಸಕ ಬಸವ ರಾಜ ಶಿವಣ್ಣನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಮುಖಂಡರಾದ ಎಸ್.ಎಫ್‌. ಎನ್‌. ಗಾಜೀಗೌಡ್ರ, ಎಂ.ಎಂ. ಹಿರೇ ಮಠ, ಸಂಜೀವಕುಮಾರ್ ನೀರಲಗಿ, ಪಾರ್ವತೆಮ್ಮ ಹಲಗಣ್ಣವರ ಇದ್ದರು.

₹ 333 ಕೋಟಿ ವೆಚ್ಚದ ಕಾಮಗಾರಿ

ತುಂಗಾ ಮೇಲ್ದಂಡೆ ಯೋಜನೆ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ, ಅಲ್ಪಸಂಖ್ಯಾತರ ಕಲ್ಯಾಣ, ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆಗಳ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ, ಕರ್ನಾಟಕ ವಿದ್ಯುತ್ ಪ್ರಸರಣ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಗಳು ಸೇರಿದಂತೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಹೆದ್ದಾರಿ ವಿಭಾಗಳ ಮೂಲಕ ಅನುಷ್ಠಾನಗೊಂಡ ₹ 333 ಕೋಟಿಗೂ ಅಧಿಕ ಕಾಮಗಾರಿಗಳಿಗೆ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದ ಕಾರ್ಯಕ್ರಮದಲ್ಲಿ ಸಿ.ಎಂ. ಚಾಲನೆ ಹಾಗೂ ಉದ್ಘಾಟನೆ ನಡೆಸುವರು ಎಂದು ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.