ಸವಣೂರ: ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಸದಸ್ಯರು ವಿಭಾಗಾಧಿಕಾರಿಯನ್ನು ಆಗ್ರಹಿಸಿದರು.ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಜಿ.ಎಮ್. ಪಠಾಣ, ಅಲ್ಲಾವುದ್ದೀನ್ ಮನಿಯಾರ, ಮೈಮುನ್ನಿಸಾ ಧಾರವಾಡ ಹಾಗೂ ಆಶಾಬಿ ಚಂದೂಬಾಯಿ ಅವರು ವಿಷಯ ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಿದರು. ನಂತರ ವಿಭಾಗಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಹಲವು ಕಾಮಗಾರಿಗಳನ್ನು ಪುರಸಭೆ ಕೈಗೊಂಡಿದೆ. ಅವುಗಳಲ್ಲಿ ಬಹುತೇಕ ಕಾಮಗಾರಿಗಳು ಪಾರದರ್ಶಕವಾಗಿಲ್ಲ. ಇವುಗಳನ್ನು ಮುಚ್ಚಿ ಹಾಕಲು ಬಜೆಟ್ ಮಂಡನೆ ಸಂದರ್ಭದಲ್ಲಿಯೇ 10 ಕಾಮಗಾರಿಗಳ ಪ್ರಸ್ತಾವನೆಗೆ ಅನುಮೋದನೆಗೂ ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಇದು ಅಕ್ರಮ ನಡೆದಿದ್ದನ್ನು ಸಾಬೀತು ಪಡಿಸುತ್ತದೆ ಎಂದು ದೂರಿನಲ್ಲಿ ತಿಳಿಸಿದರು.
ಬಜೆಟ್ ಮಂಡನೆಗೆ ಪ್ರತ್ಯೇಕ ಸಭೆ ಕರೆಯಲು ಮನವಿ ಸಲ್ಲಿಸಲಾಗಿತ್ತು. ಆದರೂ ಅದನ್ನು ಕಡೆಗಣಿಸಲಾಗಿದೆ . ಅಲ್ಲದೆ ಸಭೆಯಲ್ಲಿ ಏಕಕಾಲಕ್ಕೆ 10 ವಿಷಯಗಳನ್ನು ಮಂಡಿಸಲಾಗಿದೆ ಎಂದು ಸದಸ್ಯರು ಆಕ್ಷೇಪಿಸಿದ್ದಾರೆ.
ನಿಯಮಾವಳಿಗಳ ಪ್ರಕಾರ ಫೆ. 15ರ ಒಳಗೆ ಬಜೆಟ್ ಮಂಡಿಸಿ ಸರಕಾರದ ಅನುಮೋದನೆಗೆ ಕಳುಹಿಸಬೇಕಾಗಿತ್ತು. ಈಗ ನಡೆಸಿರುವ ಸಭೆಯು ಕಾನೂನು ಬಾಹೀರ. ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಿದೆ. ಇದು ಸಹ ಖಂಡನೀಯ. ಇದನ್ನು ವಿರೋಧಿಸಿ ಸಭಾತ್ಯಾಗ ಮಾಡಲಾಗುವುದು ಎಂದು ಹೇಳಿ ಸಭೆಯಿಂದ ಹೊರ ನಡೆದರು.
ಪುರಸಭೆಯ ಸದಸ್ಯರೊಂದಿಗೆ ಪ್ರಮುಖರಾದ ನಜೀರಅಹ್ಮದ ದುಕಾನದಾರ, ರಹೆಮಾನ ಗವಾರಿ, ಮಹ್ಮದಗೌಸ್ ಫರಾಶ್, ಸೈಯದ್‌ಸಾಬ ಕಂದೀಲವಾಲೆ, ವೀರಣ್ಣ ಗುಡಿಸಾಗರ್ ಭಾಗವಹಿಸಿದ್ದರು. ಶಿರಸ್ತೇದಾರ ಎಮ್.ಎಚ್ ಮೇದೂರ ಸದಸ್ಯರ ಮನವಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.