ADVERTISEMENT

ತುಂಗಾ ಮೇಲ್ದಂಡೆ : ನಾಲ್ಕು ವರ್ಷ ಕಳೆದರೂ ರೈತರಿಗೆ ಸಿಗದ ಪರಿಹಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 6:35 IST
Last Updated 19 ಸೆಪ್ಟೆಂಬರ್ 2011, 6:35 IST

ಗುತ್ತಲ: ತುಂಗಾ ಮೇಲ್ದಂಡೆ ಯೋಜನೆ ಗಾಗಿ ಜಮೀನು ವಶಪಡಿಸಿಕೊಂಡು ನಾಲ್ಕು ವರ್ಷ ಕಳೆದರೂ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿಗಳು ರೈತರಿಗೆ ಪರಿಹಾರ ನೀಡದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಜ್ಯದ ಪ್ರತಿಷ್ಠಿತಿ ನೀರಾವರಿ ಯೋಜನೆಗಳಲ್ಲೊಂದಾದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ 195 ಕಿ.ಮೀ ನಿಂದ 215 ಕಿ.ಮಿ ಹಾಗೂ 20 ಕಿ.ಮಿ. ಉಪ ಕಾಲುವೆಗಾಗಿ 200 ಎಕರೆ ಜಮೀನನ್ನು  2007 ಹಾಗೂ 2008ರಲ್ಲಿಯೇ ವಶಪಡಿಸಿಕೊಳ್ಳಲಾಗಿದೆ.

ಸಮೀಪದ ಕೂರಗುಂದ, ಬಸಾಪೂರ, ಹಳೇರಿತ್ತಿ ಹಾಗೂ ಕನವಳ್ಳಿ ಗ್ರಾಮಗಳ ರೈತರು ಯೋಜನೆಗಾಗಿ  ಜಮೀನು ಕಳೆದುಕೊಂಡು ನಾಲ್ಕು ವರ್ಷಗಳು ಗತಿಸಿವೆ. ಆದರೆ ರೈತರಿಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ.

ರೈತರಿಗೆ ಸಿಗಬೇಕಾದ ಪರಿಹಾರಕ್ಕಾಗಿ ತುಂಗಾ ಮೇಲ್ದಂಡೆ ಕಚೇರಿಗೆ ಅಲೆದಾಡಿ ರೈತರು ಸಸ್ತಾಗಿದ್ದು, ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸು ತ್ತಿದ್ದಾರೆ ರೈತರ ಆರೋಪ.

ನಿಯಮ ಏನು ಹೇಳುತ್ತೆ?: ಭೂ ಸ್ವಾಧೀನ ಕಾಯ್ದೆಯ ಪ್ರಕಾರ ಯೋಜನೆ ಗಾಗಿ ಜಮೀನು ವಶಪಡಿಸಿಕೊಳ್ಳಲು 4(1) ಅಧಿಸೂಚನೆ ಹೊರಡಿಸಲಾಗು ತ್ತದೆ. ನಂತರ ಆರು ತಿಂಗಳ ಒಳಗೆ 6(1) ಅಧಿಸೂಚನೆ ಹೊರಡಿಸಲಾಗು ತ್ತದೆ.

ಮೊದಲ ಅಧಿಸೂಚನೆ ಹೊರಡಿ ಸಿದ ಮೂರು ವರ್ಷದ ಒಳಗಾಗಿ ಪ್ರಕರಣ ವನ್ನು ಐತೀರ್ಪುಗೊಳಿಸಿ ಮೊದಲ ಹಂತದ ಪರಿಹಾರವನ್ನು ರೈತರಿಗೆ ನೀಡ ಬೇಕು. ಒಂದು ವೇಳೆ ಮೂರು ವರ್ಷ ಒಳಗೆ ಪ್ರಕರಣವನ್ನು ಐತೀರ್ಪಿಗೆ ಒಳಪಡಿಸಿ ಪರಿಹಾರ ನೀಡದಿದ್ದರೆ ಯೋಜನೆಗಾಗಿ ವಶಪಡಿಸಿಕೊಂಡ ರೈತರ ಜಮೀನಿನ ಮೇಲೆ ಇಲಾಖೆಗೆ ಯಾವುದೇ ಹಕ್ಕು ಇರುವುದಿಲ್ಲ. ಇದೇ ವಿಷಯವನ್ನು ಮುಂದಿಟ್ಟುಕೊಂಡು ರೈತರು ನ್ಯಾಯಾ ಲಯದ ಮೆಟ್ಟಿಲೇರಿದರೆ ನ್ಯಾಯಾಲಯ ಯೋಜನೆಯನ್ನೇ ರದ್ದುಗೊಳಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆಗ ಯೋಜನೆಗಾಗಿ ಈವರೆಗೂ ಮಾಡಿದ ಖರ್ಚು ವೆಚ್ಚಗಳನ್ನು ಸಂಬಂಧಪಟ್ಟ ಭೂಸ್ವಾಧೀನ ಅಧಿಕಾರಿಗಳು ಭರಿಸ ಬೇಕಾಗುತ್ತದೆ. ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಯಲ್ಲಿ ಅವಧಿ ಮುಗಿದರೂ ಐತೀರ್ಪುಗೊಳಿಸದೆ ಉಳಿದಿರುವ ಸುಮಾರು 250 ಪ್ರಕರಣ ಗಳು ಬಾಕಿ ಉಳಿದಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ.

ಈ ಕುರಿತು ವಿಶೇಷ ಭೂಸ್ವಾಧೀನ ಅಧಿಕಾರಿ ರಾಜೇಂದ್ರ ಚೋಳನ್ ಅವರನ್ನು ಪ್ರಶ್ನಿಸಿದಾಗ, ಸದ್ಯದಲ್ಲಿಯೇ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳ ಲಾಗುವುದು ಎನ್ನುತ್ತಾರೆ.

ನಾಲ್ಕು ವರ್ಷ ಕಳೆದರೂ ಸಹ ರೈತರಿಗೆ ಪರಿಹಾರ ನೀಡಿ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗುತ್ತಿಲ್ಲ. ಇನ್ನೇ ರಡು ದಿನಗಳಲ್ಲಿ ಪರಿಹಾರ ನೀಡದಿದ್ದರೆ ಕಾಮಗಾರಿ ತಡೆದು ಪ್ರತಿಭಟಿಸಲಾಗು ವುದು ಎಂದು ಕೂರಗುಂದ ಗ್ರಾಮದ ಹನುಮಂತಗೌಡ ಪಾಟೀಲ್ ಎಚ್ಚರಿ ಸಿದ್ದಾರೆ.

ತುಂಗಾ ಮೇಲ್ದಂಡೆ ಯೋಜನೆಗಾಗಿ ಜಮೀನು ಕಳೆದುಕೊಂಡ ರೈತರು ತುತ್ತು ಅನ್ನಕ್ಕಾಗಿ ಪರದಾಡುವಂತ ದುಸ್ತಿತಿ ಒದಗಿದೆ. ಆದರೆ ಅಧಿಕಾರಿಗಳು ಇದಾ ವುದನ್ನೂ ಗಂಭೀರವಾಗಿ ಪರಿಗಣಿ ಸುತ್ತಿಲ್ಲ ಎಂದು ಆರೋಪಿಸುವ ತಾಪಂ ಮಾಜಿ ಸದಸ್ಯ ಬಸಣ್ಣ ಕಂಬಳಿ, ಯೋಜನೆಯ ಕುರಿತು ಬಡಾಯಿಕೊಚ್ಚಿ ಕೊಳ್ಳುತ್ತಿರುವ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಇತ್ತಕಡೆ ಗಮನ ಹರಿಸಲಿ ಎಂದು ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.