ADVERTISEMENT

ತೊಟ್ಟಿಲೋತ್ಸವದ ಮೂಲಕ ಶಿವಾಜಿ ಜಯಂತಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 10:20 IST
Last Updated 24 ಏಪ್ರಿಲ್ 2012, 10:20 IST

ಹಾನಗಲ್: ಇಲ್ಲಿನ ಕುರುಬಗೇರಿಯಲ್ಲಿನ ಶಿವಾಜಿ ನಗರದಲ್ಲಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ತೊಟ್ಟಿಲೋತ್ಸ ವದ ಸಂಪ್ರದಾಯಗಳ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಿಗ್ಗೆ ಶಿವಾಜಿ ವೃತ್ತದಲ್ಲಿರುವ ಶಿವಾಜಿ ಮಹಾರಾಜರ ಪ್ರತಿಮೆ ಎದುರಿನಲ್ಲಿ   ಧ್ವಜಾರೋಹಣ ನೆರವೇರಿ ಸಲಾಯಿತು. ವಾರ‌್ಕರಿ ಮಂಡಳಿಯವರ ಭಜನೆ ಮತ್ತು ಮೃದಂಗ ವಾದ್ಯ ವೈಭವಗಳೊಂದಿಗೆ ಸಮೀಪದ ಮರೆಮ್ಮನ ದೇವಸ್ಥಾನದಿಂದ ಹೂವು ಗಳಿಂದ ಶಿಂಗಾರಗೊಳಿಸಿದ ತೊಟ್ಟಿಲನ್ನು ಶಿವಾಜಿ ಸಭಾ ಭವನಕ್ಕೆ ಭಕ್ತರ ಜಯಘೋಷದ ನಡುವೆ ತರಲಾಯಿತು.

ಸುಮಂಗಲಿಯರಿಂದ ನಾಮಕರಣ, ತೊಟ್ಟಿಲೋತ್ಸವದ ಸಾಂಪ್ರದಾಯಿಕ ವಿಧಿ ವಿಧಾನಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ನಂತರ ನೆರದಿದ್ದ ಭಕ್ತ ಸಮೂಹಕ್ಕೆ ಪಾನಕ, ಕಿಚಡಿ ವಿತರಿಸಲಾಯಿತು.

ಈ ಬಾರಿಯ ಶಿವಾಜಿ ಜಯಂತಿ ಯನ್ನು ಅದ್ದೂರಿಯಾಗಿ ಆಚರಿಸಬೇಕು ಎಂಬ ಹಂಬಲ ಹೊಂದಿದ್ದ ಶಿವಾಜಿ ನಗರದ ಯುವಕರ ಪರಿಶ್ರಮದ ಪರಿಣಾಮ ಪಟ್ಟಣದ ವಿವಿಧೆಡೆಗಳಲ್ಲಿ ಕೇಸರಿ ಧ್ವಜ, ಶಿವಾಜಿ ಮಹಾರಾಜರ ಭಾವಚಿತ್ರಗಳು ರಾರಾಜಿಸುತ್ತಿದ್ದವು. ರಂಜನಿ ಚಿತ್ರಮಂದಿರದ ಎದುರಿನ ವೃತ್ತದಲ್ಲಿ ಶಿವಾಜಿಯ ಬೃಹತ್ ಭಾವಚಿತ್ರ ನಿಲ್ಲಿಸಿ ಭಕ್ತಿಗೀತೆ, ಭಾವಗೀತೆಗಳನ್ನು ಪ್ರಸಾರ ಮಾಡಲಾಯಿತು. ಕುರುಬಗೇರಿ ಪ್ರದೇಶದಲ್ಲಿನ ಮನೆಗಳ ಅಂಗಳ  ರಂಗೋಲಿ ಬಿಡಿಸಿ ತಳಿರು ತೋರಣ ಗಳನ್ನು ಕಟ್ಟುವ ಮೂಲಕ ಬೀದಿಗಳನ್ನು ಅಲಂಕಾರಗೊಳಿಸಲಾಗಿತ್ತು. ಇದ ರೊಂದಿಗೆ ಎಲ್ಲೆಡೆ ಭಗವಾಧ್ವಜಗಳು ಕಂಗೊಳಿಸುತ್ತಿದರಿಂದ ಹಬ್ಬದ ವಾತಾವರಣದ ಕಳೆಗಟ್ಟಿತ್ತು.
ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು.

ಡೊಳ್ಳು, ಭಜನೆ ಕಾರ್ಯಕ್ರಮಗಳು ಮೆರಗು ತಂದವು. ಕ್ಷತ್ರೀಯ ಮರಾಠ ಸಮಾಜ, ನಾವಿ ಮರಾಠ ಸಮಾಜ, ಭಾವಸಾರ ಕ್ಷತ್ರಿಯ ಸಮಾಜ, ಎಸ್.ಎಸ್.ಕೆ ಸಮಾಜ, ಗೊಂದಳಿ ಮತ್ತು ರಜಪೂತ ಸಮಾಜ ಸೇರಿದಂತೆ ಎಲ್ಲ ಸಮುದಾಯದ ಬಾಂಧವರು ಶಿವಾಜಿ ಜಯಂತೋತ್ಸವದ ಅದ್ದೂರಿ ಆಚರಣೆಗೆ ಸಹಕರಿಸಿದರು. ಪುರಸಭೆ ಮಾಜಿ ಅಧ್ಯಕ್ಷರಾದ ಯಲ್ಲಪ್ಪ ಕಿತ್ತೂರ, ಕಲ್ಯಾಣಕುಮಾರ ಶೆಟ್ಟರ,  ಗಣ್ಯರಾದ ನಾಗಪ್ಪ ಸುರಳೇಶ್ವರ, ರಾಮಣ್ಣ ಮಾಸನಕಟ್ಟಿ, ಮನೋಹರ ಬಮ್ಮನಹಳ್ಳಿ, ಪರಶುರಾಮ ಶಿಂಧೆ, ನಾಗಪ್ಪ ಕಂಡೂನವರ, ಕೃಷ್ಣ ಶಿಂಧೆ, ವಿಜಯಲಕ್ಷ್ಮೀ ಕಿತ್ತೂರ, ಪರಶುರಾಮ ಕಂಡೂನವರ, ಸಂತೋಷ ಟಿಕೋಜಿ, ತಾನಾಜಿ ಕಾಟೇಕರ, ರಾಜು ಗೌಳಿ ಮುಂತಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ವಾರ‌್ಕರಿ ಮಂಡಳಿಯ ಫಕ್ಕೀರಪ್ಪ ಕಾಟೇಕರ, ಕಲ್ಲನಗೌಡ ಪಾಟೀಲ, ನಾಗಪ್ಪ ಬಳ್ಳಾರಿ, ಮಹೇಶ ಕೋಲ್ಹಾಪೂರ, ವಿನಾಯಕ ಬಗರೆ ಮತ್ತು ಮೋಹನ ಬಸವಂತಕರ ಅವರಿಂದ ಭಜನೆ, ಮೃದಂಗ ಸೇವೆ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.