ಹಾನಗಲ್: ಜೂನ್ ಪ್ರಾರಂಭದಿಂದ ಮಳೆ ಮುಂಗಾರು ಮಳೆ ಆರಂಭವಾಗಲಿದೆ ಎಂಬ ಲೆಕ್ಕಾಚಾರದಿಂದ ಹೊಲಗದ್ದೆಗಳನ್ನು ಹಸನುಗೊಳಿಸಿಕೊಂಡು ಬಿತ್ತನೆಗಾಗಿ ಕಾಯುತ್ತಿರುವ ತಾಲ್ಲೂಕಿನ ಕೃಷಿಕ ಸಮೂಹಕ್ಕೆ ಕವಿಯುವ ದಟ್ಟಮೋಡಗಳು ಹನಿ ಸುರಿಸದೇ ನಿರಾಶೆಗೊಳಸುತ್ತಿವೆ.
ಕಳೆದ ತಿಂಗಳು ಮೂರನಾಲ್ಕು ಬಾರಿ ಮಳೆಯಾಗಿದ್ದರೂ ಕೃಷಿ ಚಟುವಟಿಕೆಗಳಿಗೆ ಹೇಳಿಕೊಳ್ಳುವಂತಹ ಅನುಕೂಲತೆಗಳು ನಿರ್ಮಾಣವಾಗಲು ಸಾಧ್ಯವಾಗಿಲ್ಲ. ಈಗ ಜೂನ್ ಪ್ರಾರಂಭವಾಗಿ 10 ದಿನ ಕಳೆದರೂ ಮೋಡಗಳ ಮದ್ಯದಲ್ಲಿ ಮಳೆರಾಯನ ಕಣ್ಣಾಮುಚ್ಚಾಲೆ ಮುಂದುವರೆದಿದೆ.
ಇದರಿಂದ ಈ ಬಾರಿ ತಾಲ್ಲೂಕಿನಲ್ಲಿ ಮುಂಗಾರು ಮಳೆ ಮಂದಗತಿಯಲ್ಲಿ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಪರಿಣಾಮ ಬಿತ್ತನೆ ಕಾರ್ಯ ವಿಳಂಬಗೊಳ್ಳುತ್ತಿವೆ. ಇನ್ನು ಹಲವೆಡೆಯಲ್ಲಿ ಧೈರ್ಯ ಮಾಡುವ ಮೂಲಕ ರೈತ ಒಣ ಬಿತ್ತನೆಗೆ ಮುಂದಾಗಿರುವುದು ಕಂಡು ಬರುತ್ತಿದೆ.
ಹಾನಗಲ್ ತಾಲ್ಲೂಕು ಒಟ್ಟು 77525 ಹೆಕ್ಟೇರ್ ಭೌಗೋಳಿಕ ಕ್ಷೇತ್ರ ಹೊಂದಿದೆ. ಸರಕಾರಿ ಇಲಾಖೆಗಳ ಮಾಹಿತಿಯಂತೆ 8474 ಹೆಕ್ಟೇರ ಅರಣ್ಯ ಭೂಮಿ, 3805 ಹೆಕ್ಟೇರ ತೋಟಗಾರಿಕೆ ಕ್ಷೇತ್ರ ಇದೆ. ಹಾನಗಲ್, ಬೊಮ್ಮನಹಳ್ಳಿ, ಅಕ್ಕಿಆಲೂರು ಹೋಬಳಿಗಳ ವ್ಯಾಪ್ತಿಯಲ್ಲಿ 2500 ಕ್ಕೂ ಹೆಚ್ಚು ಕೃಷಿ ಪಂಪಸೆಟ್‌ಗಳಿವೆ. 768 ನೀರಾವರಿ ಕರೆಗಳಿವೆ. ಅಲ್ಲದೆ ಧರ್ಮಾ ಕಾಲುವೆ ತಾಲ್ಲೂಕಿನ ರೈತರಿಗೆ ವರದಾನವಾಗಿ ನೀರೊದಗಿಸುತ್ತಿದೆ.
ಕಾಲುವೆಗಳಿಂದ 5581 ಹೆಕ್ಟೇರ್ ಭೂಮಿ ನೀರಾವರಿಯಾಗಿದೆ. ಧರ್ಮಾ ಮತ್ತು ವರದಾ ನದಿಗೆ ಅಲ್ಲಲ್ಲಿ ಅಡ್ಡಲಾಗಿ ನಿರ್ಮಿಸಲಾದ ಬಾಂದಾರ್‌ಗಳು ನೀರು ಸಂಗ್ರಹಿಸಿಟ್ಟುಕೊಳ್ಳುತ್ತವೆ. ವಿವಿಧ ಕೆರೆಗಳು ಸುಮಾರು 9 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುತ್ತವೆ. ಇನ್ನುಳಿದ ಜಲಮೂಲಗಳು ಸೇರಿದಂತೆ ಇತರ ಮೂಲಗಳಿಂದ ಒಟ್ಟು 21500 ಹೆಕ್ಟೇರ್ ಕೃಷಿ ಭೂಮಿ ನೀರಾವರಿಗೆ ಒಳಪಟ್ಟಿದೆ.
ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಹಿಂದೆ ಭತ್ತ ಬೆಳೆಯುತ್ತಿದ್ದರಿಂದ ಹಾನಗಲ್ ಭತ್ತದ ಖಣಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಭತ್ತ ಮಳೆಯಾಶ್ರಿತ ಬೆಳೆಯಾಗಿರುವ ಕಾರಣ ಇತ್ತೀಚಿನ ವರ್ಷಗಳಲ್ಲಿ ಅಸಮರ್ಪಕ ಮಳೆಯಿಂದ ದಿಕ್ಕೆಟ್ಟ ರೈತರು ಭತ್ತದಿಂದ ವಿಮುಖರಾಗಿದ್ದಾರೆ.
ಉಳ್ಳವರು ಭತ್ತ ಬೆಳೆಯುತ್ತಿದ್ದ ಭೂಮಿಯನ್ನು ತೋಟವನ್ನಾಗಿ ಮಾರ್ಪಡಿಸಿ ಮಾವು, ತೆಂಗು, ಬಾಳೆ ಮತ್ತಿತರ ಆರ್ಥಿಕ ಬೆಳೆಗಳತ್ತ ಮುಖ ಮಾಡಿದ್ದಾರೆ. ಇನ್ನುಳಿದ ರೈತರು ಗೋವಿನ ಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಇದರಿಂದ ತಾಲ್ಲೂಕು ಗೋವಿನಜೋಳದ ಖಣಜ ಎಂಬಂತಾಗಿದೆ. ಇನ್ನುಳಿದಂತೆ ಕಬ್ಬು, ಸೇಂಗಾ, ಸೋಯಾ ಅವರೆ, ತೊಗರಿ ಬೆಳೆಗಳನ್ನು ತಾಲ್ಲೂಕಿನಲ್ಲಿ ಕಾಣಬಹುದು. ಅಲ್ಲದೆ ಅರಿಶಿಣ ಹಾಗೂ ಸುಂಟಿ ಬೆಳೆಯುವವರ ಪ್ರಮಾಣ ಕ್ರಮೆಣ ಹೆಚ್ಚಾಗುತ್ತಿದೆ.
ಬಿತ್ತನೆಗಾಗಿ ಬೇಕಾಗುವ ಭತ್ತ, ಗೋವಿನ ಜೋಳ, ಸೋಯಾಬೀನ, ಶೇಂಗಾ ಸೇರಿದಂತೆ ತಾಲ್ಲೂಕಿನ ರೈತರ ಸಾಂಪ್ರಾದಾಯಿಕ ಬೆಳೆಗಳ ಬಿತ್ತನೆ ಬೀಜಗಳ ವಿತರಣೆಗಾಗಿ ತಾಲ್ಲೂಕಿನ ಬಮ್ಮನಹಳ್ಳಿ, ಅಕ್ಕಿಆಲೂರ ಮತ್ತು ಹಾನಗಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಆದರೆ ಮಳೆ ಬಿಳದ ಕಾರಣ ಬೀಜ, ರಸಗೊಬ್ಬರದ ಖರೀದಿಯಲ್ಲಿ ರೈತರು ಉತ್ಸಾಹ ತೋರುತ್ತಿಲ್ಲ.
ಒಟ್ಟಾರೆ ಮಳೆಯನ್ನು ಅವಲಂಬಿಸಿರುವ ತಾಲ್ಲೂಕಿನ ಹೆಚ್ಚಿನ ಭಾಗದ ಕೃಷಿ ಉದ್ಯಮಕ್ಕೀಗ ಹದವಾದ ಮಳೆಯ ನಿರೀಕ್ಷೆಯಿದೆ. ರೈತರ ಆಶಯಕ್ಕನುಗುಣವಾಗಿ ಮಳೆ ಬಿದ್ದರೆ ಕೃಷಿ ಚಟುವಟಿಕೆಗಳು ಗರಿಗೆದರಿಕೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.