ADVERTISEMENT

ಧೃತಿಗೆಡದೆ ಪಕ್ಷ ಸಂಘಟನೆಗೆ ಶ್ರಮಿಸಿ: ಜೋಶಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 11:16 IST
Last Updated 25 ಸೆಪ್ಟೆಂಬರ್ 2013, 11:16 IST

ಹಾವೇರಿ: ‘ಚುನಾವಣೆಯಲ್ಲಿ ಸೋಲಾದ ಮಾತ್ರಕ್ಕೆ ಎಲ್ಲವನ್ನು ಕಳೆದುಕೊಂಡಿದ್ದೇವೆ ಎಂದ­ರ್ಥವಲ್ಲ. ಎಲ್ಲಿ ಕಳೆದುಕೊಂ­ಡಿದ್ದೇವೆ, ಅಲ್ಲಿಯೇ ಹುಡುಕುವ ಮೂಲಕ ಅದನ್ನು ಮರಳಿ ಪಡೆ­ದು­ಕೊಳ್ಳಬೇಕು. ಅದಕ್ಕಾಗಿ ಈಗಿನಿಂದಲೇ ಬೇರು ಮಟ್ಟ­­ದಿಂದ ಪಕ್ಷವನ್ನು ಬಲಿಷ್ಠಗೊಳಿಸಲು ಶ್ರಮಿ­ಸೋಣ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಕಾರ್ಯ­ಕರ್ತರಿಗೆ ಹಾಗೂ ಜಿಲ್ಲಾ ಘಟಕದ ನೂತನ ಅಧ್ಯಕ್ಷರಿಗೆ ಸಲಹೆ ನೀಡಿದರು.

ನಗದಲ್ಲಿ ಮಂಗಳವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಭೋಜರಾಜ ಕರೂದಿ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರದ ಯುಪಿಎ ನೇತೃತ್ವದ ಕೇಂದ್ರ ಸರ್ಕಾ­ರಕ್ಕೆ ಸ್ಪಷ್ಟ ಆರ್ಥಿಕ ನೀತಿ ಇಲ್ಲದಿರುವುದಕ್ಕೆ ಹಾಗೂ ಆಡಳಿತದುದ್ದಕ್ಕೂ ಭ್ರಷ್ಟಾಚಾರದಲ್ಲಿ ತೊಡಗಿರುವುದಕ್ಕೆ ದೇಶ ಸಂಕೀರ್ಣ ಸ್ಥಿತಿಯಲ್ಲಿದೆ. ಆರ್ಥಿಕ ಆಪತ್ತಕಾಲ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಕೇವಲ ಸೋಲಿನ ಬಗ್ಗೆ ಚಿಂತಿಸುತ್ತಾ ಕುಳಿತುಕೊಳ್ಳದೇ, ದೇಶವನ್ನು ಉಳಿಸುವ ಬಗ್ಗೆ ಹಾಗೂ ಕಾಂಗ್ರೆಸ್‌ ಮುಕ್ತ ಬಲಿಷ್ಠ ಭಾರತ ನಿರ್ಮಾಣಕ್ಕೆ ಕೆಲಸ ಮಾಡಲು ಟೊಂಕಕಟ್ಟಿ ನಿಲ್ಲಬೇಕಿದೆ ಎಂದು ಹೇಳಿದರು.

ಕೇಂದ್ರದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಕಳೆದ 10 ವರ್ಷದ ಆಡಳಿತದಲ್ಲಿ ಆರು ಲಕ್ಷ ಕೋಟಿ ರೂಪಾ­ಯಿ­ಗಳಷ್ಟು ಅಂದರೆ,  ಆರು ಕರ್ನಾಟಕದ ಬಜೆಟ್‌ನ ಹಣವನ್ನು ಹಗರಗಳಲ್ಲಿ ಲೂಟಿ ಮಾಡಿದೆ. ಇಂತಹ ಸರ್ಕಾರದಿಂದ ಬಡತನ ನಿರ್ಮೂಲನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ನರಹಂತಕ ಕಾಂಗ್ರೆಸ್‌: ಮುಖ್ಯಮಂತ್ರಿ ಸಿದ್ಧರಾ­ಮಯ್ಯ ಅವರು ನರೇಂದ್ರ ಮೋದಿಗೆ ನರಹಂತಕ ಎಂದು ಟೀಕಿಸುತ್ತಿದ್ದಾರೆ. ಆದರೆ, ರಾಜೀವ­ಗಾಂಧಿ ಅವರು ಮೂರು ಸಾವಿರ ಸಿಖ್ಖರ ಹತ್ಯೆ ಮಾಡಿರುವುದನ್ನು ಜನ ಮರೆತಿಲ್ಲ. ಸ್ವಾತಂತ್ರ್ಯಾ ನಂತರ ದೇಶದಲ್ಲಿ ನಡೆದ ನರಹತ್ಯೆಗಳು ಬಹು­ತೇಕ ಕಾಂಗ್ರೆಸ್‌ ಅಧಿಕಾ­ರದಲ್ಲಿ ಇದ್ದಾಗಲೇ ಆಗಿವೆ. ನಿಜವಾಗಿಯೂ ನರಹಂತಕರು ಯಾರು ಎಂಬುದನ್ನು ಸಿದ್ದರಾಮಯ್ಯನವರ ಆತ್ಮಾವಲೋ­ಕನ ಮಾಡಿಕೊಳ್ಳಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್‌ ಸಿದ್ದರಾಮಯ್ಯನವರಿಗೆ ಈಗ ಅಧಿಕಾರ ನೀಡಿರ­ಬಹುದು. ಆದರೆ, ಲೋಕಸಭೆ ಚುನಾವಣೆ ನಂತರ ನೀವು ಅಧಿ­ಕಾ­ರದಲ್ಲಿ ಮುಂದುವರೆಯುವ ಬಗ್ಗೆ ನಿಮಗೆ ನಂಬಿಕೆ ಇಲ್ಲ. ಅದೇ ಕಾರಣಕ್ಕಾಗಿ ಈಗ ಬಾಯಿಗೆ ಬಂದಂತೆ ಮಾತನಾ­ಡುತ್ತಿದ್ದೀರಿ ಎಂದು ಆಪಾದಿಸಿದರು.

ಶಾಸಕ ಬಸವರಾಜ ಬೊಮ್ಮಾಯಿ ಮಾತ­ನಾಡಿ, ದೇಶದ ಕಾಂಗ್ರೆಸ್‌ ಸೇರಿದಂತೆ ಬಹುತೇಕ ಪಕ್ಷಗಳಲ್ಲಿ ಆಂತರಿಕ ಪ್ರಜಾ­ಪ್ರ­ಭು­ತ್ವದ ಕೊರತೆ ಇದೆ. ಈ ಬೆಳವಣಿಗೆ ದೇಶದ ಪ್ರಜಾಪ್ರ­ಭುತ್ವಕ್ಕೆ ಮಾರಕವಾಗಿದೆ ಎಂದ ಅವರು,  ಬಿಜೆಪಿ­ಯೊಂ­ದರಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಮಾನ್ಯತೆಯಿದೆ. ಅದೇ ಕಾರಣಕ್ಕಾಗಿ ದೇಶದಲ್ಲಿ ವಿಶಿಷ್ಟ ಹಾಗೂ ರಾಜಕೀಯ ಪ್ರಬಲ ಶಕ್ತಿಯಾಗಿ ಬಿಜೆಪಿ ಬೆಳೆದಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಎದುರಾಗುವ ಸಂದ­ರ್ಭದಲ್ಲಿ ಕರೂದಿ ಅವರು ಜಿಲ್ಲಾ ಘಟಕದ ಅಧ್ಯಕ್ಷ­ರಾಗಿದ್ದಾರೆ. ಇದು ಅವರಿಗೆ ಸವಾಲು ಹಾಗೂ ಅವಕಾಶ ಕೂಡಾ ಆಗಿದೆ. ಕೇಂದ್ರ ಸರ್ಕಾರದ ವೈಫಲ್ಯತೆಗಳನ್ನು ಹಾಗೂ ಸ್ವಾಭಿಮಾನ ಭಾರತ ಕಟ್ಟುವ ಬಿಜೆಪಿ ಕನಸನ್ನು ಜನರಿಗೆ ತಲುಪಿಸಲು ಜನಾಂದೋಲದ ಮೂಲಕ ಜನರ ಮನ, ಮನೆ­ಗಳಿಗೆ ತಲುಪಿಸಬೇಕು. ಈ ನಿಟ್ಟಿನ ನೂತನ ಅಧ್ಯಕ್ಷರು ಈಗಿನಿಂದನೇ ಕಾರ್ಯಪ್ರವೃತ್ತ­ರಾಗ­ಬೇಕು ಎಂದು ಸಲಹೆ ಮಾಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು, ನೂತನ ಅಧ್ಯಕ್ಷ ಭೋಜರಾಜ ಕರೂದಿ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಅಧಿಕಾರ ಸ್ವೀಕರಿಸದ ನೂತನ ಅಧ್ಯಕ್ಷ ಭೋಜನರಾಜ ಕರೂದಿ ಮಾತನಾಡಿ, ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ನಂಬಿಕೆ ಹುಸಿಗೊಳಿಸದಂತೆ ಹಾಗೂ ಪಕ್ಷದ ಸಿದ್ಧಾಂತಕ್ಕೆ ಚ್ಯುತಿ ತರದಂತೆ ಎಲ್ಲರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ರಾಷ್ಟ್ರೀಯ ರಾಷ್ಟ್ರೀಯ ಪರಿಷತ್ ಸದಸ್ಯ ಸಿದ್ದ­ರಾಜು ಕಲಕೋಟಿ, ಫಾಲಾಕ್ಷಗೌಡ ಪಾಟೀಲ, ಮಂಜುನಾಥ ಓಲೇಕಾರ, ನಾಗೇಂದ್ರ ಕಟ­ಕೋಳ, ಡಾ.ಮಲ್ಲೇಶಪ್ಪ ಹರಿಜನ, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಭಾರತಿ ಜಂಬಗಿ, ಜಿ.ಪಂ.ಸದಸ್ಯರಾದ ಬಸವರಾಜ ಹಾದಿ­ಮನಿ, ಬಸವರಾಜ ಬೇವಿನಹಳ್ಳಿ, ಶೋಭಾ ನಿಸ್ಸೀಮಗೌಡರ, ಬಸಮ್ಮ ಅಬಲೂರು, ಕೃಷ್ಣ ಸುಣಗಾರ, ನಗರಸಭೆ ಸದಸ್ಯರು, ಎಲ್ಲ ತಾಲ್ಲೂಕು ಬಿಜೆಪಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಅಲ್ಲದೇ ನೂರಾರು ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.