ADVERTISEMENT

ನಾಯಿಗೂ ನಿಯತ್ತು ಇರುತ್ತದೆ ಸಚಿವ ರುದ್ರಪ್ಪ ಲಮಾಣಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 9:13 IST
Last Updated 26 ಡಿಸೆಂಬರ್ 2017, 9:13 IST
ರುದ್ರಪ್ಪ ಲಮಾಣಿ
ರುದ್ರಪ್ಪ ಲಮಾಣಿ   

ಹಾವೇರಿ: ‘ನಾಯಿಗೂ ನಿಯತ್ತು ಇರುತ್ತದೆ. ಅನ್ನ ನೀಡಿದ ಮನೆಗೆ ನಿಷ್ಠೆ ತೋರುತ್ತದೆ. ಆದರೆ, ಭಾರತೀಯರಿಗೆ ಬದುಕು ನೀಡಿದ ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಾತನಾಡುವವರಿಗೆ ಏನು ಹೇಳಬೇಕು’ ಎಂದು ಸಚಿವ ರುದ್ರಪ್ಪ ಲಮಾಣಿ ಪ್ರಶ್ನಿಸಿದರು.

ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಸಂವಿಧಾನ ರಚಿಸಿದ ಅಂಬೇಡ್ಕರ್‌ ಅವರಿಗೆ ಮಾಡಿದ ಅವಮಾನ. ಇದರಿಂದ ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಜನಸಾಮಾನ್ಯರು ಆಕ್ರೋಶಗೊಂಡಿದ್ದಾರೆ’ ಎಂದರು.

‘ಸಂವಿಧಾನ ಕುರಿತು ಕೀಳಾಗಿ ಮಾತನಾಡುವ ದೇಶದ್ರೋಹಿಗಳನ್ನು ಜನತೆಯೇ ತಿರಸ್ಕರಿಸಬೇಕು’ ಎಂದ ಅವರು, ‘ಇದು ಬಿಜೆಪಿಯ ನೈಜ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ದೇಶಪ್ರೇಮಿಗಳು ಯಾರು ಎಂದು ಜನರೇ ನಿರ್ಧರಿಸುತ್ತಾರೆ’ ಎಂದರು.

ADVERTISEMENT

‘ಸಚಿವ ಹೆಗಡೆ ಹಾದಿ ಬೀದಿಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಸಂವಿಧಾನದ ಕಾರಣದಿಂದಾಗಿಯೇ ಸ್ವಾಭಿಮಾನಿ ಬದುಕು ರೂಪಿಸಿಕೊಂಡಿರುವ ಶೋಷಿತರು, ರೈತರು, ಬಡವರೆಲ್ಲ ಸೇರಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಭಾರತ ವೈವಿಧ್ಯದಿಂದ ಕೂಡಿದ ದೇಶ. ಜಾತ್ಯತೀತ ತತ್ವವೇ ಸಂವಿಧಾನದ ಆಶಯ. ಇದನ್ನು ಪ್ರಶ್ನಿಸುವುದು, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪ್ರಶ್ನಿಸಿದಂತೆ ಎಂದರು.

‘ಈ ದೇಶದ ಜಾತ್ಯತೀತತೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಹೆಗಡೆಗೆ ಸಚಿವರಾಗಿ ಮುಂದುವರಿಯಲು ನೈತಿಕ ಹಕ್ಕಿಲ್ಲ. ಬಿಜೆಪಿಯ ಇತಿಹಾಸ ಮತ್ತು ಸಂಸ್ಕೃತಿಯು ರಾಜ್ಯದ ಜನತೆಗೆ ಇನ್ನೂ ಚೆನ್ನಾಗಿ ನೆನಪಿದೆ’ ಎಂದರು.

*  * 

ತಲೆ ಕೆಟ್ಟು ಹುಚ್ಚರಂತೆ ಮಾತನಾಡುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಯನ್ನು ಹುಚ್ಚಾಸ್ಪತ್ರೆಗೆ ಸೇರಿಸುವುದು ಸೂಕ್ತ
ರುದ್ರಪ್ಪ ಲಮಾಣಿ ಜಿಲ್ಲಾ ಉಸ್ತುವಾರಿ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.