ಹಿರೇಕೆರೂರ: ಬೆಲೆ ನೆಲ ಕಚ್ಚಿರುವುದರಿಂದ ಹೂಕೋಸು ಮತ್ತು ಎಲೆ ಕೋಸುಗಳನ್ನು ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರತಿ ಕೆ.ಜಿ. ಕೋಸು ಗಡ್ಡೆಯನ್ನು ವರ್ತಕರು ಕೇವಲ ಒಂದು ರೂಪಾಯಿಗೆ ಕೇಳುತ್ತಿರುವುದರಿಂದ ಅಪಾರ ಹಣ ಖರ್ಚು ಮಾಡಿ ಬೆಳೆದಿರುವ ರೈತರು ಬೆಳೆಯ ಸಮೇತ ರಂಟೆ ಹೊಡೆದು ಗೊಬ್ಬರ ಮಾಡಲು ಮುಂದಾಗಿದ್ದಾರೆ.
ಸುಮಾರು 6 ತಿಂಗಳ ಹಿಂದೆ ಕೋಸಿಗೆ ಸಿಕ್ಕ ಬಂಪರ್ ಬೆಲೆಯ ಪರಿಣಾಮ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋಸು ಬೆಳೆದಿದ್ದಾರೆ. ಅಂದಾಜು ಸಾವಿರ ಎಕರೆಯಲ್ಲಿ ಕೋಸು ಬೆಳೆಯಲಾಗಿದೆ. ಈಗ ಕೊಯ್ಲಿಗೆ ಬಂದಿರುವ ಕೋಸು ಬೆಲೆ ಕಳೆದುಕೊಂಡು ಹೊಲಗಳಲ್ಲಿ ಕಾಯುತ್ತಿದೆ. ರೈತರು ಕನಿಷ್ಟ ಬೆಲೆಗೆ ಮಾರಾಟ ಮಾಡುವುದಕ್ಕಿಂತ ರಂಟೆ ಹೊಡೆದು ಗೊಬ್ಬರ ಮಾಡುವುದೇ ಸರಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಮಡಿ ಮಾಡಿ ಬೆಳೆಸಿದ ಕೋಸು ಸಸಿಯನ್ನು ತಂದು ಹೊಲದಲ್ಲಿ ನಾಟಿ ಮಾಡಲಾಗುತ್ತದೆ. ಸಸಿಗಳು 50ರಿಂದ 60 ಪೈಸೆಗೆ ಒಂದರಂತೆ ಸಿಗುತ್ತದೆ. ಸುಮಾರು 65 ದಿನಗಳಲ್ಲಿ ಕಟಾವಿಗೆ ಬರುವ ಕೋಸು ಬೆಳೆಯಲು ಪ್ರತಿ ಎಕರೆಗೆ ಅಂದಾಜು ₨25 ಸಾವಿರ ಖರ್ಚಾಗುತ್ತದೆ. ಕೋಸಿಗೆ ರಾಸಾಯನಿಕ ಗೊಬ್ಬರ, ಸಾವಯವ ಗೊಬ್ಬರ ಮತ್ತು ಕೀಟನಾಶಕವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬೇಕಾಗುವುದರಿಂದ ಖರ್ಚು ಸಹಜವಾಗಿ ಹೆಚ್ಚುತ್ತದೆ.
‘ಪ್ರತಿ ಎಕರೆಗೆ 10ರಿಂದ 20 ಟನ್‌ವರೆಗೆ ಇಳುವರಿ ಪಡೆಯಲು ಸಾಧ್ಯವಿದೆ. ಉತ್ತಮ ಬೆಲೆ ಸಿಕ್ಕರೆ ಲಾಭವನ್ನು ಕಾಣಗಬಹುದು. 6 ತಿಂಗಳ ಹಿಂದೆ ಪ್ರತಿ ಕೆ.ಜಿ. ಕೋಸಿಗೆ ₨12 ಸಿಕ್ಕಿತ್ತು. ಈಗ ಒಂದು ರೂಪಾಯಿ ಸಹ ಸಿಗದಂತಾಗಿದೆ. ಹಾಗಾಗಿ ಅರ್ಧ ಎಕರೆ ಎಲೆ ಕೋಸು ಬೆಳೆದು ಕಟಾವು ಮಾಡದೇ ಹಾಗೇ ಬಿಟ್ಟಿದ್ದೇನೆ. ಈಗಿನಂತೆ ಬೆಲೆ ಸಿಕ್ಕರೆ ರೈತ ಮುಳುಗಬೇಕಾಗುತ್ತದೆ’ ಎನ್ನುತ್ತಾರೆ ಚಿನ್ನಮುಳಗುಂದ ಗ್ರಾಮದ ಪ್ರಗತಿಪರ ರೈತ ಮಾಲತೇಶ ಮೋಹನ್‌ರಾವ್ ಪಾಟೀಲ.
‘ಉತ್ತಮ ಬೆಲೆ ಸಿಗುತ್ತದೆ ಎಂದು ₨ 25 ಸಾವಿರ ಖರ್ಚು ಮಾಡಿ ಒಂದು ಎಕರೆಯಲ್ಲಿ ಹೂಕೋಸು ಬೆಳೆದಿದ್ದೇವೆ. ಬೆಲೆ ಸಿಗದೇ ದನಗಳನ್ನು ಮೇಯಿಸಿ ರಂಟೆ ಹೊಡೆಯುತ್ತಿದ್ದೇವೆ. ಹಾಕಿದ ಬಂಡವಾಳ ಕೂಡ ವಾಪಸು ಬಾರದಂತಾಗಿದೆ’ ಎಂದು ಹೂ ಕೋಸು ಬೆಳೆಯ ಸಮೇತ ಟ್ರ್ಯಾಕ್ಟರ್‌ನಲ್ಲಿ ರಂಟೆ ಹೊಡೆಯುತ್ತಿದ್ದ ಚಿನ್ನಮುಳಗುಂದ ಗ್ರಾಮದ ರೈತ ವೀರೇಶ ಪಾಟೀಲ ನೋವು ತೋಡಿಕೊಂಡರು.
ಕೆ.ಎಚ್. ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.