ADVERTISEMENT

ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 6:29 IST
Last Updated 19 ಜುಲೈ 2013, 6:29 IST

ಹಾನಗಲ್: ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪಡಿತರ ಚೀಟಿ ಹೊಂದಿರುವ ತಾಲ್ಲೂಕಿನ 160 ಫಲಾನುಭವಿಗಳಿಗೆ ಪಡಿತರ ಸಿಗುತ್ತಿಲ್ಲ ಎಂದು ತಾ.ಪಂ ವಿರೋಧ ಪಕ್ಷದ ನಾಯಕ ಮಧು ಪಾಣಿಗಟ್ಟಿ ಅವರ ಆರೋಪಕ್ಕೆ ತಾ.ಪಂ ಅಧ್ಯಕ್ಷರೂ ಸೇರಿದಂತೆ ಬಹುತೇಕ ಸದಸ್ಯರು ಪಕ್ಷ ಭೇದ ಮರೆದು ಆಹಾರ ನಿರೀಕ್ಷಕ ಜಿ.ಎನ್.ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

ಅಧ್ಯಕ್ಷ ಹಾಗೂ ಸದಸ್ಯರ ಆರೋಪಕ್ಕೆ ಸಮಜಾಯಿಷಿ ನೀಡಿದ ಅಧಿಕಾರಿ ಜಿ.ಎನ್.ಶೆಟ್ಟರ್, ` ಪಡಿತರ ವಿತರಣೆಗೆ ತಾಂತ್ರಿಕ ದೋಷ ಕಾರಣವಾಗಿದೆ. ಫೋಟೊ ತೆಗೆಯಲು ಆಗುತ್ತಿರುವ ವಿಳಂಬದಿಂದ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಜಿಲ್ಲೆಗೊಂದು ಪ್ರತ್ಯೇಕ ಸರ್ವರ್ ಅಳವಡಿಸುವ ಅಗತ್ಯವಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ' ಎಂದರು.

ಮಲಗುಂದ ಗ್ರಾಮದ ಸಮೀಪದಲ್ಲಿ ವರದಾ ನದಿಗೆ ನೂತನವಾಗಿ ನಿರ್ಮಾಣಗೊಂಡ ಸೇತುವೆಯು ರಸ್ತೆಗೆ ಕೂಡುವ ಸ್ಥಳಗಳಲ್ಲಿ ತೆಗ್ಗುಗಳು ಬಿದ್ದಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆಗಾಲದ ಈ ಸಮಯದಲ್ಲಿ ಇಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಸದಸ್ಯೆ ಕಲ್ಪನಾ ಬ್ಯಾತನಾಳ ಲೋಕೋಪಯೋಗಿ ಎಂಜಿನಿಯರ್ ಬಂಡಿವಡ್ಡರ್ ಅವರನ್ನು ಪ್ರಶ್ನಿಸಿದರು. ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಬಂಡಿವಡ್ಡರ್ ಭರವಸೆ ನೀಡಿದರು.

ಮಳೆಗಾಲದ ಆರಂಭದಿಂದ ತಾಲ್ಲೂಕಿನಾದ್ಯಂತ ವಿದ್ಯುತ್ ಕಣ್ಣಾಮುಚ್ಚಾಲೆ ಹೆಚ್ಚಾಗಿದ್ದು, ರೈತರಿಗೆ ತೀವ್ರ ತೊಂದರೆಯಾಗಿದೆ ಎಂದು ತಾ.ಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಅವರು ಆರೋಪಿಸಿದರೆ, ತಾಲ್ಲೂಕಿನ ಕೃಷಿ ಜಮೀನುಗಳಲ್ಲಿನ ವಿದ್ಯುತ್ ತಂತಿಗಳು ಬಾಗಿ ಜನ ಜಾನುವಾರಗಳಿಗೆ ಅಪಾಯ ಒಡ್ಡುತ್ತಿವೆ. ಈ ಬಗ್ಗೆ ಕಳೆದ ಮೂರು ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಉಪಾಧ್ಯಕ್ಷೆ ಅನಿತಾ ಶಿವೂರ ಹೆಸ್ಕಾಂ ಅಧಿಕಾರಿ ಕೃಷ್ಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಅರಳೇಶ್ವರ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣವಾಗಿ ವರ್ಷ ಪೂರೈಸಿಲ್ಲ. ಅಷ್ಟಲ್ಲಾಗಲೇ ಕಟ್ಟಡ ಕುಸಿಯುವ ಹಂತ ತಲುಪಿದೆ ಎಂದು ತಾ.ಪಂ ಸದಸ್ಯ ರಾಜೇಂದ್ರ ಬಾರ್ಕಿ ಆಪಾದಿಸಿದರು. ತಾಂತ್ರಿಕ ಸಮಿತಿ ಸಲಹೆ ಪಡೆದು ಕ್ರಮ ಜರುಗಿಸುವುದಾಗಿ ಬಿಇಒ ಸಾಲಿಮಠ ಭರವಸೆ ನೀಡಿದರು. ಅತಿಥಿ ಶಿಕ್ಷಕರ ಆದೇಶ ಬಂದ ತಕ್ಷಣ ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರ ಭರ್ತಿ ಮಾಡಲಾಗುವುದು ಎಂದು ಜಿ.ಪಂ ಸದಸ್ಯ ಪದ್ಮನಾಭ ಕುಂದಾಪುರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪಾಲಕರಲ್ಲದವರು ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರೂ ಆಗುತ್ತಿರುವುದು ತಾಲ್ಲೂಕಿನಾದ್ಯಂತ ನಡೆಯುತ್ತಿವೆ. ಶಾಲಾಭಿವೃದ್ಧಿ ಸಮಿತಿಗೆ ನಿಯಮ ಬಾಹಿರ ನೇಮಕ ಮಾಡಬಾರದು. ಹಾಗೂ ಈಗಾಗಲೇ ನೇಮಕವಾಗಿರುವ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಿಳವಳ್ಳಿಯ ಕೊಪ್ಪಗೊಂಡನಕೊಪ್ಪ ಕೆರೆ ಅಭಿವೃದ್ಧಿ ಮಾಡಲಾಗಿದ್ದು, ಆದರೆ ಕೆರೆಗೆ ತೂಬು ಇಲ್ಲದೇ ಪೂರ್ಣ ಕಾಮಗಾರಿಯೇ ಅವೈಜ್ಞಾನಿಕವಾಗಿದೆ ಎಂದು ಜಿ.ಪಂ ಸದಸ್ಯ ಬಸವರಾಜ ಹಾದಿಮನಿ ಸಣ್ಣ ನೀರಾವರಿ ಎಂಜಿನಿಯರ್ ಮೇಲೆ ಹರಿಹಾಯ್ದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಗಡಬಳ್ಳಿ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.