ADVERTISEMENT

ಪಡೆದಿದ್ದು 100ಅಂಕ, ಕೊಟ್ಟಿದ್ದು 72 ಅಂಕ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 10:38 IST
Last Updated 13 ಜೂನ್ 2017, 10:38 IST
ಹಾವನೂರ ಪ್ರೌಢ ಶಾಲೆಯ ವಿದ್ಯಾರ್ಥಿ ಶರಣಪ್ಪ ಬನ್ನಿಮಟ್ಟಿ ಕನ್ನಡ ವಿಷಯದ ಉತ್ತರ ಪತ್ರಿಕೆಯಲ್ಲಿ 100 ಅಂಕಗಳು ನಮೂದಿಸಿರುವುದು
ಹಾವನೂರ ಪ್ರೌಢ ಶಾಲೆಯ ವಿದ್ಯಾರ್ಥಿ ಶರಣಪ್ಪ ಬನ್ನಿಮಟ್ಟಿ ಕನ್ನಡ ವಿಷಯದ ಉತ್ತರ ಪತ್ರಿಕೆಯಲ್ಲಿ 100 ಅಂಕಗಳು ನಮೂದಿಸಿರುವುದು   

ಗುತ್ತಲ: ಇಲ್ಲಿಗೆ ಸಮಿಪದ ಹಾವನೂರ ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿ ಶರಣಪ್ಪ ಬನ್ನಿಮಟ್ಟಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಪಡೆದಿದ್ದು 125ಕ್ಕೆ 125 ಅಂಕ. ಆದರೆ, ಮೌಲ್ಯಮಾಪಕನ ವೇಳೆ ನಡೆದ ಎಡವಟ್ಟಿನಿಂದ ಆತನಿಗೆ ಸಿಕ್ಕಿದ್ದು ಕೇವಲ 97.

ಹೌದು. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ನೋಡಿದ ಶರಣಪ್ಪ, ಆತಂಕಕ್ಕೆ ಒಳಗಾಗಿದ್ದ. ಆತನಿಗೆ ಕನ್ನಡ ವಿಷಯಕ್ಕೆ 72 ಅಂಕ ಸಿಕ್ಕಿದ್ದವು.  ಶಾಲೆಯ ಶಿಕ್ಷಕರು ಆಂತರಿಕ ಅಂಕವಾಗಿ 25 ನೀಡಿದ್ದರು. ಒಟ್ಟು ಸೇರಿ 97 ಎಂದು ಅಂಕಪಟ್ಟಿಯಲ್ಲಿ ದಾಖಲಾಗಿತ್ತು.

ಆದರೆ, ಕೂಡಲೇ ಎಚ್ಚೆತ್ತ ಶರಣಪ್ಪ ಕೂಡಲೇ ಶಾಲಾ ಶಿಕ್ಷಕರನ್ನು ಭೇಟಿಯಾದ. ‘ನಾನು ಕನ್ನಡ ವಿಷಯವನ್ನು ಉತ್ತಮವಾಗಿ ಬರೆದಿದ್ದೇನೆ. ಆದರೂ ಕಡಿಮೆ ಅಂಕ ಬಂದಿವೆ. ಹೀಗಾಗಿ ನನ್ನ ಉತ್ತರ ಪತ್ರಿಕೆ ಪ್ರತಿ ತರಿಸಿಕೊಡಿ’ ಎಂದು ಮನವಿ ಮಾಡಿದ್ದ. ಬಳಿಕ ನಿಗದಿತ ಶುಲ್ಕ ಕಟ್ಟಿ ಉತ್ತರ ಪತ್ರಿಕೆಯ ಪ್ರತಿ ತರಿಸಲಾಗಿದ್ದು, ಅದರಲ್ಲಿ 100ಕ್ಕೆ 100 ಅಂಕಗಳು ಬಿದ್ದಿವೆ. ಆಂತರಿಕ 25 ಅಂಕಗಳು ಸೇರಿಕೊಂಡು 125ಕ್ಕೆ 125 ಅಂಕಗಳು ಪಡೆದಿದ್ದಾನೆ.

ADVERTISEMENT

ಪ್ರವೇಶ ಸಿಗಲಿಲ್ಲ: ‘ಪ್ರೌಢ ಶಿಕ್ಷಣ ಮಂಡಳಿಯವರು ಮಾಡಿದ ತಪ್ಪಿನಿಂದ ನನ್ನ ಒಟ್ಟು ಫಲಿತಾಂಶ ಶೇಕಡ 92.16ರ ಬದಲಿಗೆ ಶೇಕಡ 87.68  ಆಗಿತ್ತು. ಅದನ್ನಿಟ್ಟುಕೊಂಡು ನಾನು ಧಾರವಾಡ ಕರ್ನಾಟಕ ಕಾಲೇಜಿಗೆ ವಿಜ್ಞಾನ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ, ಕಡಿಮೆ ಅಂಕಗಳ ಕಾರಣ ಅರ್ಜಿ ತಿರಸ್ಕರಿಸಲಾಗಿದೆ’ ಎಂದು ಶರಣಪ್ಪ ಬನ್ನಿಮಟ್ಟಿ ‘ಪ್ರಜಾವಾಣಿ’ ಎಂದು ಅಳಲು ತೋಡಿಕೊಂಡನು.

* * 

ಪ್ರೌಢ ಶಿಕ್ಷಣ ಮಂಡಳಿಯಿಂದ ನನಗೆ ಅನ್ಯಾಯವಾಗಿದೆ. ಕಡಿಮೆ ಅಂಕದಿಂದ ಕರ್ನಾಟಕ ಕಾಲೇಜಿನಿಂದ ವಂಚಿತಗೊಂಡಿದ್ದೇನೆ. ನನಗೆ ನ್ಯಾಯ ಒದಗಿಸಿಕೊಡಿ
ಶರಣಪ್ಪ ಬನ್ನಿಮಟ್ಟಿ
ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.