ADVERTISEMENT

ಪರಿಸರ ರಕ್ಷಣೆಗೆ ಚಾರ್ಲ್ಸ್‌ನ ಸೈಕಲ್ ಸಂಚಾರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 7:55 IST
Last Updated 17 ಸೆಪ್ಟೆಂಬರ್ 2011, 7:55 IST

ಹಾವೇರಿ: ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನ, ಕಲುಷಿತಗೊಂಡ ವಾತಾ ವರಣ ಕುರಿತು ಉದ್ದುದ್ದ ಭಾಷಣ ಮಾಡುವ ಜನರು ನಮ್ಮ ಮಧ್ಯದಲ್ಲಿ ಸಾಕಷ್ಟು ಸಿಗುತ್ತಾರೆ. ಆದರೆ, ಪರಿಸರ ಜಾಗೃತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ವ್ಯಕ್ತಿಯೊಬ್ಬ ಕಳೆದ ಆರು ವರ್ಷದಿಂದ ಸೈಕಲ್ ಮೇಲೆಯೇ ದೇಶ ಸಂಚಾರ ಆರಂಭಿಸಿದ್ದಾರೆ.

`ಕಲುಷಿತಗೊಳ್ಳುತ್ತಿರುವ ಪರಿಸರ ವನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸ ಲಿದೆ~ ಎಂಬ ಧ್ಯೇಯ ವಾಕ್ಯದೊಂದಿಗೆ ತಮಿಳುನಾಡಿನ ವಾಮಗಲ್ ನಗರದ ಅನ್ಬೂ ಚಾರ್ಲ್ಸ್ ಎಂಬುವರೇ ದೇಶ ಸಂಚಾರ ಆರಂಭಿಸಿದ ಪರಿಸರವಾದಿ.

54 ವರ್ಷ ವಯಸ್ಸಿನ ಅವಿವಾಹಿತ ರಾದ ಅನ್ಬೂ ಚಾರ್ಲ್ಸ್ ಅವರು, ಈಗಾಗಲೇ ಕರ್ನಾಟಕ ಸೇರಿದಂತೆ ದೇಶದ 20 ರಾಜ್ಯಗಳಲ್ಲಿ ಸಂಚರ ನಡೆಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದಂತೆ ಗುರುವಾರ ಹಾವೇರಿಗೆ ಆಗಮಿಸಿದಾಗ ಅವರನ್ನು  ಭೇಟಿ ಮಾಡಿದ ಪತ್ರಿಕೆ ಜತೆ ತಮ್ಮ ಸಂಚಾರದ ಉದ್ದೇಶ ಹಾಗೂ ಗುರಿ ಕುರಿತು ವಿವರಿಸಿದರು.

ತಮಿಳುನಾಡಿನ ಅಣ್ಣಾಮಲೈ ವಿಶ್ವ ವಿದ್ಯಾಲಯದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಕೆಲ ಕಾಲ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿ ಸಿದ್ದರು. 2005 ರಲ್ಲಿ ದಕ್ಷಿಣ ಭಾರತ ದಲ್ಲಿ ಅಪ್ಪಳಿಸಿದ ಸುನಾಮಿ ಅವರ ಜೀವನದ ಗತಿಯನ್ನೇ ಬದಲಿಸಿತು.

ಸುನಾಮಿಯಂತಹ ಭಯಾನಕ ಘಟನೆಗಳು ನಡೆಯಲು ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದಾಳಿ ಕಾರಣ ಎಂಬುದನ್ನರಿತು, ಪರಿಸರ ರಕ್ಷಣೆಗೆ ಕೈಲಾದ ಮಟ್ಟಿಗೆ ಏನನ್ನಾದರೂ ಮಾಡಬೇಕೆಂಬ ಸದುದ್ದೇಶದಿಂದ ಈ ಸೈಕಲ್ ಮೇಲೆ ದೇಶ ಸಂಚಾರ ಆರಂಭಿಸಿರುವುದಾಗಿ ಅನ್ಬೂ ತಿಳಿಸಿದರು.

20 ರಾಜ್ಯಗಳಲ್ಲಿ ಸಂಚಾರ: 2005 ರಲ್ಲಿ ತಮಿಳುನಾಡಿನ ವಾಮಗಲ್ ನಗರದಿಂದ ದೇಶ ಸಂಚಾರ ಆರಂಭಿ ಸಿದ ಚಾರ್ಲ್ಸ್ ಅವರು, ಈಗಾಗಲೇ ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾ ರಾಷ್ಟ್ರ, ಓರಿಸ್ಸಾ, ಪಾಂಡಿಚೇರಿ, ಪಶ್ಚಿಮ ಬಂಗಾಳ, ಗುಜರಾತ, ರಾಜ ಸ್ತಾನ, ಉತ್ತರ ಪ್ರದೇಶ, ನೇಪಾಳ, ಪಂಜಾಬ, ಹರಿಯಾಣ, ಛತ್ತೀಸಗಡ, ಜಾರ್ಖಂಡ್, ಬಿಹಾರ, ದೀವ ದಮನ್ ರಾಜ್ಯಗಳಲ್ಲಿ ಸಂಚರಿಸಿ ಈಗ ಕರ್ನಾಟಕ ರಾಜ್ಯದಲ್ಲಿ ತಮ್ಮ ಪ್ರಯಾಣ ಆರಂಭಿಸಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳನ್ನು ಸಂಪರ್ಕಿಸಿರುವ ಅವರು, ಈಗ ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ಸಂಚಾರ ಮುಂದುವರೆಸಿದ್ದಾರೆ.

7 ಸಾವಿರ ಉಪನ್ಯಾಸ: ಕೇವಲ ಸೈಕಲ್ ಮೇಲೆ ಸಂಚಾರ ಮಾಡುವು ದಷ್ಟೇ ತಮ್ಮ ಗುರಿಯಲ್ಲ. ಪರಿಸರಕ್ಕೆ ಅನುಕೂಲವಾಗಲಿರುವ ಸೈಕಲ್ ಬಳಕೆಯ ಪ್ರಾಮುಖ್ಯತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪರಿಸರ ಮಹತ್ವ ಕುರಿತು ತಿಳಿಸುತ್ತೇನೆ. ಈಗಾಗಲೇ ದೇಶದ 7 ಸಾವಿರ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಉಪನ್ಯಾಸ ನೀಡಿರುವುದಾಗಿ ಅವರು ತಿಳಿಸುತ್ತಾರೆ.

ಅಡೆತಡೆ ಸಾಮಾನ್ಯ: `ಸೈಕಲ್ ಮೇಲೆ ಪ್ರಯಾಣ ಮಾಡುವಾಗ ಅಡೆ ತಡೆಗಳು ಸಾಮಾನ್ಯ. ಇಲ್ಲಿಯವರೆಗೆ ಬಂದ ತೊಂದರೆಗಳನ್ನು ಎದೆಗುಂದದೇ ಎದುರಿಸುದ್ದೇನೆ. ಮುಂದೆಯೂ ಎದುರಿ ಸುತ್ತೇನೆ ಎಂಬ ಧೈರ್ಯ ನನ್ನಲ್ಲಿದೆ. ಒಮ್ಮೆ ಉತ್ತರ ಪ್ರದೇಶ ಹಾಗೂ ನೇಪಾಳ ಗಡಿಯಲ್ಲಿ ಹೊರಟಾಗ ನಕ್ಸಲ್‌ರ ಕೈಗೆ ಸಿಕ್ಕುಬಿದ್ದೆ. ಆಗ ನಾನೊಬ್ಬ ಪರಿಸರವಾದಿ, ಸೈಕಲ್ ಮೇಲೆ ದೇಶ ಸಂಚಾರ ಮಾಡುತ್ತಿದ್ದೇನೆ ಎಂದು ಹೇಳಿದರೂ ಅವರು ಕೇಳಲಿಲ್ಲ. ನನ್ನನ್ನು ಸಿಐಡಿ ಅಧಿಕಾರಿ ಎಂದು ಕೊಂಡು ತಮ್ಮ ಜತೆ ಕಾಡಿನಲ್ಲಿ ಕರೆ ದೊಯ್ದು, ಕಾಲಿಗೆ ಚೈನು ಕಟ್ಟಿ ಹದಿ ನೈದು ದಿನ ಬಂಧಿಸಿಟ್ಟಿದ್ದರು. ಒಂದು ದಿನ ನನ್ನ ಬಗ್ಗೆ ಟಿವಿಯಲ್ಲಿ ವರದಿ ಬಂದಿತು. ಅದನ್ನು ನೋಡಿದ ಮೇಲೆ ನನ್ನನ್ನು ಬಿಡುಗಡೆಗೊಳಿಸಿದರು ಎಂದು ತಮಗಾದ ಕಹಿ ಅನುಭವವನ್ನು ವಿವರಿಸಿದರು.

`ಈ ಸಂಚಾರ ಎಲ್ಲಿಯ ವರೆಗೆ ಎಂಬುದು ನನಗೆ ಗೊತ್ತಿಲ್ಲ. ದೇವರು ನನ್ನ ದೇಹದಲ್ಲಿ ಎಲ್ಲಿಯವರೆಗೆ ಶಕ್ತಿ ನೀಡುತ್ತಾನೆಯೋ ಅಲ್ಲಿಯವರೆಗೆ ಅಂದರೆ, ನನ್ನಲ್ಲಿ ಉಸಿರು ಇರುವವರೆಗೆ ಈ ಜಾಗೃತಿ ಕಾರ್ಯಕ್ರಮ ನಡೆಸುವು ದಾಗಿ ಅನ್ಬೂ ಚಾರ್ಲ್ಸ್ ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.