ADVERTISEMENT

ಪಶು ವೈದ್ಯರ ನೇಮಕಕ್ಕೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 7:36 IST
Last Updated 20 ಜುಲೈ 2013, 7:36 IST

ಗುತ್ತಲ: ಸಮೀಪದ ಹಾವನೂರ ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ ಸಾವಿಗೀಡಾದ ಆಕಳು ಕರುವಿನೊಂದಿಗೆ ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಹಲವು ದಿನಗಳಿಂದ ಪಶು ವೈದ್ಯರು ನೇಮಕವಾಗಿಲ್ಲ. ಅಲ್ಲದೆ ಗುರುವಾರ ಗ್ರಾಮದ ಜುಂಜಪ್ಪ ಕೆಂಗನಿಂಗಪ್ಪನವರ ಆಕಳು ಕರು ಚಿಕಿತ್ಸೆ ಇಲ್ಲದೆ ಸಾವಿಗೀಡಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗಂಗಪ್ಪ ಕುರವತ್ತಿಮಾತನಾಡಿ, `ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ 20ಕ್ಕೂ ಹೆಚ್ಚು ಜಾನುವಾರಗಳು ಸೂಕ್ತ ಚಿಕಿತ್ಸೆ ಇಲ್ಲದೆ ಸಾವನ್ನಪ್ಪಿವೆ. ಆದರೆ ಇಲಾಖೆ ಅಧಿಕಾರಿಗಳು ಈವರೆಗೂ ವೈದ್ಯರ ನೇಮಕಕ್ಕೆ ಮುಂದಾಗಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಗ್ರಾಮದಲ್ಲಿ ಪಶು ವೈದ್ಯ ಆಸ್ಪತ್ರೆ ಇದ್ದರೂ ಸಿಬ್ಬಂದಿ ಇಲ್ಲದೆ ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ `ಡಿ' ದರ್ಜೆ ನೌಕರರೊಬ್ಬರನ್ನು ಹೊರತುಪಡಿಸಿ ಬೇರಾವ ಸಿಬ್ಬಂದಿ ಇಲ್ಲ. ಜಾನುವಾರುಗಳ ಚಿಕಿತ್ಸೆಗೆ ಗ್ರಾಮಸ್ಥರು ಪರದಾಡುವಂತಾಗಿದೆ. ಇಲಾಖೆ ಕೂಡಲೇ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಗುತ್ತಲ ಠಾಣೆಯ ಪಿಎಸ್‌ಐ ಪ್ರಹ್ಲಾದ್ ಚನ್ನಗಿರಿ ಹಾಗೂ ಸಿಬ್ಬಂದಿ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರು. ನಂತರ ಪಶು ವೈದ್ಯಕೀಯ ಸಹಾಯಕ ನಿದೇರ್ಶಕ ರಾಜು ಕೂಲೆರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಪರಿಹರಿಸುವಂತೆ ಕೋರಿದರು. ವಾರದ ಒಳಗಾಗಿ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದರು. 

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಗಂಗಪ್ಪ ಕುರವತ್ತಿ, ನಾಗಪ್ಪ ಕುರವತ್ತಿ, ಮಂಜಪ್ಪ ನೀರಲಗಿ, ಜುಂಜಪ್ಪ ಕೆಂಗನಿಂಗಪ್ಪನವರ, ನಿಂಗಪ್ಪ ಚಿನ್ನಮಟ್ಟಿ, ಅನ್ನಪ್ಪ ಬುಳಬುಳ್ಳಿ, ಹನುಮಂತ ವಡ್ಡರ್, ಸುರೇಶ ಮಟ್ಟಿ, ಜಗನ್ನಾಥ ಕೊಳಚಿ, ಮರಿಯಪ್ಪ ಕುರವತ್ತಿ, ಶ್ರಿನಿವಾಸ ಒಟ್ಟಾಳ, ಶಿವಪುತ್ರಪ್ಪ ಕುರವತ್ತಿ, ನಿಂಗಪ್ಪ ಚಿನ್ನಿಮಟ್ಟಿ, ಸುಧೀರ್ ಕೆಂಗನಿಂಗಪ್ಪನವರ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.