ADVERTISEMENT

ಪಾಲಿಫೈಬರ್ಸ್‌ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 9:25 IST
Last Updated 19 ಜುಲೈ 2012, 9:25 IST

ರಾಣೆಬೆನ್ನೂರು: ತಾಲ್ಲೂಕಿನ ಕುಮಾರಪಟ್ಟಣದ ಹರಿಹರ ಪಾಲಿಫೈಬರ್ಸ್‌ ಸಂಸ್ಥೆಯ ಮುಖ್ಯ ದ್ವಾರದ ಎದುರು ಹಿರೇಬಿದರಿ ಗ್ರಾಮದ ನಿರುದ್ಯೋಗಿ ಯುವಕರು ಮಂಗಳವಾರ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸತ್ಯಾಗ್ರಹ ನಡೆಸಿದರು.

ತಾ.ಪಂ. ಮಾಜಿ ಅಧ್ಯಕ್ಷ ಗುಡ್ಡಪ್ಪ ಓಲೇಕಾರ ಮಾತನಾಡಿ, ಹಿರೇಬಿದರಿ ಗ್ರಾಮದ  ಹಿಂದುಳಿದ, ಅಲ್ಪಸಂಖ್ಯಾತರು ಮತ್ತು ಬಡ ಯುವಕರನ್ನು ಹರಿಹರ ಪಾಲಿಫೈಬರ್ಸ್‌ ಸಂಸ್ಥೆಯು ನೇಮಕಾತಿಯಲ್ಲಿ ನಿರ್ಲಕ್ಷ ಮಾಡುತ್ತಿದೆ ಎಂದು ಆರೋಪಿಸಿದರು.

ಸಂಸ್ಥೆಯ ಆರಂಭದ ಪೂರ್ವದಲ್ಲಿ ಹಿರೇಬಿದರಿ ಗ್ರಾಮದ ಯುವಕರಿಗೆ ಸಂಸ್ಥೆಯಲ್ಲಿ ನೌಕರಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಸಂಸ್ಥೆ ಕೊಟ್ಟ ಮಾತಿಗೆ ತಪ್ಪಿದೆ ಎಂದು ದೂರಿದರು.

ಯುವ ಮುಖಂಡ ಕರಿಯಪ್ಪ ಬೀರಾಳ  ಮಾತನಾಡಿ, ಪಾಲಿಫೈಬರ್ಸ್‌ ಸಂಸ್ಥೆಯು ಕಳೆದ 40 ವರ್ಷಗಳಿಂದ  ತುಂಗಭದ್ರಾ ನದಿಗೆ ಬಿಡುವ ಕಲುಷಿತ ನೀರನ್ನು ಬಳಸಿ ಗ್ರಾಮದ ಜನತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ನೀರನ್ನು ನೀರಾವರಿಗೆ ಬಳಸಿದ್ದರಿಂದ ಭೂಮಿಯು ಫಲವತ್ತತೆ ಕಳೆದುಕೊಂಡು ಬಂಜರು ಭೂಮಿಯಾಗಿದೆ. ತಮ್ಮ ಬೇಡಿಕೆ ಈಡೇರುವ ವರೆಗೆ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ, ನೀಲಪ್ಪ ಕಲ್ಲಳ್ಳಿ, ಮೂಗಪ್ಪ ದೊಡ್ಡಮನಿ, ಜಗದೀಶ ಬಾರ್ಕಿ, ಶಿವಪ್ಪ, ಸತೀಶ ಪಾಟೀಲ, ದಾಸಪ್ಪ, ಹಾಲಪ್ಪ ಅಲಗಿಲವಾಡ, ವಿರೂಪಾಕ್ಷಪ್ಪ ಹರುಪನಹಳ್ಳಿ, ಜಗದೀಶ ಸಂಗಾನವರ, ಭರಮಪ್ಪ ಚೌಡಕ್ಕನವರ, ಕೊಟ್ರೇಶ, ಎಸ್.ಕೆ. ಕೋಟೆಗೌಡ್ರ, ಮುರುಡೇಶ ಆನ್ವೇರಿ, ಶಿವಕುಮಾರ ಪಾಟೀಲ, ಹರೀಶ ಹೂಗಾರ, ಗುಡ್ಡಪ್ಪ ಕೆಂಪಹಾಲಪ್ಪನವರ, ರಾಜು ಅರಸಿಕೇರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.