ADVERTISEMENT

ಪೊಲೀಸ್ ವ್ಯವಸ್ಥೆ ಆಧುನೀಕರಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 11:05 IST
Last Updated 22 ಅಕ್ಟೋಬರ್ 2011, 11:05 IST

ಹಾವೇರಿ: `ಕರ್ತವ್ಯದಲ್ಲಿರುವ  ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಾರ್ಪಣೆ ಮಾಡುವುದನ್ನು ತಡೆ ಯಲು ಪೊಲೀಸ್ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಅಗತ್ಯವಿದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಸಿ.ರಾಮಕೃಷ್ಣಯ್ಯ ಹೇಳಿದರು.

ನಗರದ ಹೊರವಲಯದ ಕೆರೆಮತ್ತಿ ಹಳ್ಳಿಯಲ್ಲಿರುವ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್ ಹುತಾತ್ಮ ದಿನಾ ಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜಘಾತುಕ ಶಕ್ತಿಗಳು ಪೊಲೀಸ್ ಇಲಾಖೆಯಲ್ಲಿರುವ ಶಸ್ತ್ರಾಸ್ತ್ರ ಗಳಿಗಿಂತ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಹೀಗಾಗಿ ಕಾಲಕ್ಕೆ ತಕ್ಕಂತೆ ಪೊಲೀಸ್ ವ್ಯವಸ್ಥೆಯನ್ನು ಸಹ ಬಲಿಷ್ಠಗೊಳಿಸುವುದರ ಜತೆಗೆ ಅಗತ್ಯ ಸೌಲಭ್ಯ ಒದಗಿಸಬೇಕಿದೆ ಎಂದು ಅವರು ಹೇಳಿದರು.

ಯಾವುದೇ ಹಿಂಸಾತ್ಮಕ ಚಳವಳಿ ಯನ್ನು ಹತ್ತಿಕ್ಕಲು ರಕ್ಷಾಕವಚ ಹಾಗೂ ಪೂರ್ವ ಸಿದ್ಧತೆ ಮಾಡಿಕೊಂಡಾಗ ಮಾತ್ರ ಘಟನೆಯಲ್ಲಿ ಪ್ರಾಣ ಕಳೆದು ಕೊಳ್ಳುವವರ ಸಂಖ್ಯೆ ಯನ್ನು ಕಡಿಮೆ ಗೊಳಿಸಲು ಸಾಧ್ಯವಿದೆ ಎಂದು ಹೇಳಿದರು.

ಹುತಾತ್ಮ ಪೊಲೀಸರನ್ನು ಸ್ಮರಣೆ ಮಾಡುವುದರ ಜೊತೆಗೆ ಅವರ ಕುಟುಂಬಕ್ಕೆ ಸರ್ಕಾರದಿಂದ ದೊರೆಯ ಬೇಕಾದ ಸೌಲಭ್ಯಗಳನ್ನು ಸಕಾಲಕ್ಕೆ ದೊರಕಿಸುವ ಕೆಲಸವಾಗಬೇಕು. ಬಹಳಷ್ಟು ಕಡೆ ಇಂತಹ ದಿನಾಚರಣೆ ಗಳಲ್ಲಿ ಮಾತ್ರ ಹುತಾತ್ಮರನ್ನು ಸ್ಮರಿಸುವ ಅಧಿಕಾರಿಗಳು, ನಂತರ ಅವರ ಕುಟಂಬಕ್ಕೆ ಸೌಲಭ್ಯಗಳನ್ನು ನೀಡದೇ ಓಡಾಡಿಸುತ್ತಾರೆ. ಇದರಿಂದ ತಮ್ಮವ ರನ್ನು ಕಳೆದುಕೊಂಡ ಕುಟುಂಬಗಳು ಸಹಜವಾಗಿ ಇಲಾಖೆ ಬಗ್ಗೆ ತಾತ್ಸಾರ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಮಾತನಾಡಿ, ದೇಶದ ಇತರಡೆ ರಾಜ್ಯಗಳನ್ನು ಹೋಲಿಸಿದಾಗ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಪೊಲೀಸ್ ವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಮಹತ್ವದ ಪಾತ್ರ ವಹಿಸಿದ್ದು, ತಮ್ಮ ಪ್ರಾಣವನ್ನು ಲೆಕ್ಕಿಸದೇ ಜನರ ಪ್ರಾಣ ಉಳಿಸುವ ಅವರ ಕರ್ತವ್ಯಕ್ಕೆ ಪ್ರತಿಯೊಬ್ಬರ ತಲೆಬಾಗಬೇಕು ಎಂದರು.

ಯಾವುದೇ ಸಮಾಜಘಾತುಕ ಶಕ್ತಿ ಗಳನ್ನು ನಿಯಂತ್ರಿಸುವ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡಬಾರದು. ಉತ್ತಮ ತಯಾರಿಯೊಂದಿಗೆ ಎದುರಾಳಿಗಳ ಮೇಲೆ ದಾಳಿ ನಡೆಸುವುದರಿಂದ ಪೊಲೀಸರು ಪ್ರಾಣ ಕಳೆದುಕೊಳ್ಳು ವುದನ್ನು ಕಡಿಮೆ ಮಾಡಬಹುದಾಗಿದೆ ಎಂದು ಅವರು, ಹುತಾತ್ಮರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡು ವತ್ತ ಇಲಾಖೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನ ಸಿಂಗ್ ರಾಠೋರ್ ಅವರು ಪ್ರಸಕ್ತ ವರ್ಷದಲ್ಲಿ ದೇಶದಲ್ಲಿ ಹುತಾತ್ಮರಾದ 636 ಪೊಲೀಸ್‌ರ ಸ್ಮರಣೆ ಮಾಡಿದರು.

ಇದಕ್ಕೂ ಮುನ್ನ ಜಿಲ್ಲಾ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಸಿ.ರಾಮಕೃಷ್ಣಯ್ಯ, ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನ ಸಿಂಗ್ ರಾಠೋರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ. ಅಗಡಿ ಅವರು ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಚವಿಟ್ಟು ಗೌರವ ಸಲ್ಲಿಸಿದರೆ, ಪೊಲೀಸ್ ಸಿಬ್ಬಂದಿ ಪಥ ಸಂಚಲನದ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಲಲಿತಾ ಗುಂಡೇನಹಳ್ಳಿ, ನಗರಸಭೆ ಸದಸ್ಯರಾದ ಮಂಜುಳಾ ಕರಬಸಮ್ಮನವರ, ಅಜ್ಜಯ್ಯ ಹಿರೇಮಠ, ವೇದವ್ಯಾಸ ಕಟ್ಟಿ, ನಗರದ ಗಣ್ಯರು ಹಾಗೂ ಪೊಲೀಸ್ ಅಧಿಕಾರಿ ಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.