ADVERTISEMENT

ಬಣಗುಡುತ್ತಿವೆ ಮೀನು ಸಾಕಾಣೆ ಕೊಳಗಳು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 8:10 IST
Last Updated 24 ನವೆಂಬರ್ 2017, 8:10 IST

ಹಾನಗಲ್‌: ಎರಡು ಎಕರೆ ವಿಸ್ತಿರ್ಣದ ಇಲ್ಲಿನ ಮೀನುಗಾರಿಕೆ ಇಲಾಖೆಯ ಮೀನು ಸಾಕಣೆ ಕೊಳಗಳು ಪೊದೆಗಳಿಂದ ಆವೃತವಾಗಿವೆ.ಇಲ್ಲಿನ ಸಾರಿಗೆ ಬಸ್‌ ಘಟಕದ ಹಿಂಭಾಗದಲ್ಲಿರುವ ಮತ್ಸ್ಯ ಇಲಾಖೆಗೆ ತೆರಳಲು ಗುಣಮಟ್ಟದ ಸಿಸಿ ರಸ್ತೆ ಇದೆ. ಆದರೆ, ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಗಿಡಕಂಟಿಗಳಿಂದಾಗಿ ಇಕ್ಕಟ್ಟು ಏರ್ಪಟ್ಟಿದೆ. ಕಚೇರಿ ಆವರಣದಲ್ಲಿ ಎಲ್ಲೆಂದರಲ್ಲಿ ಫೈಬರ್ ದೋಣಿಗಳು ಬಿದ್ದಿದ್ದು, ಇಲ್ಲಿನ ಸ್ವಚ್ಛತೆಗೆ ಕನ್ನಡಿ ಹಿಡಿಯುವಂತಿದೆ.

ಆವರಣದಲ್ಲಿನ ನಾಲ್ಕು ಮೀನು ಮರಿಗಳ ಸಾಕಾಣಿಕೆ ಕೊಳಗಳು ಹಾಳು ಬಿದ್ದಿವೆ. ಇನ್ನೂ ನಾಲ್ಕು ಮಣ್ಣಿನ ಕೊಳಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ನಿರ್ವಹಣೆ ಕೊರತೆ ಪರಿಣಾಮ ಮೀನು ಸಾಕಣೆ ಚಟುವಟಿಕೆಗಳು ನಡೆಯುತ್ತಿಲ್ಲ.

ಕೃಷಿ ಹೊಂಡ ನಿರ್ಮಿಸಿಕೊಂಡ ರೈತರು ಮತ್ತು ಕೆರೆ–ಕಟ್ಟೆಗಳನ್ನು ಗುತ್ತಿಗೆ ಹಿಡಿದು ಮೀನು ಸಾಕಣೆ ಮಾಡುವವರಿಗೆ ಮೀನು ಮರಿಗಳನ್ನು ಪೂರೈಸಬೇಕಾದ ಮತ್ಸ್ಯ ಇಲಾಖೆ ಎರಡು ವರ್ಷದಿಂದ ಮೀನು ಮರಿ ಸಾಕಾಣಿಕೆ ಮಾಡುತ್ತಿಲ್ಲ.

ADVERTISEMENT

ಸಿಬ್ಬಂದಿ ಕೊರತೆ: ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. 5 ಹುದ್ದೆಗಳ ಪೈಕಿ, ಸಹಾಯಕ ನಿರ್ದೇಶಕ, ಕ್ಷೇತ್ರಪಾಲಕ ಹಾಗೂ ಹಿರಿಯ ಮೇಲ್ವಿಚಾರಕಹುದ್ದೆ ಖಾಲಿ ಇದೆ. ಇದರಿಂದಾಗಿ ನಿರ್ವಹಣೆಗೆ ಹಿನ್ನಡೆಯಾಗುತ್ತಿದೆ. ಇರುವ ಸಿಬ್ಬಂದಿಗೇ ಎಲ್ಲದರ ಬಗ್ಗೆಯೂ ಗಮನಹರಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆಯ ಪ್ರಭಾರ ಹಿರಿಯ ನಿರ್ದೇಶಕ ಶಂಭುಲಿಂಗ ದಂದೂರ ತಿಳಿಸಿದರು.

‘ಕೊಳಗಳನ್ನು ನಿರ್ವಹಣೆ ಮಾಡುವ ಮೂಲಕ, ಸದ್ಯದಲ್ಲೇ ಮೀನು ಸಾಕಾಣಿಕೆ ಕಾರ್ಯ ಆರಂಭಿಸಲಾಗುತ್ತದೆ. ನಾಲ್ಕು ಲಕ್ಷ ಸ್ಪಾನ್‌ ಮೀನು ಮರಿಗಳನ್ನು ಕೊಳ
ಗಳಲ್ಲಿ ಬೆಳೆಸಿ, ರೈತರಿಗೆ ವಿತರಿಸುವ ಯೋಚನೆ ಇದೆ’ ಎಂದು ತಾಲ್ಲೂಕು ಮೀನುಗಾರಿಕಾ ಇಲಾಖೆ ಪ್ರಭಾರ ನಿರ್ದೇಶಕ ವಿನಯಕುಮಾರ ಹೇಳಿದರು.

ಬರದಿಂದ ಮತ್ಸ್ಯ ಉದ್ಯಮ ಸ್ತಬ್ಧ 
ಸತತ ಮೂರು ವರ್ಷದ ಬರ, ಮತ್ಸ್ಯ ಉದ್ಯಮವನ್ನು ಸ್ತಬ್ಧಗೊಳಿಸಿದೆ. ಕೆರೆಗಳು ಖಾಲಿಯಾಗಿ ಮೀನು ಕೃಷಿ ಅಸಾಧ್ಯವಾಗಿದೆ. ಹೀಗಾಗಿ ಮೀನುಗಾರಿಕೆ ಇಲಾಖೆ ಮೀನು ಮರಿಗಳ ಪೂರೈಕೆ ಮಾಡುತ್ತಿಲ್ಲ. ಈಗ ಧರ್ಮಾ ಕಾಲುವೆ ಮೂಲಕ ಸಾಕಷ್ಟು ಕೆರೆಗಳು ತುಂಬಿಕೊಂಡಿವೆ, ಆದರೆ ಮೀನು ಮರಿಗಳು ಸಿಗುತ್ತಿಲ್ಲ ಎಂದು ಬಿಸ್ಮಿಲ್ಲಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸತ್ತಾರಸಾಬ ಅರಳೇಶ್ವರ ಅವರು ಹೇಳಿದರು.

* * 

ಮೀನು ಮರಿಗಳ ಬೇಡಿಕೆ ತಗ್ಗಿದೆ. ಹೀಗಾಗಿ ಮೀನು ಸಾಕಣೆ ಕೊಳಗಳು ಖಾಲಿ ಬಿದ್ದಿವೆ. ಈಗಷ್ಟೇ ಸಾಕಾಣಿಕೆಗೆ ಬೇಡಿಕೆ ಬರುತ್ತಿದೆ
ಶಂಭುಲಿಂಗ ದಂದೂರ, ಮೀನುಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.