ADVERTISEMENT

ಬಸ್ ಸೌಕರ್ಯಕ್ಕೆ ಆಗ್ರಹಿಸಿ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 6:05 IST
Last Updated 9 ಜುಲೈ 2012, 6:05 IST

ಬ್ಯಾಡಗಿ : ರಾಷ್ಟ್ರೀಯ ಹೆದ್ದಾರಿ 4ರಿಂದ 2ಕಿ.ಮೀ ಅಂತರದಲ್ಲಿರುವ ತಾಲ್ಲೂಕಿನ ಕದಮನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸದ ರಾಜ್ಯ ಸಾರಿಗೆ ಸಂಸ್ಥೆಯ ಕ್ರಮವನ್ನು ಖಂಡಿಸಿ ಅಲ್ಲಿಯ ಮಹಿಳೆಯರು ಶಾಲಾ ಮಕ್ಕಳೊಂದಿಗೆ ಆಗಮಿಸಿ ಭಾನುವಾರ ಹೆದ್ದಾರಿ ತಡೆ ನಡೆಸಿದರು.ಇದರಿಂದ ಸುಮಾರು ಒಂದು ಗಂಟೆಯವರೆಗೆ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.

ಪ್ರತಿಭಟನಾ ನಿರತ ಮಹಿಳೆಯರು ಹಾಗೂ ಮಕ್ಕಳು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಬ್ಯಾಡಗಿ ಘಟಕ ವ್ಯವಸ್ಥಾಪಕರ ವಿರುದ್ದ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹದೇವಕ್ಕ ಗಾಣಿಗೇರ ಗ್ರಾಮದಿಂದ ಬ್ಯಾಡಗಿ ಹಾಗೂ ಹಾವೇರಿ ಪಟ್ಟಣಗಳಿಗೆ ತೆರಳಲು ಮಹಿಳೆಯರು ಸಾಕಷ್ಟು ತೊಂದರೆಯನ್ನು ಅನುಭವಿ ಸುವಂತಾಗಿದೆ.

ಸಮರ್ಪಕ ಬಸ್ ಸೌಲಭ್ಯವಿಲ್ಲದೆ ಶಾಲೆ ಹಾಗೂ ಕಾಲೇಜು ಗಳಿಗೆ ಹೋಗುವ ಮಕ್ಕಳು ಗ್ರಾಮದಿಂದ 2ಕಿ.ಮೀ ದೂರ ನಡೆದು ಹೆದ್ದಾರಿಗೆ ತಲುಪಿ ನಿಲ್ಲಿಸಿದ ಬಸ್ ಹತ್ತಬೇಕಾಗಿದೆ. ದಿನ ನಿತ್ಯ ನಡೆಯುವ ಇಂತಹ ಯಾತನೆಯನ್ನು ತಾಳಲಾರದ ಹಲವಾರು ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರು. ಕಮಲಮ್ಮ ಹಿರೇಮಠ ಮಾತನಾಡಿ ಮಳೆಗಾದಲ್ಲಂತೂ ಮಕ್ಕಳ ಪಾಡು ಹೇಳ ತೀರದು.

ಮಳೆ ಬಂತೆಂದರೆ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಲು ಬಸ್ ನಿಲ್ದಾಣದ ವ್ಯವಸ್ಥೆಯಿಲ್ಲ, ಹೀಗಾಗಿ ಮಕ್ಕಳು ತೋಯಿಸಿಕೊಂಡೆ ಶಾಲೆಗೆ ತಲುಪಬೇಕಾಗಿದೆ. ಇಂತಹ ಸಂಕಷ್ಟಗಳನ್ನು ಎದುರಿಸುತ್ತಿರುವ ಗ್ರಾಮಸ್ಥರು ಹಲವಾರು ಬಾರಿ ಬ್ಯಾಡಗಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಬಸ್ ಬಿಡುವಂತೆ ಕೇಳಿಕೊಂಡರೂ ಯಾವುದೇ ಪ್ರಯೋಜನೆವಾಗಿಲ್ಲವೆಂದು ಆರೋಪಿಸಿದರು.

ಗ್ರಾಮದ ಮಹಿಳೆಯರು, ಗರ್ಭಿಣಿಯರು ಹಾಗೂ ವೃದ್ಧರು ಆಸ್ಪತ್ರೆಗಳಿಗೆ ತೆರಳಲು ನರಕ ಯಾತನೆಯನ್ನು ಅನುಭವಿಸಬೇಕಾಗಿದೆ. ಖಾಸಗಿ ವಾಹನದ ಮೊರೆ ಹೋಗ ಬೇಕಾಗಿದ್ದು, ಅವರು ಹೇಳಿದಷ್ಟು ಹಣ ನೀಡಿ ಪಟ್ಟಣವನ್ನು ತಲುಪಬೇಕಾಗಿದೆ. ಇಷ್ಟೊಂದು ಹಣ ನೀಡಲು ಬಡವರಿಗೆ ಎಲ್ಲಿ ಸಾಧ್ಯವಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಪ್ರತಿಭಟನೆಯ ಸುದ್ದಿ ತಿಳಿ ಯುತ್ತಿದ್ದಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ. ಅಗಡಿ, ಪಿಎಸ್‌ಐ ಬಸವರಾಜ ಕಲ್ಲಮ್ಮ ನವರ, ಘಟಕ ವ್ಯವಸ್ಥಾಪಕ ಸಿ.ಚಂದ್ರ ಶೇಖರ ಸ್ಥಳಕ್ಕಾಗಮಿಸಿ ಪ್ರತಿಭಟನಾ ನಿರತ ಮಹಿಳೆಯರನ್ನು ಸಮಾಧಾನ ಪಡಿಸಲು ಯತ್ನಿಸಿದರು.

ಬಸ್ ಸೌಲಭ್ಯವನ್ನು ಒದಗಿಸುವ ಭರವಸೆ ನೀಡಿದಾಗ ಪ್ರತಿಭಟನೆಯಿಂದ ಹಿಂದೆ ಸರಿದರು. ಗ್ರಾಮದ ರೇಣುಕಾ ತಳವಾರ, ಸೌಭಾಗ್ಯ ತಳವಾರ, ಲಲಿತಾ ಹೊಸಮನಿ, ನೇತ್ರಾ ತಳವಾರ, ಆದಿಶಕ್ತಿ, ಅನ್ನಪೂರ್ಣೇಶ್ವರಿ ಹಾಗೂ ಲಕ್ಷ್ಮಿ ಸ್ತ್ರೀಶಕ್ತಿ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.