ADVERTISEMENT

ಬೆಳೆವಿಮೆಗೆ ಒತ್ತಾಯಿಸಿ ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:12 IST
Last Updated 11 ಡಿಸೆಂಬರ್ 2013, 6:12 IST

ಬ್ಯಾಡಗಿ : ಬೆಳೆ ವಿಮೆ ಪರಿಹಾರದ ಹಣವನ್ನು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮೂಲಕ ವಿತರಿಸುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ತಾಲ್ಲೂಕು ಘಟಕದ ಕಾರ್ಯಕರ್ತರು ಸೋಮವಾರ ಕೆಸಿಸಿ ಬ್ಯಾಂಕ್‌ಗೆ ಬೀಗಹಾಕಿ ಧರಣಿ ನಡೆಸಿದ್ದು ಮಂಗಳವಾರವೂ ಮುಂದುವರೆಯಿತು. 

ನೇತೃತ್ವ ವಹಿಸಿದ್ದ ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಸರ್ಕಾರದ ವಿರುದ್ಧ ಹೋರಾಟ ನಡೆಸಿ ಬೆಳೆ ವಿಮೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದು, ಅದನ್ನು ನೇರವಾಗಿ ಸಹಕಾರಿ ಸಂಘಗಳ ಮೂಲಕ ರೈತರಿಗೆ ವಿತರಣೆ ಮಾಡದೆ ಕೆಸಿಸಿ ಬ್ಯಾಂಕಿನ ನಿರ್ದೇಶಕ ಮಂಡಳಿ ವಿನಾಕಾರಣ ಮೂಗು ತೂರಿಸುತ್ತಿದೆ ಎಂದು ಆರೋಪಿಸಿದರು. ಬೆಳೆ ವಿಮೆ ಹಣವನ್ನು ತುಂಬುವ ಸಂದರ್ಭದಲ್ಲಿ ಸಹಕಾರಿ ಸಂಘಗಳನ್ನು ಬಳಸಿಕೊಂಡ ಕೆಸಿಸಿ ಬ್ಯಾಂಕ್ ಈಗ ಬಿಡುಗಡೆಯಾಗಿರುವ ಪರಿಹಾರದ ಹಣವನ್ನು ಸಹಕಾರಿ ಸಂಘಗಳ ಮೂಲಕ ರೈತರಿಗೆ ವಿತರಿಸದೆ ಅಮಾನತ್ ಖಾತೆಯಲ್ಲಿ ಇರಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೆ ಕಳಪೆ ಗುಣಮಟ್ಟದ ಹತ್ತಿ ಬೀಜ ಬಿತ್ತಿ ಸಮರ್ಪಕ ಫಸಲು ಬಾರದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾಲ್ಲೂಕಿನಲ್ಲಿ ಸುಮಾರು ೨೧ಸಾವಿರಕ್ಕೂ ಹೆಚ್ಚು ರೈತರಿದ್ದು, ಸ್ಥಳೀಯ ಕೆಸಿಸಿ ಬ್ಯಾಂಕ್‌ನ ನಾಲ್ಕು ಜನ ಸಿಬ್ಬಂದಿಗಳಿಂದ ವಿಮೆ ಹಣವನ್ನು ಬಟವಡೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ರೈತರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಉಪವಿಭಾಗಾಧಿಕಾರಿ ಮಹಮ್ಮದ್‌ ಜುಬೈರ್‌ ಹಾಗೂ ತಹಶೀಲ್ದಾರ್‌ ಶಿವಶಂಕರ ನಾಯಕ ಭೇಟಿ ನೀಡಿ ಬ್ಯಾಂಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಧರಣಿ ಯಲ್ಲಿ  ಚಿಕ್ಕಪ್ಪ ಛತ್ರದ, ಬಸವರಾಜ ಸಂಕಣ್ಣನವರ, ದಿಲೀಪ್‌ಕುಮಾರ ಮೇಗಳಮನಿ, ಚನ್ನವೀರಗೌಡ ಬುಡ್ಡನಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಶಿವಪ್ಪ ಮರಡಿ, ಮಂಜು ತೋಟದ, ಶಂಭಣ್ಣ ಬಿದರಿ, ಶಿವಪ್ಪ ಬಣಕಾರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.