ADVERTISEMENT

ಬೆಳೆ ನಷ್ಟಕ್ಕೆ ಪರಿಹಾರ ಧನ ಮಂಜೂರು: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 5:41 IST
Last Updated 25 ಜೂನ್ 2013, 5:41 IST

ಹಾನಗಲ್: ಬೆಳೆ ನಷ್ಟ ಅನುಭವಿಸಿದ ರೈತರಿಗೆ ಬೆಳೆವಿಮೆ ಪರಿಹಾರ ಬಿಡುಗಡೆ ಪ್ರಕ್ರಿಯೆಗೆ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿದ್ದು, ರೈತರಿಗೆ ಪರಿಹಾರದ ಧನ ಮಂಜೂರಾಗಿದೆ ಎಂದು ಶಾಸಕ ಮನೋಹರ ತಹಶೀಲ್ದಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಕೃಷ್ಣ ಭೈರೇಗೌಡ, ಅಧಿಕಾರ ಸ್ವೀಕರಿಸಿದ ತಕ್ಷಣವೇ ಬೆಳೆವಿಮೆ ಪರಿಹಾರ ಧನ ಬಿಡುಗಡೆಗೊಳ್ಳಲು ಚಾಲನೆ ನೀಡಿದರು ಎಂದರು.

ಹಿಂದಿನ ಬಿಜೆಪಿ ಸರ್ಕಾರ ಜಿಐಸಿಗೆ ಮಾಹಿತಿ ನೀಡುವಲ್ಲಿ ಹಾಗೂ ಜಿಐಸಿಯ ತಾಂತ್ರಿಕ ದೋಷದಿಂದ ಬೆಳೆವಿಮೆ ಪರಿಹಾರ ಧನ ರೈತರ ಕೈತಲುಪಲು ವಿಳಂಬವಾಗಿತ್ತು. ಈ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಸರಿಪಡಿಸಿತು ಎಂದರು.

ರಾಜ್ಯದ ಅತಿ ಸಣ್ಣ ಮತ್ತು ಸಣ್ಣ ರೈತರಿಗೆ  ಕೇಂದ್ರ ಸರ್ಕಾರ 322 ಕೋಟಿ ರೂಪಾಯಿ ನೀಡಿರುವ ಬರಗಾಲ ಪರಿಹಾರ ಅನುದಾನದಲ್ಲಿ ತಾಲ್ಲೂಕಿನ ರೈತರಿಗೆ 70 ಲಕ್ಷ  ಬಿಡುಗಡೆಗೊಂಡಿದ್ದು, ಈ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದರು.

ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲಾ ಪಂಚಾಯ್ತಿಗೆ ರೂ 100 ಕೋಟಿ ಬಿಡುಗಡೆಯಾಗಿದೆ. ಡೆಂಗೆ ಜ್ವರ ಬಾಧಿತರಿಗೆ ಶುಶ್ರೂಷೆ ನೀಡಲು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಅಭಾವ ತಲೆತೋರದಂತೆ, ಪಡಿತರ ಚೀಟಿಗಳನ್ನು ಸಮರ್ಪಕವಾಗಿ ವಿತರಿಸುವ ಕುರಿತು ಈಗಾಗಲೇ ಅವಶ್ಯಕ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಬಸಾಪುರ ಏತ ನೀರಾವರಿ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಅಲ್ಲದೆ, ತುಂಗಾ ಮೇಲ್ದಂಡೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಹಾನಗಲ್‌ನಲ್ಲಿ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗೊಂದಿ ಗ್ರಾಮದ ವರದಾ ನದಿಯ ನೀರನ್ನು ಆನೆಕೆರೆಗೆ ಹರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಹಶೀಲ್ದಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನಾಗೇಶ ಪಡೆಪ್ಪನವರ, ಸಿ.ಎಸ್.ಬಡಿಗೇರ, ವೀರೇಶ ಬೈಲವಾಳ, ಆರ್.ಎಸ್.ಪಾಟೀಲ ಹಾಜರಿದ್ದರು.

`ಬೆಳೆ ವಿಮೆ ನೀತಿ ಬದಲಿಸಿ'
ಹಾನಗಲ್: ಬೆಳೆ ವಿಮೆ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ತರುವಂತೆ ಒತ್ತಾಯಿಸಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಪತ್ರ ಬರೆಯಲಾಗಿದ್ದು, ಬೆಳೆ ಹಾನಿಗೆ ಪ್ರತಿವರ್ಷ ವಿಮಾ ಪರಿಹಾರ ಸಿಗಬೇಕು ಎಂದು ಎಂ.ಸಿ. ಉದಾಸಿ ಹೇಳಿದರು.

ರಾಜ್ಯದಲ್ಲಿ ಬೆಳೆವಿಮೆಗೆ ಸಂಬಂಧಿಸಿದಂತೆ ಹೊಸ ನಿಯಮ ಅಳವಡಿಸಿ ರೈತರಿಗೆ ಪರಿಹಾರ ಧನ ನೀಡಬೇಕು. ಐದಾರು ವರ್ಷಗಳ ಬೆಳೆ ಪರಿಸ್ಥಿತಿ ಆಧರಿಸಿ ಬೆಳೆವಿಮೆ ಪರಿಹಾರದ ಪ್ರಮಾಣ ನಿರ್ಧರಿಸುವುದು ಸರಿಯಾದ ಕ್ರಮವಲ್ಲ. ರೈತರು ಪ್ರತಿ ವರ್ಷವೂ ಕಂಪನಿ ನಿರ್ಧರಿಸಿದ ವಿಮಾ ಮೊತ್ತ  ಭರಿಸಿರುತ್ತಾರೆ. ಆದ್ದರಿಂದ ಆಯಾ ವರ್ಷದ ಬೆಳೆ ಹಾನಿ ಆಧರಿಸಿಯೇ ಬೆಳೆ ನಷ್ಟಕ್ಕೆ ವಿಮೆ ಪರಿಹಾರ ಒದಗಿಸಬೇಕು ಎಂದು ವಿವರಿಸಿದರು.

ಈ ನಿಟ್ಟಿನಲ್ಲಿ ಕೃಷಿ ಸಚಿವರು ಹೊಸ ನಿಯಮಗಳನ್ನು ರೂಪಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ರೈತರು 10 ವರ್ಷಗಳ ಕಾಲ ನಿರಂತರ ಬೆಳೆ ನಷ್ಟ ಅನುಭವಿಸಿದರೂ, ಎರಡು-ಮೂರು ವರ್ಷ ಮಾತ್ರ ಅಲ್ಪ-ಸ್ವಲ್ಪ ವಿಮಾ ಪರಿಹಾರ ದೊರೆಯುವ ಸ್ಥಿತಿ ಈಗಿರುವ ನಿಯಮಾವಳಿಯಲ್ಲಿದೆ. ಇದು ಬದಲಾಗುವ ಅಗತ್ಯತೆವಿದೆ ಎಂದು ಉದಾಸಿ ತಿಳಿಸಿದರು.

ಹಾನಗಲ್ ತಾಲ್ಲೂಕಿನ ಬಮ್ಮನಹಳ್ಳಿ ಹೋಬಳಿಗೆ ಮಳೆಯಾಶ್ರಿತ ಹಾಗೂ ನೀರಾವರಿಗೆ ಬೆಳೆವಿಮೆ ದೊರೆತಿದೆ. ಆದರೆ ಅಕ್ಕಿಆಲೂರು ಹಾಗೂ ಹಾನಗಲ್ ಹೋಬಳಿಯಲ್ಲಿ ಕೇವಲ ಮಳೆಯಾಶ್ರಿತ ಭತ್ತಕ್ಕೆ ವಿಮಾ ಪರಿಹಾರ ದೊರೆತಿದೆ. ಅಕ್ಕಿಆಲೂರ ಹಾಗೂ ಹಾನಗಲ್ ಹೋಬಳಿಗೂ ನೀರಾವರಿ ಬೆಳೆ ಪರಿಹಾರ ದೊರಕುವಂತೆ ಗಮನಹರಿಸಲು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.