ADVERTISEMENT

ಬೊಮ್ಮಾಯಿ ತವರಿನಲ್ಲಿ ಸಿಗುತ್ತಿಲ್ಲ ಜೀವಜಲ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2012, 8:30 IST
Last Updated 30 ಏಪ್ರಿಲ್ 2012, 8:30 IST
ಬೊಮ್ಮಾಯಿ ತವರಿನಲ್ಲಿ ಸಿಗುತ್ತಿಲ್ಲ ಜೀವಜಲ
ಬೊಮ್ಮಾಯಿ ತವರಿನಲ್ಲಿ ಸಿಗುತ್ತಿಲ್ಲ ಜೀವಜಲ   

ಶಿಗ್ಗಾವಿ: ಮಲೆನಾಡು ಗಡಿಪ್ರದೇಶಕ್ಕೆ ಹೊಂದಿಕೊಂಡ ಹಾಗೂ ಜಲ ಸಂಪನ್ಮೂಲ ಸಚಿವರ ತವರು ಜಿಲ್ಲೆಯಾದ ಶಿಗ್ಗಾವಿ ತಾಲ್ಲೂಕು ಬರದ ಬವಣೆಗೆ ಸಿಕ್ಕು ನಲುಗಿ ಹೋಗಿದೆ. ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶಗಳನ್ನು ಘೋಷಿಸಿದ ಮೊದಲ ಪಟ್ಟಿಯಲ್ಲಿ ಬರದ ಹಣೆ ಪಟ್ಟಿ ಹೊತ್ತುಕೊಂಡಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳು ಕುಡಿಯುವ ನೀರಿನ ತೊಂದರೆಯಿಂದ ಬಳಲುತ್ತಿವೆ. ಮಹಿಳೆಯರು, ಮಕ್ಕಳು ನೀರಿಗಾಗಿ ಕೊಡಗಳನ್ನು ಹೊತ್ತು ನಿತ್ಯ ಅಲೆಯುವುದು ಅನಿವಾರ್ಯವಾಗಿದೆ.

ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಗೊಳಗಾದ ತಾಲ್ಲೂಕಿನ ರೈತರು, ಈ ಬಾರಿ ಮಳೆ ಇಲ್ಲದೇ ಕಂಗಾಲಾಗಿದ್ದಾರೆ. ನೀರಿನ ಮೂಲಗಳಾದ ಕೆರೆ, ಹಳ್ಳಗಳು ಬತ್ತಿ ಹೋಗಿವೆ. ಅಂತರ್ಜಲ ಕಡಿಮೆಯಾಗಿ ಕೊಳವೆ ಬಾವಿಗಳ ನೀರು ಪಾತಾಳಕ್ಕೆ ಇಳಿದಿದೆ. ತಾಲ್ಲೂಕಿನ ಯಾವುದೇ ಗ್ರಾಮಕ್ಕೆ ಹೋದರೂ ಕೊಡಗಳ ಸರದಿಯೇ ಸ್ವಾಗತಿಸುತ್ತವೆ.

ಕೆಲವು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿದ್ದರೂ ಸರಿಯಾಗಿ ಬಳಕೆ ಮಾಡುವಲ್ಲಿ ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ, ಹೊತ್ನಹಳ್ಳಿ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಇಲ್ಲಿ ನೂರಾರು ಜನ ಖಾಲಿ ಕೊಡಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿರುವುದೇ ಇದಕ್ಕೆ ಸಾಕ್ಷಿ.

ತಾಲ್ಲೂಕಿನ ಜೋಡಲಗಟ್ಟಿ, ದುಂಡಿಸಿ, ತಡಸ, ಅಂದಗಿ, ಹುಲಗೂರ ಹಾಗೂ ಚಂದಾಪುರ ಗ್ರಾಮಗಳು ಸೇರಿದಂತೆ ಅನೇಕ ಗ್ರಾಮದಲ್ಲಿ ಕುಡಿಯುವ ನೀರಿದ್ದರೂ ಸಹ ಅದರ ನಿರ್ವಹಣೆ ಸರಿಯಾಗಿಲ್ಲ. ಇನ್ನೂ ಕೆಲವು ಗ್ರಾಮೀಣ ಪ್ರದೇಶದಲ್ಲಿ ಅನಗತ್ಯವಾಗಿ ನಿತ್ಯ ಸಾಕಷ್ಟು ನೀರು ಪೋಲಾಗುತ್ತಿದೆ. ಅದನ್ನು ತಡೆಯಲು ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. 

ಬಂಕಾಪುರ ಪಟ್ಟಣದ ಪುರಸಭೆ 22:75ರ ಯೋಜನೆಯಡಿಯಲ್ಲಿ ಪಟ್ಟಣದ ಸುಮಾರು 35ಜನ ಎಸ್‌ಸಿ, ಎಸ್‌ಟಿ ಜನಾಂಗದ ಫಲಾನುಭವಿಗಳಿಗೆ ನೀರಿನ ನಲ್ಲಿಗಳ ಜೋಡಣೆಗಾಗಿ ಸರ್ಕಾರ ಸುಮಾರು 85ಸಾವಿರ ರೂ.ಗಳ ಅನುದಾನವನ್ನು ಸುಮಾರು ಏಳು ತಿಂಗಳ ಹಿಂದೆ ಬಿಡುಗಡೆ ಮಾಡಿದೆ. ಆದರೆ ಅದರ ಕಾರ್ಯನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು ಕೇವಲ 12 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈವರೆಗೆ ಸರಿಯಾಗಿ ನೀರಿನ ನಳಗಳ ಜೋಡಣೆ ಕಾರ್ಯ ಮಾಡಿಲ್ಲ ಎಂದು ಇತ್ತೀಚೆಗೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದು.

ತಾಲ್ಲೂಕಿನಲ್ಲಿ ಒಟ್ಟು 37.515 ಹೆಕ್ಟೇರ್ ಭೂಪ್ರದೇಶ ಸಾಗುವಳಿ ಕ್ಷೇತ್ರ ಹೊಂದಿದೆ. ಅದರಲ್ಲಿ 2.5ಸಾವಿರ ಹೆಕ್ಟೇರ್ ಭೂಪ್ರದೇಶ ನೀರಾವರಿ ಕ್ಷೇತ್ರ ಹೊಂದಿದ್ದು, ಉಳಿದ 35.015 ಹೆಕ್ಟೇರ್ ಭೂಪ್ರದೇಶ ವನ ಬೇಸಾಯಿ (ಮಳೆಯಾಶ್ರಿತ) ಅವಲಂಭಿಸಿದೆ. ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ(ಎನ್‌ಆರ್‌ಜಿ) 2011-12ನೇ ಸಾಲಿನಲ್ಲಿ ಮೂರು ಹಂತದಲ್ಲಿ ಸುಮಾರು 6.35ಕೋಟಿ ಅನುದಾನ ಬಿಡುಗಡೆ ಮಾಡಲಾದೆ. ತಾಲ್ಲೂಕಿನ ಒಟ್ಟು 95ಗ್ರಾಮಗಳಲ್ಲಿ ರಸ್ತೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕೆಲವು ಗ್ರಾಮದಲ್ಲಿ ಶಾಲಾ ಕಂಪೌಡಗಳು, ಕೆರೆ ಅಭಿವೃದ್ಧಿ, ತೋಟಗಾರಿಕೆ ಕಾಮಗಾರಿಗಳು ಅದರಲ್ಲಿ ಪ್ರಮುಖವಾಗಿವೆ ಎಂದು ತಾಪಂ. ಅಧಿಕಾರಿ ರೇವಣ್ಣಪ್ಪ ತಿಳಿಸಿದರು.

ಬರ ಪರಿಹಾರ ಯೋಜನೆಯಡಿಯಲ್ಲಿ ಸರ್ಕಾರದಿಂದ ತಾಲ್ಲೂಕಿಗೆ ಸುಮಾರು 50ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಕಾಮಗಾರಗಳ ದೊಡ್ಡ ಪಟ್ಟಿಯೆ ಇದೆ ಎನ್ನುವ ಅಧಿಕಾರಿಗಳು ಆ ಪಟ್ಟಿಯನ್ನು ಮಾತ್ರ ನೀಡುತ್ತಿಲ್ಲ. ಕಾಮಗಾರಿಗಳ ಪಟ್ಟಿ ದೊಡ್ಡದಿದ್ದರೂ ಈವರೆಗೆ ಯಾವುದೇ ಕಾಮಗಾರಿ ಆರಂಭಿಸಿಲ್ಲ ಎಂದು ಜಿಪಂ. ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಸಿ.ವಾರದ ಹೇಳುತ್ತಾರೆ.

ರೈತರ ಆಗ್ರಹ: ತಾಲ್ಲೂಕಿನ ಬಂಕಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹೊಂಡ, ಕೆರೆ, ಭಾವಿಗಳಲ್ಲಿನ ನೀರು ಬತ್ತಿ ಹೋಗಿದೆ. ಹೀಗಾಗಿ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕೆಂದು ರೈತರಾದ ವಿರೂಪಾಕ್ಷಪ್ಪ ಅಂಗಡಿ, ನಾಗಣ್ಣ ಹತ್ತಿ ಆಗ್ರಹಿಸಿದ್ದಾರೆ.

ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ
ಉದ್ಯೋಗ ಖಾತ್ರಿಯೋಜನೆಯಡಿ ಸಾಕಷ್ಟು ಉದ್ಯೋಗ ಆರಂಭಿಸಲಾಗಿದೆ. ಜನರೇ ಉದ್ಯೋಗಕ್ಕೆ ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಗ್ರಾಮದಲ್ಲಿ ಉದ್ಯೋಗ ಖಾತ್ರಿಯ ಯಾವುದೇ ಕಾಮಗಾರಿ ನಡೆಯದ ಕಾರಣ ಜನರು ಉದ್ಯೋಗ ಅರಸಿ ಬೇರೆ ಕಡೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ದುಂಡಿಸಿತಂಡಾ ಹಾಗೂ ಕಮಲಾಪುರ ತಾಂಡಾ ಸೇರಿದಂತೆ ಹಲವು ಗ್ರಾಮಗಳಲ್ಲಿ ನೂರಾರು ಜನರು ಗುಳೇ ಹೋಗಿದ್ದಾರೆ. ಜಾನುವಾರುಗಳಿಗೆ ಅಗತ್ಯ ಮೇವಿನ ಸಂಗ್ರಹವಿಲ್ಲದೇ ಜನರು ಅವುಗಳನ್ನು ಸಾಕಲಾಗದೇ ಮಾರಾಟ ಮಾಡಲು ಮುಂದಾ ಗಿದ್ದಾರೆ. ಪ್ರತಿ ವಾರದ ದನಗಳ ಸಂತೆಯಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಇದಕ್ಕೆ ಜ್ವಲಂತ ಉದಾಹರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.