ADVERTISEMENT

ಭರತನಾಟ್ಯದಲ್ಲಿ ಗ್ರಾಮೀಣ ಪ್ರತಿಭೆ ಸಾಧನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 8:50 IST
Last Updated 12 ಡಿಸೆಂಬರ್ 2012, 8:50 IST
ಭರತನಾಟ್ಯದಲ್ಲಿ ಗ್ರಾಮೀಣ ಪ್ರತಿಭೆ ಸಾಧನೆ
ಭರತನಾಟ್ಯದಲ್ಲಿ ಗ್ರಾಮೀಣ ಪ್ರತಿಭೆ ಸಾಧನೆ   

                                
ರಟ್ಟೀಹಳ್ಳಿ: ಭರತನಾಟ್ಯ ಅತ್ಯಂತ ಕಠಿಣ ಕಲೆ ಎಂದು ಪರಿಗಣಿಸಲಾಗಿದೆ. ಇಲ್ಲಿ ಮಾಡುವ ಸಾಧನೆಗೆ ಶ್ರಮ, ಆಂಗಿಕ ಮತ್ತು ಭಾವನಾತ್ಮ ಅಭಿನಯ ಅಗತ್ಯ. ಇಂತಹ ಒಂದು ಕಠಿಣ ಕಲೆಯಲ್ಲಿ ಕಣವಿಸಿದ್ಗೇರಿ ಗ್ರಾಮದ ಸಹೋದರಿಯರಾದ ಪವಿತ್ರ ಪಾಟೀಲ ಮತ್ತು ಪಲ್ಲವಿ ಪಾಟೀಲ ಅಪೂರ್ವ ಸಾಧನೆ ಮಾಡಿದ್ದಾರೆ.

ಮೂಲತಃ ಕಣವಿಸಿದ್ಗೇರಿ ಗ್ರಾಮದವರಾದ ಪವಿತ್ರ ಮತ್ತು ಪಲ್ಲವಿ, ಪ್ರಸ್ತುತ ರಾಣೆಬೆನ್ನೂರಿನಲ್ಲಿ ಪವಿತ್ರ 7 ನೇ ತರಗತಿ ಮತ್ತು ಪಲ್ಲವಿ 6 ನೇ ತರಗತಿ ಓದುತ್ತಿದ್ದಾರೆ. ಕೆ.ಜಿ. ಹಂಸಬಾವಿ ಎನ್ನುವರಲ್ಲಿ ಭರತನಾಟ್ಯ ಶಿಕ್ಷಣ ಪಡೆಯುತ್ತಿದ್ದು, ಅತ್ಯಂತ ಶ್ರೆದ್ಧೆಯಿಂದ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ. ಭರತನಾಟ್ಯ ಪ್ರದರ್ಶನ ವೇಳೆ ಆಂಗಿಕ ಮತ್ತು ಭಾವನಾತ್ಮಕತೆಯನ್ನು ಸಂಪೂರ್ಣವಾಗಿ ಪ್ರದರ್ಶಿಸುವ ಇವರು ಪ್ರೇಕ್ಷಕರ ಮನಸೂರೆಗೊಳ್ಳುತ್ತಾರೆ. ಈಗಾಗಲೇ ಹಲವು ಕಡೆ ಪ್ರದರ್ಶನ ನೀಡಿದ ಸಹೋದರಿಯರು ಭರತನಾಟ್ಯದಲ್ಲಿ ಸಾಧನೆ ಮಾಡಿದ ಹರಿಯ ಕಲಾವಿದರಿಂದಲೂ ಸೈ ಎನಿಸಿಕೊಂಡಿದ್ದಾರೆ. ಸಹೋದರಿಯರ ನಾಟ್ಯ ನೋಡಿದ ಗಣ್ಯರು ಗ್ರಾಮೀಣ ಪ್ರತಿಭೆಗಳನ್ನು ಕಂಡು ಬೆರಗಾಗಿದ್ದಾರೆ. ಸಹೋದರಿಯರ ಭರತನಾಟ್ಯ ಕಲೆಯನ್ನು ಮೆಚ್ಚಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಪವಿತ್ರ ಹಾಗೂ ಪಲ್ಲವಿ ಅವರ ಸಾಧನೆಯ ಹಿಂದೆ ಅವರ ಪಾಲಕರು ಅಪಾರ ಶ್ರಮ ವಹಿಸಿದ್ದಾರೆ. ಮಕ್ಕಳ ಅಭಿರುಚಿಗೆ ತಕ್ಕಂತೆ  ಅವರನ್ನು ಭರತನಾಟ್ಯ ಕಲೆಯಲ್ಲಿ ಕರಗತರಾಗುವಂತೆ ಪ್ರೋತ್ಸಾಹ ನೀಡಿದ್ದಾರೆ.

`ನಮ್ಮ ಈ ಸಾಧನೆಗೆ ನಮ್ಮ ತಂದೆ-ತಾಯಿಗಳು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ನಮ್ಮ ಓದಿಗೆ ತೊಂದರೆಯಾಗದಂತೆ ನಾವೂ ಕೂಡಾ ಭರತನಾಟ್ಯ ಕಲೆಯಲ್ಲಿ ತಲ್ಲಿನರಾಗಿದ್ದೇವೆ.

ಸಾಂಪ್ರದಾಯಿಕ ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಈ ಸಹೋದರಿಯರ ಪ್ರಯತ್ನ ಮೆಚ್ಚುವಂಥದ್ದೆ. ಈ ಬಾಲ ಪ್ರತಿಭೆಗಳು ಇನ್ನೂ ಬೆಳೆದು ನಾಡಿನ ಕಲೆಯನ್ನು ಶ್ರೀಮಂತಗೊಳಿಸಲಿ ಎಂಬುದು ಎಲ್ಲರ ಆಶಯ.
ವಿನಾಯಕ ಭೀಮಪ್ಪನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.