ADVERTISEMENT

`ಭವಿಷ್ಯತ್ವ ನಿರ್ಮಾಣಕ್ಕಾಗಿ ತಾಂತ್ರಿಕ ಶಿಕ್ಷಣ ಅವಶ್ಯ'

ಹತ್ತು ಕಾಲೇಜುಗಳಿಗೆ ರೂ 50ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 9:43 IST
Last Updated 18 ಡಿಸೆಂಬರ್ 2012, 9:43 IST

ಶಿಗ್ಗಾವಿ: ರಾಜ್ಯದಲ್ಲಿ ಸುಮಾರು ಹತ್ತು ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜುಗಳನ್ನು ಮಂಜುರಾತಿ ಮಾಡುವ ಮೂಲಕ ಸುಮಾರು ರೂ 50ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಅದರ ಪ್ರಯೋಜನ ಈ ಭಾಗದ ವಿದ್ಯಾರ್ಥಿಗಳು ಪಡೆಯಬೇಕು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಗಂಜೀಗಟ್ಟಿ ಗ್ರಾಮದಲ್ಲಿ ನೂತವಾಗಿ ನಿರ್ಮಿಸಿದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡವನ್ನು  ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಶಿಗ್ಗಾವಿ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ನೂತನ ಕಟ್ಟಡಕ್ಕೆ 5 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ ಈಗಾಗಲೆ ಪ್ರಥಮ ಕಂತು ಮೂರು ಕೋಟಿ ರೂಪಾಯಿ ನೀಡಲಾಗಿದೆ ಎಂದರು.

ಸಿವಿಲ್ ಎಂಜನಿಯರ್ ತರಬೇತಿಗಿಂತ ಐಟಿಐ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಯೋಗಿಕ ಜ್ಞಾನ ನೀಡಲಾಗಿರುತ್ತದೆ. ಹೀಗಾಗಿ  ವಿದ್ಯಾರ್ಥಿಗಳ ಭವಿಷ್ಯತ್ವ ನಿರ್ಮಾಣ ಮಾಡುವಲ್ಲಿ ತಾಂತ್ರಿಕ ಶಿಕ್ಷಣ ಅವಶ್ಯವಾಗಿದೆ ಎಂದರು.

ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ದೇಶದಲ್ಲಿ ಪ್ರಜ್ಞಾವಂತರು ಅಧಿಕವಾಗಿದ್ದಾರೆ.  ಪ್ರತಿಯೊಂದು ರಂಗದಲ್ಲಿ ಭಾರತೀಯರೇ ಹೆಚ್ಚಿನ ಮೇಲುಗೈ ಸಾಧಿಸುವುದನ್ನು ಕಾಣುತ್ತೇವೆ. ಅದಕ್ಕೆ ಇಂತಹ ತಾಂತ್ರಿಕ ಶಿಕ್ಷಣದ ಪ್ರಭಾವವೇ ಕಾರಣ ಎಂದರು. ಯುವಶಕ್ತಿ ಈ ನಾಡಿನ ಶಕ್ತಿ ಎಂಬಂತೆ ಯುವಕರು ತಮ್ಮ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.

ಜಿಪಂ. ಸದಸ್ಯರಾದ ಸಿ.ಎಸ್. ಪಾಟೀಲ, ಬಿ.ಟಿ. ಇನಾಮತಿ, ಶಶಿಧರ ಹೊನ್ನಣ್ಣನವರ, ಸರೋಜಾ ಆಡಿನ, ಶೋಭಾ ನಿಸೀಮಗೌಡ್ರ, ಗ್ರಾ.ಪಂ. ಅಧ್ಯಕ್ಷ ಹನುಮಂತಪ್ಪ ದೇವಣ್ಣವರ, ತಾ.ಪಂ. ಅಧ್ಯಕ್ಷೆ ಉಷಾ ಬಿಳಿಕುದರಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಎಸ್.ಕೆ. ಅಕ್ಕಿ, ಎಪಿಎಂಸಿ ಸದಸ್ಯ ಶಿವಾನಂದ ಮ್ಯಾಗೇರಿ, ಪುರಸಭೆ ಅಧ್ಯಕ್ಷ ರಾಮು ಪೂಜಾರ, ಸಿ.ಎನ್. ಶಿಗ್ಗಾಂವಕರ, ಕೆ.ವಿ. ಹಂಚಿನಮನಿ, ಐ.ಎಂ. ಮೂಡಲಗಿ, ತಾ.ಪಂ. ಸದಸ್ಯರಾದ ತಿಪ್ಪಣ್ಣ ಸಾತಣ್ಣವರ, ಸುಜಾತಾ ಕಲಕಟ್ಟಿ, ನಿಂಗಪ್ಪ ಹರಿಜನ ಮತ್ತಿತರರು ಉಪಸ್ಥಿತರಿದ್ದರು.

ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ ಸ್ವಾಗತಿಸಿದರು. ಪ್ರಾಚಾರ್ಯ ಆರ್.ಡಿ. ಮೊಕಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ. ಸಾತಗೊಂಡ ನಿರೂಪಿಸಿದರು. ಟಿ.ಸಿ. ಚೌವಾಣ ವಂದಿಸಿದರು.

`ಜಾತ್ರಾ ಮಹೋತ್ಸವ'
ಹಾವೇರಿ
: ಇಲ್ಲಿನ ದಾನಮ್ಮದೇವಿಯ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗತು.ಜಾತ್ರೆಯ ಮೊದಲ ದಿನ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ  ಶಿಬಿರದಲ್ಲಿ ಶ್ರವಣ ತಜ್ಞ ಮೃತ್ಯುಂಜಯ ತುರಕಾಣಿ, ಡಾ. ಭೀಮಕ್ಕನವರ, ಡಾ. ಎಸ್.ಎಸ್. ಕಮ್ಮಾರ ರೋಗಿಗಳನ್ನು ತಪಾಸಣೆ ಮಾಡಿದರು.

ಜಾತ್ರಾ ಮಹೋತ್ಸವದ ಎರಡನೇ ದಿನ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಬೆಳಗಾವಿ ನಾಗನೂರು ರುದ್ರಾಕ್ಷಿ  ಕುಮಾರ ಶ್ರೀಗಳು, ಹರಸೂರ ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶ್ರೀಗಳು, ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವ ವಹಿಸಿದ್ದರು.

ಶಿಕ್ಷಕ ಹನುಮಂತಗೌಡ ಗೊಲ್ಲರ ಉಪನ್ಯಾಸ ನೀಡಿದರು. ಮಾಜಿ ಸಚಿವ ಕೆ.ಬಿ. ಕೋಳಿವಾಡ, ವಿಧಾನಸಭೆ ಮಾಜಿ ಸಭಾಪತಿ ಬಿ.ಜಿ. ಬಣಕಾರ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಡಾ. ಸತೀಶ ದಂಪತಿ, ಡಾ. ಬಿ.ಎಂ. ಕುಲಕರ್ಣಿ, ಡಾ. ಎಂ.ಎಲ್. ಪಾಟೀಲ, ಡಾ. ಎಸ್.ಎಸ್. ಕಮ್ಮಾರ, ಆರ್.ಎಸ್. ಪಾಟೀಲ, ಕಳಕಪ್ಪ ತುಪ್ಪದ, ಜಗದೀಶ ಕೂಡ್ಲಪ್ಪನವರ ದಂಪತಿಗಳನ್ನು ಹಾಗೂ ಕಲಾ ಮಂದಿರಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಮೂರನೇ ದಿನ ಶ್ರೀದೇವಿಯ ಪಲ್ಲಕ್ಕಿ ಮಹೋತ್ಸವ ಜರುಗಿತು. ಕೂಡಲದ ಮಹೇಶ್ವ ದೇವರು ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಟ್ರಸ್ಟ್ ಸಮಿತಿ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಅಧ್ಯಕ್ಷತೆ ವಹಿಸಿದ್ದರು.

ಜಾತ್ರಾ ಸಮಿತಿ ಗೌರವಾಧ್ಯಕ್ಷ ರಾಜಶೇಖರ ಮಾಗಾವಿ, ಅಧ್ಯಕ್ಷ ಅಂದನಪ್ಪ ಗಡಾದ, ಗಂಗಾಧರ ಅಂಗಡಿ, ಸುರೇಶಬಾಬು ಯಳಮಲ್ಲಿ ವಿಶ್ವನಾಥ ಹಂದ್ರಾಳ, ಮಲ್ಲಿಕಾರ್ಜುನ ಸಾತೇನಹಳ್ಳಿ, ಶಿವಯೋಗಿ ಮುದ್ದಿ, ಶಿವಬಸಪ್ಪ ಹಳಗಣ್ಣನವರ, ಶಿವಬಸಪ್ಪ ಮುದ್ದಿ, ಶಿವಯೋಗಿ ಬೆನ್ನೂರು, ಸಿ.ಜಿ. ತೋಟಣ್ಣನವರ, ಶಿವಯೋಗಿ ಅಂಗಡಿ, ಗಂಗಣ್ಣ ಮಾಸೂರು ಸೇರಿದಂತೆ ಅನೇಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಶಿವಬಸಪ್ಪ ಹತ್ತಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಗೇರಿ ನಿರೂಪಿಸಿದರು. ಸಿ.ಎಸ್. ಮರಳಿಹಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.