ADVERTISEMENT

ಮಂತ್ರಿ ಸ್ಥಾನವೂ ಇಲ್ಲ, ಬಜೆಟ್‌ನಲ್ಲಿಯೂ ಏನೂ ಇಲ್ಲ!

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 11:09 IST
Last Updated 13 ಜುಲೈ 2013, 11:09 IST

ಹಾವೇರಿ: `ಪ್ರಥಮ ಚುಂಬನಂ ದಂತ ಬಗ್ನಂ' ಎನ್ನುವಂತೆ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ವಿಶೇಷ ಕೊಡುಗೆಗಳಿಲ್ಲದೇ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.

ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಕಾಂಗ್ರೆಸ್‌ಗೆ ನಿರೀಕ್ಷೆ ಮೀರಿ ಬೆಂಬಲಿಸಿ, ಕಾಂಗ್ರೆಸ್ ಸರ್ಕಾರ ರಚನೆಗೆ ನಾಲ್ಕು ಜನ ಶಾಸಕರನ್ನು ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಸಚಿವ ಸ್ಥಾನ ನೀಡದೇ ನಿರಾಸೆ ಮೂಡಿಸಿತ್ತು.

ಬಜೆಟ್‌ನಲ್ಲಾದರೂ ಜಿಲ್ಲೆಯ ಪ್ರಮುಖ ಬೇಡಿಕೆಗಳಿಗೆ ಮನ್ನಣೆ ನೀಡಿ ಸಚಿವ ಸಂಪುಟದಲ್ಲಿ ಆಗಿರುವ ನಿರಾಶೆಯನ್ನು ಸರಿದೂಗಿಸಬೇಕು ಎಂಬ ಆಶಯ ಜಿಲ್ಲೆಯ ಜನರಲ್ಲಿತ್ತು.

ಶುಕ್ರವಾರ ಮಂಡನೆ ಮಾಡಿದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಯ ಯಾವುದೇ ಒಂದು ಪ್ರಮುಖ ಬೇಡಿಕೆಗೂ ಸ್ಪಂದಿಸಿಲ್ಲ. ಏನಾದರೂ ಹೊಸ ಘೋಷಣೆಗಳನ್ನು ಮಾಡಬಹುದಾಗಿತ್ತು. ಅದಾವುದನ್ನು ಮಾಡದೇ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯವಹಿಸುವ ಮೂಲಕ ಜಿಲ್ಲೆಯ ಜನರಿಗೆ ಎರಡನೇ ಬಾರಿ ಕಹಿ ಅನುಭವಿಸುವಂತೆ ಮಾಡಿದೆ.

ಸವಣೂರು ಏತ ನೀರಾವರಿ ಯೋಜನೆಗಳಲ್ಲಿ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ, ಆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವುದು, ಹಾವೇರಿ ನಗರಕ್ಕೆ 24*7 ಕುಡಿಯುವ ನೀರು ಪೂರೈಸುವ ಯೋಜನೆ, ತುಂಗಭದ್ರ ನದಿಯ ಮೇಲ್ದಂಡೆಯ ಉಪ ಕಣಿವೆ ಪ್ರದೇಶ ವ್ಯಾಪ್ತಿಯಲ್ಲಿ ಬ್ಯಾಡಗಿ, ರಾಣೆಬೆನ್ನೂರ ನಗರಕ್ಕೆ ಕುಡಿಯುವ ನೀರು ಯೋಜನೆ, ಒಳಚರಂಡಿ ವ್ಯವಸ್ಥೆ ಬಿಟ್ಟರೆ, ಹಾವೇರಿ ಜಿಲ್ಲೆಗೆ ಬೇರಾವುದೇ ಕೊಡುಗೆಯನ್ನು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿಲ್ಲ. ಜಿಲ್ಲೆಯ ಪ್ರಮುಖ ಬೇಡಿಕೆಗಳಾದ ವೈದ್ಯಕೀಯ ಕಾಲೇಜು ಸ್ಥಾಪನೆ, ಸರ್ವಜ್ಞ ಪ್ರಾಧಿಕಾರಕ್ಕೆ ಹಣಕಾಸು ನೆರವು, ಬ್ಯಾಡಗಿಯಲ್ಲಿ ಸ್ಪೈಸ್ ಪಾರ್ಕ್ ಸ್ಥಾಪನೆಯ ಕನಸು ಕನಸಾಗಿಯೇ ಉಳಿದಿದೆ.

ದೇವಿಹೊಸೂರು ಮೆಣಸಿನಕಾಯಿ ತಳಿ ಅಭಿವೃದ್ಧಿ ಕೇಂದ್ರಕ್ಕೆ ಮೂಲ ಸೌಕರ್ಯಕ್ಕೆ ಅನುದಾನ, ಜಾನಪದ ವಿಶ್ವವಿದ್ಯಾಲಯಕ್ಕೆ ಅನುದಾನ ಸಿಗಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ, ರಾಣೆಬೆನ್ನೂರು ಹತ್ತಿಯ ಮಾರುಕಟ್ಟೆಗೆ ವಿಶೇಷ ಪ್ಯಾಕೇಜ್ ಘೋಷಣೆ ಇಲ್ಲ. ತುಂಗಾಮೇಲ್ದಂಡೆ ಯೋಜನೆಗೆ ಹೆಚ್ಚಿನ ಹಣ ನೀಡಿಲ್ಲ ಎಂದು ರೈತ ಮುಖಂಡ ಶಿವಾನಂದ ಗುರುಮಠ ಹೇಳಿದ್ದಾರೆ.

ಕವಿ ಕುವೆಂಪು ಅವರ ಕುಪ್ಪಳಿ ಅಭಿವೃದ್ಧಿಗೊಳಿಸಿದಂತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಜಿಲೆಯ್ಲ ವಿ.ಕೃ.ಗೋಕಾಕ್‌ರ ತವರನ್ನು ಕಡೆಗಣಸಿದೆ. ಸಂತ ಶ್ರೇಷ್ಠ ಶಿಶುವಿನಹಾಳ ಶರೀಫರ ಶಿಶುವಿನಹಾಳ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ, ಕವಿ ಶ್ರೇಷ್ಠ ಸರ್ವಜ್ಞ ಪ್ರಾಧಿಕಾರಕ್ಕೆ ಹಣ ನೀಡುವ ಬಗ್ಗೆ ಪ್ರಸ್ತಾಪ ಇಲ್ಲದಾಗಿದೆ. 

ಕೊಟ್ಟದ್ದು ಇಲ್ಲದಾಯಿತು: ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಸರ್ವಜ್ಞ ಪ್ರಾಧಿಕಾರಕ್ಕೆ 2ಕೋಟಿ, ಕನಕದಾಸರ ಜನ್ಮಭೂಮಿ ಶಿಗ್ಗಾವಿ ತಾಲ್ಲೂಕಿನ ಬಾಡದಲ್ಲಿ ಯಾತ್ರಿಕರಿಗೆ ಮೂಲ ಸೌಲಭ್ಯ ಕಲ್ಪಿಸಲು 1ಕೋಟಿ ರೂ,ಗಳನ್ನು ಕೊಟ್ಟಿದ್ದರು. ಆದರೆ, ಇವುಗಳ ಬಗ್ಗೆ ಈ ಬೆಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದೆ ಜನರಲ್ಲಿ ಬೇಸರ ಮೂಡಿಸಿದೆ.

ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿಗೊಳಿಸಲು `ಕೃಷಿ ಬೆಲೆ ಆಯೋಗ' ರಚಿಸಲಾಗುವುದು. ರಾಜ್ಯದ 26 ಸದಾವಿರ ಕೆರೆಗಳ ಅಭಿವೃದ್ಧಿಗೆ `ಕೆರೆ ಅಭಿವೃದ್ಧಿ ಪ್ರಾಧಿಕಾರ' ರಚಿಸುವ ನಿರ್ಧಾರವು ಜಿಲ್ಲೆಯಲ್ಲಿ ಸಾವಿರಾರು ಕೆರೆಗಳಿಗೆ ಮರುಜೀವ ತರಲು ಸಹಾಯಕವಾಗಬಹುದೆಂಬ ಆಶಾಭಾವನೆ ಜನರಲ್ಲಿ ಸಮಾಧಾನ ಮೂಡಿಸಿದೆ.

ಉತ್ತರ ಕರ್ನಾಟಕದ ಹೆಬ್ಬಾಗಿಲು ಆದ ಹಾವೇರಿ ಜಿಲ್ಲೆಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಣೆಯಾದ ಯೋಜನೆಗಳನ್ನು ನೋಡಿದರೆ, ಮುಖ್ಯಮಂತ್ರಿಗಳು ಜಿಲ್ಲೆಯ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.

ಶಿಗ್ಗಾವಿ ಏತ ನೀರಾವರಿಯ ಎರಡನೇ ಹಂತದ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿರುವ 24 ಏತ ನೀರಾವರಿಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ಹಾಗೂ ಜಿಲ್ಲೆಯ ಪ್ರಮುಖ ಬೆಳೆಗಳಾದ ಗೋವಿನಜೋಳ ಹಾಗೂ ಹತ್ತಿ ಬೆಳೆಗಳನ್ನು ಆವರ್ತನಿಧಿಯಲ್ಲಿ ಸೇರಿಸದಿರುವುದು ರೈತ ಸಮಯದಾಯದಲ್ಲಿ ಬೇಸರ ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.