ADVERTISEMENT

ಮಕ್ಕಳಿಗೆ 60 ದಿನಗಳ ಕಾಲ ಆಹಾರ ನೀಡಿ ಆರೋಗ್ಯ ಸುಧಾರಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 7:50 IST
Last Updated 6 ಫೆಬ್ರುವರಿ 2012, 7:50 IST

ಹಾವೇರಿ: `ಜಿಲ್ಲೆಯಲ್ಲಿ ಒಟ್ಟು 3541 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಂತ ಮಕ್ಕಳ ಆರೋಗ್ಯ ಸುದಾರಣೆಗೆ ಇಲಾಖೆ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕ ಮಕ್ಕಳ ವಿಶೇಷ ಪಾಲನಾ ಕೇಂದ್ರಗಳನ್ನು ತೆರೆಯುತ್ತಿದೆ~ ಎಂದು ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಮಾಳೋದೆ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಹಾಗೂ ಹಾನಗಲ್ ತಾಲ್ಲೂಕು ಪಂಚಾಯಿತಿಗಳ ಆಶ್ರಯದಲ್ಲಿ ಭಾನುವಾರ ಹಾನಗಲ್ ತಾಲ್ಲೂಕು ಬಾಳಂಬೀಡ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜರುಗಿದ ತೀವ್ರ ಅಪೌಷ್ಠಿಕ ಮಕ್ಕಳ ವಿಶೇಷ ಪಾಲನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕಳೆದ ಸೆಪ್ಟೆಂಬರ್-2011 ತಿಂಗಳಲ್ಲಿ ಜಿಲ್ಲೆಯಾದ್ಯಂತ 4,225 ಮಕ್ಕಳು ಅಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದರು. ಅಂತ ಮಕ್ಕಳನ್ನು ಗುರುತಿಸಿ, ಪಾಲನಾ ಕೆಂದ್ರದಲ್ಲಿ ಅವರಿಗೆ ಪ್ರತಿ 2 ಗಂಟೆಗೊಮ್ಮೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ವಾರಕ್ಕೊಮ್ಮೆ ಆ ಮಕ್ಕಳ ತೂಕ ಪರೀಕ್ಷಿಸಿ, ಪೋಷಿಸಲಾಗುತ್ತಿದೆ ಎಂದರು.

ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಅದನ್ನು ಮನಗೊಂಡು ಇಲಾಖೆ ಅದೇ ರೀತಿ ಜಿಲ್ಲೆಯಲ್ಲಿ ಆಗದಂತೆ ತಡೆಯಲು 60 ದಿನಗಳ ಕಾಲ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ, ಆರೋಗ್ಯ ಸುದಾರಣೆಗೆ ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.

ಮಗು ಹುಟ್ಟಿದಾಗ ಅದರ ತೂಕ 2.9 ರಿಂದ 3.2 ಕೆಜಿ ಇರಬೇಕು. 1 ವರ್ಷದ ನಂತರ ಅದರ ತೂಕ 10 ಕೆ.ಜಿ. ಇರಬೇಕು. ಆ ತೂಕಕ್ಕೆ ಅನುಗುಣವಾಗಿ ಎತ್ತರ ಹಾಗೂ ವಯಸ್ಸು ಸರಿಯಿರಬೇಕು. ಇಲ್ಲದಿದ್ದಲ್ಲಿ ಅದು ಪೌಷ್ಠಿಕತೆಯಿಂದ ಬಳಲುತ್ತಿದೆ ಎಂದು ಹೇಳಬಹುದು ಎಂದು ತಿಳಿಸಿದರು.

ಹಾನಗಲ್ ತಾಲ್ಲೂಕು ಶಿಶುಅಭಿವೃದ್ಧಿ ಯೋಜನಾಧಿಕಾರಿ ಬಿ.ಆರ್.ಶೆಟ್ಟರ್ ಮಾತನಾಡಿ, ಭಾರತದಲ್ಲಿ 0-6 ವಯೋಮಾನದ ಶೇ 40 ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದು ದೇಶಕ್ಕ ಅವಮಾನ.

ಆದ್ದರಿಂದ ಅವರನ್ನು ಗುರಿತಿಸಿ ಆರೋಗ್ಯವಂತರನ್ನಾಗಿಸಲು ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಬಾಳಂಬೀಡ ಗ್ರಾಮದಲ್ಲಿ 14 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ವೃದ್ಧಿಗೆ ಸಹಕಾರ ನೀಡುವಂತೆ ತಿಳಿಸಿದರು.  ತಾ.ಪಂ. ಸದಸ್ಯ ಮಹಾದೇವಪ್ಪ ಪಾಣಿಗಟ್ಟಿ ಮಾತನಾಡಿ, ಅಪೌಷ್ಠಿಕ ಆಹಾರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಜೀವನ ಕುಂಟಿತವಾಗಿ ಅಪಾಯಕಾರಿಯಾಗುತ್ತದೆ. ಇಂದು ಆಗಿರುವ ಅಪೌಷ್ಠಿಕತೆ ಮಕ್ಕಳ ಆರೋಗ್ಯ ಸುದಾರಿಸದಿದ್ದರೆ, ಮುಂದೆ ಇದೇ ದೇಶಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಹೇಳಿದರು.

ತಾ.ಪಂ. ಸದಸ್ಯೆ ವಿಜಯಾ ಹೀರೆಮಠ ಮಾತನಾಡಿ, ಸ್ಥಳೀಯವಾಗಿ ಬೆಳೆಯುವ ಹಣ್ಣು, ತರಕಾರಿ ಹಾಗೂ ಆಹಾರವನ್ನು ಮಕ್ಕಳಿಗೆ ನೀಡುವದರಿಂದ ಅಪೌಷ್ಠಕತೆ ದೂರ ಮಾಡಬಹುದು ಎಂದರು.

ಕಾರ್ಯಕ್ರಮವನ್ನು ಜಿ.ಪಂ.ಸದಸ್ಯ ಮಹ ದೇವಪ್ಪ ಬಾಗಸರ ಉದ್ಘಾಟಿಸಿದರು. ಬಾಳಂಬೀಡ ಗ್ರಾ.ಪಂ.ಅಧ್ಯಕ್ಷ ಉಡಚಪ್ಪ ಮಲಾ ್ಲಡದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ತಾಪಂ ಮಾಜಿ ಅಧ್ಯಕ್ಷೆ ರತ್ನವ್ವ ಕರೆವ್ವನವರ, ಎಂ.ಎಂ. ಕಂಬಳಿ, ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮವ್ವ ಭಜಂತ್ರಿ, ಗ್ರಾ.ಪಂ.ಸದಸ್ಯ ಶಿವಪ್ಪ ಬಾರ್ಕಿ, ಪಿಡಿಓ ಮಮತಾ.ವಿ. ರಾಜೇಂದ್ರ ಬಾರ್ಕಿ, ಜಯಪ್ಪ ಮಡ್ಡೇರ, ರತ್ನವ್ವ ದುಂಡಣ್ಣನವರ, ಗಂಗವ್ವ ಸೋಮಸಾಗರ, ಶಾಂತಯ್ಯ ಮಠದ ಹಾಗೂ ಸಫಿಯಾಬಿ ಉಪ್ಪುಣಸಿ,  ಡಾ.ಪೂಜಾರ ಹಾಜರಿದ್ದರು.

ಶಿವಲೀಲಾ ಖ್ಯಾಟಿ ನಿರೂಪಿಸಿದರು. ವಸಂತ ಕಡೂರ ಸ್ವಾಗತಿಸಿದರು. ಶಕುಂತಲಾ ಪಾಟೀಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.