ADVERTISEMENT

ಮತ್ತೆ ಉಲ್ಬಣಿಸಿದ ನೀರಿನ ಸಮಸ್ಯೆ

ದುರಸ್ತಿಯಾಗದ ತುಂಗಭದ್ರಾ ನದಿಯ ಕೆಂಚಾರಗಟ್ಟಿಯಿಂದ ನೀರು ಪೂರೈಸುವ ಪೈಪ್‌ಲೈನ್

ಹರ್ಷವರ್ಧನ ಪಿ.ಆರ್.
Published 14 ಮೇ 2018, 11:04 IST
Last Updated 14 ಮೇ 2018, 11:04 IST
ಶಿಬಾರ ಬಳಿ ಹಾನಿಗೊಂಡಿರುವ ಪೈಪ್‌ಲೈನ್‌ ಮಾರ್ಗವನ್ನು ತಾತ್ಕಾಲಿಕವಾಗಿ ಮಣ್ಣಿನಿಂದ ಮುಚ್ಚಿರುವುದು
ಶಿಬಾರ ಬಳಿ ಹಾನಿಗೊಂಡಿರುವ ಪೈಪ್‌ಲೈನ್‌ ಮಾರ್ಗವನ್ನು ತಾತ್ಕಾಲಿಕವಾಗಿ ಮಣ್ಣಿನಿಂದ ಮುಚ್ಚಿರುವುದು   

ಹಾವೇರಿ:  ಚುನಾವಣೆಯ ಅಬ್ಬರದ ನಡುವೆ ನಗರದ ಮೂಲ ಸಮಸ್ಯೆಗಳೇ ತೆರೆಮೆರೆಗೆ ಸರಿದಿದ್ದವು. ಮತದಾನ ಮುಗಿದಿದ್ದು, ಅಬ್ಬರ ಬಹುತೇಕ ಸ್ತಬ್ಧವಾಗಿದೆ. ನೀರಿನ ಸಮಸ್ಯೆ ಉಲ್ಬಣಿಸಿದೆ.

ತುಂಗಭದ್ರಾ ನದಿಯ ಕೆಂಚಾರಗಟ್ಟಿಯಿಂದ ನಗರಕ್ಕೆ ನೀರು ಪೂರೈಸುವ ಪೈಪ್‌ಲೈನ್ ಶಿಬಾರ (ಕನವಳ್ಳಿ ಕ್ರಾಸ್) ಬಳಿ ಮೇ 8 ರಂದು ಒಡೆದು ಹೋಗಿದೆ. ತುಂಗಾ ಮೇಲ್ದಂಡೆ ಯೋಜನೆ ಕಾಮಗಾರಿ ವೇಳೆಯಲ್ಲಿ ಪೈಪ್‌ಲೈನ್‌ ಒಡೆದಿದ್ದು, ಕಳೆದ ಐದು ದಿನಗಳಿಂದ ನಗರದ ನೀರು ಪೂರೈಕೆ ಸ್ಥಗಿತಗೊಂಡಿದೆ.

ಇತ್ತ ನಗರದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಜನ ಪ್ರತಿನಿತ್ಯ ನೀರಿಗೆ ಪರಿತಪಿಸುತ್ತಿದ್ದಾರೆ. ಹಲವೆಡೆ ಖಾಸಗಿ ಕೊಳವೆಬಾವಿಗಳೂ ಬತ್ತಿ ಹೋಗಿದ್ದು, ಜನತೆ ಸಾರ್ವಜನಿಕ ನೀರು ಪೂರೈಕೆಯನ್ನು ಅವಲಂಬಿಸುವಂತಾಗಿದೆ. ಆದರೆ, ನಗರಸಭೆಯ ನೀರು ಪೂರೈಕೆ ಸ್ಥಗಿತಗೊಂಡ ಕಾರಣ ತೀವ್ರ ಸಮಸ್ಯೆ ಎದುರಾಗಿದೆ.

ADVERTISEMENT

ಶಿಬಾರ ಬಳಿ ಪೈಪ್‌ಲೈನ್ ದುರಸ್ತಿ ಮಾಡುವಂತೆ ನಗರಸಭೆ ಹಲವು ಬಾರಿ ಮನವಿ ಮಾಡಿಕೊಂಡರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ನೋಟಿಸ್ ನೀಡಲಾಗಿತ್ತು. ಅಂತಿಮವಾಗಿ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ನಗರಸಭೆಯ ಪೌರಾಯುಕ್ತ ಬಿ.ಶಿವಕುಮಾರಯ್ಯ ತಿಳಿಸಿದರು.

ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ನಗರದ ಜನತೆ ತೀವ್ರ ಸಮಸ್ಯೆಗೆ ಈಡಾಗಿದ್ದು, ಪರಿತಪಿಸುವಂತಾಗಿದೆ. ಅತ್ತ ಕೊಳವೆಬಾವಿಯೂ ಇಲ್ಲ, ಇತ್ತ ನದಿ ನೀರೂ ಇಲ್ಲ ಎಂಬಂತಾಗಿದೆ.

ಕಾಣದ ಶಾಶ್ವತ ಪರಿಹಾರ: ನಗರದ ಕುಡಿಯುವ ನೀರಿನ ಪ್ರತಿನಿತ್ಯದ ಬೇಡಿಕೆ ಸುಮಾರು 90 ಲಕ್ಷ ಲೀಟರ್ ಇದೆ. ನೀರು ಸಂಗ್ರಹಿಸುವ ಸಾಮರ್ಥ್ಯವು ಸುಮಾರು 50 ಲಕ್ಷ ಲೀಟರ್ ಇದ್ದರೆ, ಸದ್ಯ ಕೆಂಚಾರಗಟ್ಟಿ ಜಾಕ್‌ವೆಲ್‌ನಿಂದ ಪ್ರತಿನಿತ್ಯ ಸುಮಾರು 20 ಲಕ್ಷ ಲೀಟರ್‌ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ವಿದ್ಯುತ್ ಸಮಸ್ಯೆ, ಪೈಪ್‌ಲೈನ್‌ ಕಡಿತಗೊಳ್ಳದಿದ್ದರೆ, ನಗರದಲ್ಲಿ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆ ಸಾಧ್ಯ. ಅದೂ ವ್ಯತ್ಯಯಗೊಂಡರೆ ನೀರು ಸರಬರಾಜು ಅವಧಿ 10 ದಿನಕ್ಕೊಮ್ಮೆ ಹೋಗುತ್ತಿದೆ. ಈ ನಡುವೆಯೂ ಒಡೆದ ಪೈಪ್‌ಲೈನ್ ದುರಸ್ತಿ ಮಾಡದೇ ಇರುವುದು ಸಮಸ್ಯೆಗೆ ಈಡಾಗಿದೆ. ಜನ ಖಾಸಗಿಯಾಗಿ ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ.

ನಗರದಲ್ಲಿ ಐದು ಕೆರೆಗಳಿವೆ. ಈ ಕೆರೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಿಲ್ಲ. ಅತ್ತ ಹೆಗ್ಗೇರಿ ಕೆರೆಗೆ ಯುಟಿಪಿ ಸಂಪರ್ಕ ಕಲ್ಪಿಸುವ ಕಾಮಗಾರಿಯೂ ಪೂರ್ಣಗೊಂಡಿಲ್ಲ.

ತುಂಗಭದ್ರಾ ನದಿಯಿಂದ ಜಾಕ್‌ವೆಲ್‌ ಮೂಲಕ ನೀರು ಸರಬರಾಜು ಮಾಡಲು ಪ್ರತಿವರ್ಷ ಬೇಸಿಗೆಯಲ್ಲಿ ಮರಳಿನ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಹಾವನೂರ ಬಳಿ ಬಾಂದಾರು ನಿರ್ಮಿಸುವ ಯೋಜನೆಯೂ ನಡೆದಿಲ್ಲ. ಒಟ್ಟಾರೆ, ನೀರಿನ ಹಾಹಾಕಾರ ತೀವ್ರಗೊಂಡಿದ್ದು, ಜನತೆ ತುಂಗಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಶಪಿಸುತ್ತಿದ್ದಾರೆ. ಆಗಾಗ್ಗೆ ಸುರಿಯುವ ಮಳೆ ಮಾತ್ರ ಸ್ವಲ್ಪ ತಂಪು ನೀಡಿದೆ.

**
ಹಲವು ಬಾರಿ ನೋಟಿಸ್‌ ನೀಡಿದರೂ, ಒಡೆದ ಪೈಪ್‌ಲೈನ್‌ ದುರಸ್ತಿ ಮಾಡಿಲ್ಲ
– ಶಿವಕುಮಾರಯ್ಯ, ಪೌರಾಯುಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.