ADVERTISEMENT

ಮರಳು ಪೂರೈಕೆಗೆ ಒತ್ತಾಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 4:27 IST
Last Updated 14 ಡಿಸೆಂಬರ್ 2013, 4:27 IST

ಹಾವೇರಿ: ಕಳೆದ ಎರಡು ತಿಂಗಳಿಂದ ಮರಳು ಪೂರೈಕೆ ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕಟ್ಟಡ ಕಟ್ಟುವ ಕಾರ್ಮಿಕರ ಜಿಲ್ಲಾ ಸಂಘದ ನೇತೃತ್ವದಲ್ಲಿ ಕಟ್ಟಡ ನಿರ್ಮಿಸುವ ಸಾವಿರಾರು ಕಾರ್ಮಿಕರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಪುರಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಮಿಕರು, ಮಹಾತ್ಮಗಾಂಧಿ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆನಡೆಸಿ ಪ್ರತಿಭಟಿಸಿದರು.

ಕಾರ್ಮಿಕರ ಸಂಘದ ಜಿಲ್ಲಾ  ಘಟಕದ ಅಧ್ಯಕ್ಷ ದಾವಲಸಾಬ್‌ ಹಿರೇಮುಗದೂರ ಮಾತನಾಡಿ, ಮರಳಿನ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿ ಕೂಡ ಸ್ಥಗಿಗೊಂಡಿದೆ. ಇದರಿಂದ ಕಟ್ಟಡ ಕೆಲಸವನ್ನು ನಂಬಿ ಬದುಕುತ್ತಿರುವ ಸಾವಿರಾರು ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ ಎಂದರು.

ಕಾರ್ಮಿಕ ಮುಖಂಡರು ಮಾತನಾಡಿ, ಸರ್ಕಾರ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುತ್ತಿದೆ ನಿಜ. ಆದರೆ, ಉಳಿದ ದಿನಬಳಕೆ ವಸ್ತುಗಳಿಗೆ ಭಿಕ್ಷೆ ಬೇಡುವ ಸ್ಥತಿ ನಿರ್ಮಿಸಿದೆ. ಅಲ್ಲದೇ, ಮರಳು ನೀತಿ ಜಾರಿಗೆ ತರುವ ಮೂಲಕ ಸಾವಿರಾರು ಕಾರ್ಮಿಕ ಕುಟುಂಬಗಳನ್ನು ಬೀದಿಗೆ ಬರುವಂತೆ ಮಾಡಿದೆ ಎಂದು ಆರೋಪಿಸಿದರು.

ಕೂಡಲೇ ಸರ್ಕಾರ ಮರಳು ನೀತಿಯಿಂದ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು. ಮರಳು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಜೆಲ್ಲಿಕಲ್ಲು ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಸಾಗಣೆಕೆಗೆ ಇರುವ ನಿರ್ಬಂಧವನ್ನು ಸಡಿಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಸಂಜೀವಪ್ಪ ಹರಪನಹಳ್ಳಿ, ಬಸವರಾಜ ಹರಪನಹಳ್ಳಿ, ರಾಮಣ್ಣ ದೊಡ್ಡತಳವಾರ, ವೆಂಕಟೇಶ ಹರಪನಳ್ಳಿ, ಮಾರುತಿ ಹತ್ತಿಮತ್ತೂರ ಸೇರಿದಂತೆ ಕೂಲಿ ಕಾರ್ಮಿಕರು, ಗೌಂಡಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಸಿಮೆಂಟ್‌, ಸ್ಟೀಲ್‌, ಹಾರ್ಡವೇರ್‌ ಅಂಗಡಿ ಮಾಲೀಕರು, ವೆಲ್ಡಿಂಗ್‌ ಕಾರ್ಮಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.