ADVERTISEMENT

ಮರ ಕಡಿಯುವುದರಿಂದ ಭೂಮಿ ಬರಡು

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 9:45 IST
Last Updated 12 ಜುಲೈ 2012, 9:45 IST

ಹಾವೇರಿ: `ರೈತರು ಜಮೀನುಗಳಲ್ಲಿನ ಮರಗಳನ್ನು ಕಡಿಯುವುದರಿಂದ ಮಣ್ಣು ಸವಕಳಿಯಾಗುತ್ತದೆ. ಅಲ್ಲದೇ, ಮಣ್ಣಿನಲ್ಲಿನ ತೇವಾಂಶ ಕಡಿಮೆಯಾಗಿ ಉಷ್ಣಾಂಶ ಹೆಚ್ಚಾಗುವ ಮೂಲಕ ಭೂಮಿ ಬರಡಾಗುತ್ತದೆ~ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾವೇರಿ ಪ್ರಾದೇಶಿಕ ಅಧಿಕಾರಿ ಶೋಭಾ ಗಜಕೋಶ  ಹೇಳಿದರು.

ಸವಣೂರು ತಾಲ್ಲೂಕು ಹಿರೇಮುಗದೂರ ಗ್ರಾಮದ ಬಿಸಿಎಂ ಹಾಸ್ಟೆಲ್ ಸಭಾಭವನದಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯ, ರಾಜ್ಯ ವಿಜ್ಞಾನ ಪರಿಷತ್ ಹಾಗೂ ಚಿಕ್ಕಮುಗದೂರ ಆಶಾಕಿರಣ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಆಶ್ರಯದಲ್ಲಿ ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ `ಸುಸ್ಥಿರ ಜೀವನೋಪಾಯಕ್ಕೆ ಅರಣ್ಯಗಳು~ ಎಂಬ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯನಾಶದಿಂದ ತೇವಾಂಶವುಳ್ಳ ಮಾರುತ ಗಳನ್ನು ತಡೆಯಲು ಸಾಧ್ಯವಾಗದೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಅಲ್ಲದೇ, ಅರಣ್ಯನಾಶದಿಂದ ಕಾಡುಪ್ರಾಣಿ, ಪಕ್ಷಿಗಳಿಗೆ ಆಶ್ರಯವಿಲ್ಲದಂತಾಗಿ ಜೀವ ವೈವಿಧ್ಯ ನಶಿಸುತ್ತಿದೆ ಎಂದರು.

ರೈತ ಬಾಂಧವರು ತಮ್ಮ ಜಮೀನುಗಳಲ್ಲಿ ಗಿಡಮರಗಳನ್ನು ಬೆಳಿಸಬೇಕು. ಅರಣ್ಯವಿಲ್ಲದೇ ನೀರಿಲ್ಲ. ನೀರಿಲ್ಲದೇ ನದಿಗಳಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಪರಿಸರ ರಕ್ಷಿಸುವ ಮನೋಭಾವ ಬೆಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಬೀದ್‌ಅಲಿಖಾನ್ ಮಾತನಾಡಿ, ಪ್ರಕೃತಿ ನಮಗೆ ಅರಣ್ಯವನ್ನು ಕೊಡುಗೆಯಾಗಿ ನೀಡಿದೆ, ಅದನ್ನು ನಾಶವಾಗದಂತೆ ತಡಗಟ್ಟುವುದು ಪ್ರತಿಯೊಬ್ಬರು ಕರ್ತವ್ಯವಾಗಿದೆ.

ಈಗಾಗಲೇ ಕಳೆದುಕೊಂಡ ಅರಣ್ಯವನ್ನು ಪುನಃ ಅಭಿವೃದ್ಧಿ ಪಡಿಸಬೇಕಾಗಿದೆ ಎಂದ ಅವರು, 1976 ಅರಣ್ಯ ಸಂರಕ್ಷಣಾ ಅಧಿನಿಯಮವು ವನ್ಯ ಪ್ರಾಣಿಗಳು, ಪರಿಸರ ಮತ್ತು ಸಾಮಾಜಿಕ ಅರಣ್ಯಗಳ ರಕ್ಷಣೆ ಮಾಡಬೇಕೆಂದು ಹೇಳಿದರು.

ದುರ್ಗಾಂಬಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ಕನವಳ್ಳಿ ಮಾತನಾಡಿ, ರೈತರು ತಮ್ಮ ಉಪಯೋಗಕ್ಕೆ ಒಂದು ಮರ ಕಡಿದರೆ 10 ಮರಗಳನ್ನು ಬೆಳಸಬೇಕು. ಮುಂದಿನ ಪೀಳ್ಗೆಗೆ ನಾವು ಏನಾದರು ಕೊಡುಗೆ ನೀಡಬೇಕೆಂದರೆ ಈಗಿರುವ ಅರಣ್ಯವನ್ನು ಸಂರಕ್ಷಣೆ ಮಾಡಬೇಕೇಂದು ತಿಳಿಸಿದರು.

ಜಿ.ಪಂ. ಅಧ್ಯಕ್ಷ ಸಾವಿತ್ರಾ ತಳವಾರ ಅಧ್ಯಕ್ಷತೆ ವಹಸಿ ಮಾತನಾಡಿ, ಅರಣ್ಯ ನಾಶಕ್ಕೆ ಜನಸಂಖ್ಯೆ ಹೆಚ್ಚಳವೇ ಕಾರಣ. ಮೊದಲು ಜನಸಂಖ್ಯೆಯನ್ನು ನಿಯಂತ್ರಿಸಬೇಕು ಎಂದರು. ಆಶಾಕಿರಣ ಸಂಸ್ಥೆ ಅಧ್ಯಕ್ಷ ಮುತ್ತುರಾಜ ಮಾದರ, ತಾ.ಪಂ.ಸದಸ್ಯ ರಾಜಶೇಖರ ಮಾದರ, ಗ್ರಾ.ಪಂ.ಉಪಾಧ್ಯಕ್ಷ ಫಕ್ಕೀರಯ್ಯ  ಕೆಂಭಾವಿಮಠ, ಗ್ರಾ.ಪಂ.ಸದಸ್ಯ ಮಲ್ಲಪ್ಪ ತಳವಾರ, ರೈತ ಮುಖಂಡ ಎಸ್. ಎಂ. ಕನವಳ್ಳಿ, ಬಸವರಾಜ ಸೋಮಸಾಗರ, ಮಲ್ಲಪ್ಪ ಸೋಮಸಾಗರ, ಚಂದ್ರಪ್ಪ ಕಡ್ಲೆಪ್ಪ ನವರ, ಚನ್ನಬಸಪ್ಪ ಕಡ್ಲೆಪ್ಪ ನವರ, ಹನು ಮಂತಪ್ಪ ಹರಿಜನ, ಎಂ.ಐ. ಪಾಟೀಲ, ಈರಣ್ಣ ಸ್ವಾಮಿ ಪುರಾಣಿಕಮಠ ಹಾಜರಿದ್ದರು. ಪಿ.ಕೆ. ಹಳೆರಿತ್ತಿ ನಿರೂಪಿಸಿದರು. ಚರಂತಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.