ADVERTISEMENT

ಮಳೆನೀರಿಗೂ ನೆಲೆ ನೀಡಿದ ಮನೆ

ಇಂಗುಗುಂಡಿ ನಿರ್ಮಿಸುವುದು, ಸಸಿ ನೆಡುವ ಬಗ್ಗೆ ಸತತ ಜಾಗೃತಿ

ಹರ್ಷವರ್ಧನ ಪಿ.ಆರ್.
Published 18 ಜೂನ್ 2018, 9:02 IST
Last Updated 18 ಜೂನ್ 2018, 9:02 IST
ಮನೆಯ ಬಳಿ ಇಂಗುಗುಂಡಿ ನಿರ್ಮಿಸಲಾದ ಜಾಗದ ಬಳಿ ನಿಂತಿರುವ ಪ್ರಭಾಕರ ರಾವ್ ಮಂಗಳೂರ
ಮನೆಯ ಬಳಿ ಇಂಗುಗುಂಡಿ ನಿರ್ಮಿಸಲಾದ ಜಾಗದ ಬಳಿ ನಿಂತಿರುವ ಪ್ರಭಾಕರ ರಾವ್ ಮಂಗಳೂರ   

ಹಾವೇರಿ: ಜಿಲ್ಲಾ ಕೇಂದ್ರವಾದ ಹಾವೇರಿಯು 2002ರಲ್ಲಿ ಇನ್ನೂ ಪುರಸಭೆಯಾಗಿತ್ತು. ಬಡಾವಣೆಗಳು ಬಹಳಷ್ಟು ವಿಸ್ತರಣೆಗೊಂಡಿರಲಿಲ್ಲ. ನಗರದ ಬಹುತೇಕ ಕೆರೆಗಳಲ್ಲಿ ಮಳೆ ನೀರು ನಿಲ್ಲುತ್ತಿತ್ತು. ಆದರೆ, ಆಗಲೇ ಇಂಗುಗುಂಡಿ ಮಾಡಿ, ಸತತ 16 ವರ್ಷ ನೀರಿನ ಬವಣೆಯನ್ನು ನೀಗಿಸುತ್ತಾ ಬಂದವರು ಮಂಜುನಾಥ ನಗರದ ಪ್ರಭಾಕರ್ ರಾವ್ ಮಂಗಳೂರ.

ಮನೆ ನಿರ್ಮಿಸುವ ವೇಳೆಯಲ್ಲಿ ಕಾರು ನಿಲ್ಲಲು ಜಾಗ, ನಾಯಿ ಕಟ್ಟಲು ಜಾಗ, ಈಜುಕೊಳ, ಲಾನ್, ಕೊಟ್ಟಿಗೆ, ನೆಲಕ್ಕೆ ಕಾಂಕ್ರಿಟ್, ಪೇವರ್ಸ್‌ ಹಾಕಿಸುವವರು ಬಹಳ. ಪ್ರಕೃತಿದತ್ತವಾಗಿ ಮಳೆಯಾಗಿ ಬಂದ ಜೀವಜಲವನ್ನು ಹೊರಗೆ ಕಳುಹಿಸುವವರೇ ಹೆಚ್ಚು. ಆದರೆ, ಮಂಜುನಾಥ ನಗರದಲ್ಲಿನ ತಮ್ಮ ಗೀತಪ್ರಭಾ ನಿವಾಸದ ಹಿಂಭಾಗದಲ್ಲಿ ಪ್ರಭಾಕರ್ ರಾವ್ ಅವರು ‘ಜೀವಜಲ’ಕ್ಕಾಗಿಯೇ ಜಾಗ ಬಿಟ್ಟಿದ್ದಾರೆ. ಸುತ್ತಲು ಇತರ ಮರಗಿಡ ಬಳ್ಳಿಯನ್ನೂ ಬೆಳೆಸಿದ್ದಾರೆ.

ತಮ್ಮ ಮನೆಯ ಬಳಿಯ ಕೊಳವೆಬಾವಿ ಸಮೀಪ ಇಂಗುಗುಂಡಿ ಮಾಡಿದ್ದು, ಮಳೆ ನೀರೆಲ್ಲ ಇಲ್ಲಿಗೆ ಹರಿದು ಬರುವಂತೆ ಮಾಡಿದ್ದಾರೆ. ಇಲ್ಲಿ ನೀರು ಇಂಗಿ, ಭೂಮಿಯನ್ನು ಸೇರಿಬಿಡುತ್ತದೆ. ‘ಮನೆ ನಿರ್ಮಿಸುವ ವೇಳೆಯಲ್ಲೇ ಸುಮಾರು 8 ಅಡಿ ಆಳದ ಇಂಗುಗುಂಡಿ ಮಾಡಿಸಿದ್ದೇನೆ. ಸುತ್ತಲು ನೀರು ನಿಲ್ಲುವ ಸಲುವಾಗಿ ಜಾಗ ಬಿಟ್ಟಿದ್ದೇನೆ. ಹೀಗಾಗಿ ಕಳೆದ 16 ವರ್ಷಗಳಲ್ಲಿ ನೀರಿನ ಬವಣೆ ಕಾಡಿದ್ದೇ ವಿರಳ. ಈಚೆಗೆ ತೀವ್ರ ಬರ ಕಾಡಿದ ಕಡು ಬೇಸಿಗೆಯ ಕೆಲವು ದಿನಗಳ ಮಾತ್ರ ನೀರಿನ ಸಮಸ್ಯೆ ಉಂಟಾಗಿತ್ತು’ ಎಂದು ವಿವರಿಸಿದರು.

ADVERTISEMENT

‘ಈಗೀಗ ಕೊಳವೆ ಬಾವಿಗಳು ಹೆಚ್ಚಾಗಿವೆ. ಹೀಗಾಗಿ ಅಂತರ್ಜಲ ಮಟ್ಟವೂ ವೇಗವಾಗಿ ಕುಸಿಯುತ್ತಿದೆ. ಎಲ್ಲರೂ ಇಂಗುಗುಂಡಿ ಮಾಡಿಸಿಕೊಂಡರೆ ಇಂತಹ ಸಮಸ್ಯೆಗಳೇ ಕಾಡದು’ ಎನ್ನುವುದು ಅವರ ದೃಢವಿಶ್ವಾಸ.

‘ನೀರು ಹಾಗೂ ಪರಿಸರ ಕಾಳಜಿ ಕುರಿತ ಲೇಖನಗಳನ್ನು ಓದುವ ಹವ್ಯಾಸವಿದ್ದು, ಅದನ್ನು ನನ್ನ ಮನೆಯಲ್ಲಿಯೇ ಪ್ರಯೋಗ ಮಾಡಿದೆ. ಇದರಿಂದಾಗಿ ನಮ್ಮ ಕೊಳವೆಬಾವಿಯಲ್ಲಿ ನೀರಿನ ಸಮಸ್ಯೆಯೂ ಇಲ್ಲ, ಪದೇ ಪದೇ ಪೈಪ್ ಇಳಿಸುವುದು, ದುರಸ್ತಿ ಮಾಡಿಸುವ ಕಿರಿಕಿರಿಗಳೂ ಕಾಡಿಲ್ಲ’ ಎಂದರು.

‘ನಮ್ಮ ಕುಟುಂಬವು, ನವ ಮಂಗಳೂರು ಬಂದರು (ಎನ್‌ಎಂಪಿಟಿ) ನಿರ್ಮಾಣದ ವೇಳೆಯಲ್ಲಿ ನಿರ್ವಸಿತವಾಯಿತು. ಆಗಲೇ ಉದ್ಯೋಗಕ್ಕಾಗಿ ಇತ್ತ ಬಂದೆವು. ವಿಶಾಲ ಸಮುದ್ರವಿದ್ದರೂ ಹನಿ ನೀರು ಕುಡಿಯಲು ಸಾಧ್ಯವಿಲ್ಲ ಎಂಬ ಪ್ರಾಕೃತಿಕ ಸತ್ಯದ ಅರಿವು–ಅನುಭವವಿದೆ. ಹೀಗಾಗಿ ನೀರಿನ ಮಹತ್ವ ಚೆನ್ನಾಗಿ ತಿಳಿದಿದೆ. ನೀರು ಮತ್ತು ಪರಿಸರಕ್ಕೆ ಒತ್ತು ನೀಡಿದ ಮನೆಗಳಲ್ಲಿ ಮಾತ್ರ ನೆಮ್ಮದಿ ನೆಲಸಲು ಸಾಧ್ಯ’ ಎಂದು ನೀರಿನ ಮಹತ್ವದ ಕುರಿತು ಅನುಭವ ಹಂಚಿಕೊಂಡಿದ್ದರು.

ಮನೆ ಮಾತ್ರವಲ್ಲ: ಕೇವಲ ತಮ್ಮ ಮನೆ ಮಾತ್ರವಲ್ಲ ಭಾರತೀಯ ವಿಕಾಸ ಪರಿಷತ್ ವರದಾ ಶಾಖೆ, ವಿಘ್ನೇಶ್ವರ ಸೇವಾ ಮಂಡಳಿ, ರೋಟರಿ ಮತ್ತಿತರ ಸಂಘ–ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಅವರು, ಆ ಮೂಲಕ ನೀರು ಇಂಗಿಸುವುದು, ಸಸಿ ನೆಡುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ಅಲ್ಲದೇ, ಸತತ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ. ನೀವೂ ನೀರಿಂಗಿಸಬೇಕೇ, (ಮೊ.94489 15910) ಅವರನ್ನು ಸಂಪರ್ಕಿಸಬಹುದು.

‘ಪ್ರಭಾಕರ ಮಂಗಳೂರ ಜೊತೆ ನಾವೆಲ್ಲರೂ ಸೇರಿ ನಡೆಸಿದ ಜಾಗೃತಿ ಜಾಥಾದ ಫಲವಾಗಿ ಕಳೆದ ವರ್ಷ ಏಳು ಮಂದಿ ನೀರಿಂಗಿಸುವ ಗುಂಡಿ ಮಾಡಿದ್ದಾರೆ. ಅವರು, ಆಡಳಿತ ಮಂಡಳಿ ಸದಸ್ಯನಾಗಿರುವ ರೋಟರಿ ಶಾಲೆಯಲ್ಲೂ ನೀರು ಇಂಗಿಸುವ ಬೃಹತ್ ಗುಂಡಿ ಮಾಡಲಾಗಿದೆ’ ಎಂದು ಹನುಮಂತಗೌಡ ಗೊಲ್ಲರ, ನಾಗರಾಜ ರಾಜನಾಳಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.