ADVERTISEMENT

ಮಿಶ್ರಬೆಳೆಯಲ್ಲಿ ಕಾಸು ಕಂಡ ರೈತ

ಎಂ.ವಿ.ಗಡಾದ
Published 5 ನವೆಂಬರ್ 2017, 7:04 IST
Last Updated 5 ನವೆಂಬರ್ 2017, 7:04 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಹೊಲವೊಂದರಲ್ಲಿ ಫಲವತ್ತಾಗಿ ಬೆಳೆದ ಬೆಂಡಿಕಾಯಿ ಬೆಳೆ ನೋಟ
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಹೊಲವೊಂದರಲ್ಲಿ ಫಲವತ್ತಾಗಿ ಬೆಳೆದ ಬೆಂಡಿಕಾಯಿ ಬೆಳೆ ನೋಟ   

ಶಿಗ್ಗಾವಿ: ಪ್ರಸಕ್ತ ವರ್ಷದ ಸುರಿದ ಅಕಾಲಿಕ ಮಳೆಗೆ ತಾಲ್ಲೂಕಿನ ಬಹುತೇಕ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಆದರೆ, ತಾಲ್ಲೂಕಿನ ಬಂಕಾಪುರದ ಪ್ರಗತಿಪರ ರೈತ ವೆಂಕಟೇಶ ಟೋಪಣ್ಣವರ ಅವರಿಗೆ ಈ ನಷ್ಟದ ಬಿಸಿ ಅಷ್ಟಾಗಿ ತಟ್ಟಿಲ್ಲ. ಅದಕ್ಕೆ ಕಾರಣ ಅವರು ಅನುಸರಿಸಿದ ಮಿಶ್ರಬೆಳೆ ಪದ್ಧತಿ.

ಸುಮಾರು ಎಂಟು ಎಕರೆ ಸ್ವಂತ ಭೂಮಿ ಹೊಂದಿರುವ ಇವರು, ತಲಾ ಎರಡು ಎಕರೆಯಲ್ಲಿ ಸೋಯಾಬಿನ್‌, ಶೇಂಗಾ, ಗೋವಿನ ಜೋಳ ಬೆಳೆದಿದ್ದರು. ಅಕಾಲಿಕ ಮಳೆಯಿಂದ ಬೆಳೆ ಕೈ ಸೇರಲಿಲ್ಲ. ಆದರೆ, ಇನ್ನುಳದಿ ಎರಡು ಎಕರೆಯಲ್ಲಿ ಮಿಶ್ರ ಪದ್ಧತಿಯಲ್ಲಿ ಬೆಳೆದಿದ್ದ ತೋಟಗಾರಿಕಾ ಬೆಳೆ ವೆಂಕಟೇಶ ‘ಕೈ’ ಬಿಡಲಿಲ್ಲ.

3 ಇಂಚು ನೀರಿನ ಕೊಳವೆಬಾವಿ ಬಳಸಿಕೊಂಡು ಎರಡು ಎಕರೆಯಲ್ಲಿ ಬೆಂಡೆ, ಬದನೆ, ಚವಳಿ, ಮೆಣಸಿನಕಾಯಿ, ಮೆಂತೆ, ಕೊತ್ತಂಬರಿ, ಪಾಲಕ, ಸಬ್ಬಸಗಿ ಬೆಳೆದಿದ್ದರು.ಅದು ಕಾಸು ತಂದು ಕೊಟ್ಟಿದೆ.

ADVERTISEMENT

‘10 ಗುಂಟೆಯಲ್ಲಿ ಬೆಂಡೆ ಬೆಳೆದಿದ್ದು, ಈ ತನಕ 3 ಕ್ವಿಂಟಲ್ ಇಳುವರಿ ಸಿಕ್ಕಿದೆ. ಅದಕ್ಕೆ ಬೀಜ, ಗೊಬ್ಬರ ಸೇರಿದಂತೆ ₹3 ಸಾವಿರ ವೆಚ್ಚ ಮಾಡಿದ್ದೇನೆ. ಈಗಾಗಲೇ ₹7 ಸಾವಿರ ಲಾಭ ಸಿಕ್ಕಿದೆ. ಇನ್ನೂ 20 ಕ್ವಿಂಟಲ್‌ನಷ್ಟು ಇಳುವರಿಯ ನಿರೀಕ್ಷೆ ಇದೆ. ಎಲ್ಲ ಖರ್ಚು ಕಳೆದು ₹50 ಸಾವಿರ ಲಾಭದ ಸಿಗಬಹುದು’ ಎಂಬುದು ವೆಂಕಟೇಶ ಲೆಕ್ಕಾಚಾರ.

ಅದರಂತೆ ‘20 ಗುಂಟೆಯಲ್ಲಿ ಮೆಣಸಿನಕಾಯಿ ಗಿಡಗಳಿವೆ. ಈಗಾಗಲೇ ಅರ್ಧ ವಯಸ್ಸು ಮೀರಿದೆ. ಬೀಜ, ಗೊಬ್ಬರದ ಖರ್ಚು ಬಿಟ್ಟು ₹80 ಸಾವಿರದಷ್ಟು ಲಾಭ ಸಿಕ್ಕಿದೆ’ ಎಂದು ಅವರು ವಿವರಿಸಿದರು.

‘ಇನ್ನುಳಿದ ಜಮೀನಿನಲ್ಲಿ ಚವಳಿಕಾಯಿ, ಕೋತ್ತಂಬರಿ, ಪಾಲಕ, ಸಬ್ಬಸಗಿ, ಕಿರಕಸಾಲಿ ವಿವಿಧ ಸೊಪ್ಪುಗಳನ್ನು ಬೆಳೆಯುತ್ತಿದ್ದೇನೆ. ಅದರಿಂದಲೂ ಸಾಕಷ್ಟು ಲಾಭ ಸಿಕ್ಕಿದೆ. ಆರು ತಿಂಗಳಲ್ಲಿ ಎಲ್ಲ ಬೆಳೆಗಳು ಸೇರಿದಂತೆ ಕನಿಷ್ಠ  ₹1.5 ಲಕ್ಷಕ್ಕೂ ಹೆಚ್ಚು ಲಾಭ ದೊರೆತಿದೆ’ ಎಂದು ವೆಂಕಟೇಶ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.