ADVERTISEMENT

ಮುಕ್ತಿಗಾಗಿ ಕಾಯುತ್ತಿರುವ ಮುಲ್ಲಾನ ಕೆರೆ

​ಪ್ರಜಾವಾಣಿ ವಾರ್ತೆ
Published 21 ಮೇ 2012, 6:15 IST
Last Updated 21 ಮೇ 2012, 6:15 IST
ಮುಕ್ತಿಗಾಗಿ ಕಾಯುತ್ತಿರುವ ಮುಲ್ಲಾನ ಕೆರೆ
ಮುಕ್ತಿಗಾಗಿ ಕಾಯುತ್ತಿರುವ ಮುಲ್ಲಾನ ಕೆರೆ   

ಹಾವೇರಿ: `ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು~ ಇದು ಪ್ರಾಚೀನ ಕಾಲದ ತಾಯಂದಿರು ರಾಜ್ಯಭಾರ ಮಾಡುವ ತಮ್ಮ ಮಕ್ಕಳಿಗೆ ನೀಡುವ ಸಂದೇಶ. ಕೆರೆ ಕಟ್ಟೆಗಳಿಗೆ ಪ್ರಾಚೀನ ಜನರು ಎಷ್ಟು ಮಹತ್ವ ನೀಡಿದ್ದರು ಎಂಬುದಕ್ಕೆ ಈ ಸಂದೇಶವೇ ಸಾಕ್ಷಿ.

ಕೆರೆ, ಬಾವಿಗಳಲ್ಲಿನ ನೀರು ಅಂತರ್ಜಲ ಹೆಚ್ಚಿಸುವುದರ ಜತೆಗೆ, ಸುತ್ತ ಮುತ್ತಲಿನ ಜನ ಜಾನುವಾರುಗಳಿಗೆ ನೀರನ್ನು ಒದಗಿಸುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಹಾಗೂ ಜನರ ನಿರ್ಲಕ್ಷ್ಯದಿಂದ  ಕೆರೆ, ಭಾವಿಗಳು ಮಾಯವಾಗಿ ಆ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತುತ್ತಿವೆ ಇಲ್ಲವೇ ಬಯಲು ಪ್ರದೇಶಗಳಾಗುತ್ತಿವೆ.

ಇದಕ್ಕೊಂದು ತಾಜಾ ನಿದರ್ಶನ ನಗರದಲ್ಲಿರುವ ಐತಿಹಾಸಿಕ ಮುಲ್ಲಾನ ಕೆರೆ. ಒಂದು ಕಾಲದಲ್ಲಿ ನಗರದ ಅರ್ಧ ಭಾಗದ ಜನರಿಗೆ ನೀರಿನ ಸೌಕರ್ಯ ಕಲ್ಪಿಸಿದ ಮುಲ್ಲಾನ ಕೆರೆ, ಇಂದು ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

ನಗರದ ಜೀವನಾಡಿಯಂತಿದ್ದ ಮುಲ್ಲಾನ ಕೆರೆ, ಸುಮಾರು 14 ಎಕರೆಯಷ್ಟು ವಿಶಾಲವಾಗಿತ್ತು. ಕೇವಲ ವಿಸ್ತಾರದಲ್ಲಿ ಅಷ್ಟೇ ದೊಡ್ಡದಲ್ಲದೇ ನೀರಿನ ಹರವಿನಲ್ಲಿಯೂ ಸಾಕಷ್ಟ ಸಮೃದ್ಧಿಯಾಗಿತ್ತು. ಒಮ್ಮೆ ಭರ್ತಿಯಾದರೆ, ಕನಿಷ್ಠ ಮೂರ‌್ನಾಲ್ಕು ವರ್ಷ ನಗರದ ಜಾನುವಾರುಗಳಿಗೆ ನೀರಿನ ಸಮಸ್ಯೆಯೇ ಇರಲಿಲ್ಲ.

ಆದರೆ, ಹಂತ ಹಂತವಾಗಿ ಕೆರೆಯನ್ನು ಒತ್ತುವರಿ ಮಾಡಿದ್ದರ ಪರಿಣಾಮ ಕೆರೆಯ ವಿಸ್ತಾರ ಕಡಿಮೆಯಾಗಿದೆ. 14 ಎಕರೆ ವಿಶಾಲವಾದ ಕರೆ ಇಂದು ಕೇವಲ ಎರಡು ಎಕರೆಯಷ್ಟು ಉಳಿದು ಅವನತಿಯತ್ತ ಸಾಗಿದೆ.
ನಗರಸಭೆಯಿಂದ ಒತ್ತುವರಿ: ಕೆರೆಯ ಪ್ರದೇಶದ ಒತ್ತುವರಿ ಕೇವಲ ಸಾರ್ವಜನಿಕರಿಂದ ಆಗಿಲ್ಲ.
 
ಸ್ವತಃ ನಗರದಲ್ಲಿನ ಕೆರೆ ಕಟ್ಟೆಗಳನ್ನು ಸಂರಕ್ಷಿಸಬೇಕಾದ ನಗರಸಭೆ ಕೂಡಾ ಒತ್ತುವರಿ ಮಾಡಿದೆ. ಕೆರೆಯ ಪಾತ್ರದಲ್ಲಿ ಹುಟ್ಟಿಕೊಂಡ ಹಲವಾರು ಇಟ್ಟಿಗೆ ಬಟ್ಟಿಗಳು, ಕೆಲವೊಂದು ಕಟ್ಟಡಗಳು ಕೆರೆಯ ವಿಸ್ತಾರವನ್ನು ಕಡಿಮೆ ಮಾಡಿದ್ದರೆ, ಅತಿಕ್ರಮಣ ತಡೆದು, ಕೆರೆಯನ್ನು ಅಭಿವೃದ್ಧಿಪಡಿಸಬೇಕಾದ ನಗರಸಭೆ, ನಗರದ ತ್ಯಾಜ್ಯವನ್ನು ಇದೇ ಕೆರೆಯ ದಡದ ಮೇಲೆ ವಿಲೇವಾರಿ ಮಾಡುವ ಮೂಲಕ ಕೆರೆಯ ಅರ್ಧದಷ್ಟು ಭಾಗ ತ್ಯಾಜ್ಯದಿಂದಲೇ ಮುಚ್ಚಿಹೋಗುವಂತೆ ಮಾಡಿದೆ.

ಅದೇ ರೀತಿ ಕೆರೆಯ ದಂಡೆಯ ಮೇಲಿರುವ ಶಾಲೆಯ ಆಡಳಿತ ಮಂಡಳಿ ಕೂಡಾ ದಿನದಿಂದ ದಿನಕ್ಕೆ ತನ್ನ ಶಾಲಾ ಆವರಣವನ್ನು ವಿಸ್ತಾರ ಮಾಡಿಕೊಳ್ಳುವ ಸಲುವಾಗಿ ಕೆರೆಯ ಜಾಗೆಯನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಸಹ ಕೇಳಿಬರುತ್ತಲಿದೆ.

ಮುಲ್ಲಾನ ಕೆರೆ ವಿಸ್ತಾರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದರಿಂದ ಸಹಜವಾಗಿ ಕೆರೆಯಲ್ಲಿ ನೀರಿನ ಸಂಗ್ರಹ ಕೂಡಾ ಕಡಿಮೆಯಾಗಿದೆ. ಆ ನೀರು ಕೂಡಾ ಒಂದೆರಡು ತಿಂಗಳಲ್ಲಿ ಮಲೀನಗೊಂಡು ಯಾವುದಕ್ಕೂ ಬಳಕೆಯಾಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಅತಿಕ್ರಮಣಕ್ಕೆ ಒಳಗಾದ ಕೆರೆ ಕೇವಲ ತನ್ನ ವಿಸ್ತಾರವನ್ನಷ್ಟೇ ಕಡಿಮೆ ಮಾಡಿಕೊಳ್ಳದೇ, ಕೆರೆ ತುಂಬಿಸುವ ನೀರಿನ ಮೂಲಗಳು ಸಹ ಮಾಯವಾಗಿವೆ. ಇದರಿಂದ ಅಲ್ಪಸ್ವಲ್ಪ ಮಳೆ ಬಂದರೆ, ಕೆರೆಗೆ ನೀರು ಬರುವುದೇ ಇಲ್ಲ. ಹೀಗಾಗಿ ಕೆರೆ ಭರ್ತಿಯಾಗುವುದು ಅಪರೂಪ ಎನ್ನುವಂತಾಗಿದೆ.

ಸಾರ್ವಜನಿಕರ ಅಸಮಾಧಾನ: ಐತಿಹಾಸಿಕ ಹಿನ್ನೆಲೆಯುಳ್ಳ ಕೆರೆಯೊಂದನ್ನು ಅಭಿವೃದ್ಧಿ ಪಡಿಸಿ ನಗರದ ಜನತೆಗೆ ಅನುಕೂಲ ಮಾಡಿಕೊಡದೇ ತಾನೇ ತ್ಯಾಜ್ಯ ವಿಲೇವಾರಿ ಸ್ಥಳವನ್ನಾಗಿ ಮಾಡಿಕೊಂಡ ನಗರಸಭೆ ಕಾರ್ಯ ವೈಖರಿ ಸಹಜವಾಗಿ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದು ಕಾಲದಲ್ಲಿ ರೈತರು ಈ ಕೆರೆಯ ನೀರನ್ನು ಕೃಷಿ ಚಟುವಟಿಕೆಗೆ, ಜಾನುವಾರುಗಳಿಗೆ ಕುಡಿಯಲು ಹಾಗೂ ಮೈತೊಳೆಯಲು ಬಳಕೆ ಮಾಡಿಕೊಳ್ಳುತ್ತಿದ್ದರೆ, ಇಂದು ಜಾನುವಾರುಗಳಿಗೆ ಈ ಕೆರೆಯ ನೀರನ್ನು ಕುಡಿಸುವುದಿರಲಿ, ಮೈ ತೊಳೆಯಲು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ, ನಗರದ ತ್ಯಾಜ್ಯ ಸೇರಿ ಕೆರೆಯ ನೀರು ಅಷ್ಟೊಂದು ಮಲೀನವಾಗಿರುತ್ತದೆ.

`ನಗರದ ತ್ಯಾಜ್ಯ ವಿಲೇವಾರಿ ಮಾಡಲಿಕ್ಕೆ ಸರ್ಕಾರ ನಗರಸಭೆಗೆ ಗೌರಪುರದಲ್ಲಿ 20 ಎಕ್ಕರೆ ಜಮೀನು ನೀಡಿದ್ದರೂ ಕೂಡಾ, ಅಲ್ಲಿ ತ್ಯಾಜ್ಯ ವಿಲೇವಾರಿ ಮಾಡದೇ ತ್ಯಾಜ್ಯವನ್ನು ತಂದು ಮುಲ್ಲಾನ ಕೆರೆಯಲ್ಲಿ ಹಾಕುತ್ತಿರುವುದೇ ಕೆರೆ ಅವಸಾನದ ಅಂಚಿಗೆ ತಲುಪಲು ಕಾರಣ ಎಂದು ಹೇಳುತ್ತಾರೆ ನಗರ ಹೋರಾಟ ವೇದಿಕೆ ಅಧ್ಯಕ್ಷ ಹಾಗೂ ಸಂಯುಕ್ತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್‌ಕೋರಿಶೆಟ್ಟರ.

ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗದ ಕಾರಣ, ನಗರದಲ್ಲಿ ಅಂತರ್ಜಲಮಟ್ಟ ಕೂಡಾ ಗಣನೀಯವಾಗಿ ಕುಸಿದಿದೆ. ಕೂಡಲೇ ನಗರಸಭೆ ಅತಿಕ್ರಮವನ್ನು ತೆರವುಗೊಳಿಸಿ ಅದನ್ನು ಅಭಿವೃದ್ಧಿ ಪಡಿಸಬೇಕೆಂದು ಅವರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.