ADVERTISEMENT

ಮುಷ್ಟೂರಿಗೆ ಆಸರೆ ಸಿಗದೆ ನಿರಾಸೆ

ವಿಜಯ್ ಹೂಗಾರ
Published 8 ಫೆಬ್ರುವರಿ 2012, 8:45 IST
Last Updated 8 ಫೆಬ್ರುವರಿ 2012, 8:45 IST

ಹಾವೇರಿ: ಕಳೆದ ನಾಲ್ಕೂವರೆ ದಶಕಗಳಿಂದ ತುಂಗಭದ್ರಾ ಹಾಗೂ ಕುಮುದ್ವತಿ ನದಿಗಳ ಪ್ರವಾಹಕ್ಕೆ ಸಿಲುಕಿ ನಡುಗಡ್ಡೆಯಾಗುತ್ತಿರುವ ರಾಣೆಬೆನ್ನೂರ ತಾಲ್ಲೂಕಿನ ಮುಷ್ಟೂರು ಗ್ರಾಮಕ್ಕೆ ಸರ್ಕಾರದ `ಆಸರೆ~ ಸಿಗದೆ ನಿರಾಸೆಯಲ್ಲಿಯೇ ಮತ್ತೊಂದು ಪ್ರವಾಹ ಎದುರಿಸಲು ಜನರು ಸಜ್ಜಾಗಬೇಕಿದೆ.

300 ಕುಟುಂಬಗಳು ವಾಸವಿರುವ ಈ ಗ್ರಾಮವನ್ನು ಸ್ಥಳಾಂತರಿಸಲು ನಿರ್ಧರಿಸಿದ ಸರ್ಕಾರ 20 ವರ್ಷಗಳ ಹಿಂದೆಯೇ ಮನೆ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ಖರೀದಿಸಿ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಮನೆಗಳ ನಿರ್ಮಾಣಕ್ಕೆ ದಾನಿಗಳೂ ಮುಂದೆ ಬಂದಿದ್ದರು. ನಂತರ ದಾನಿಗಳು ಹಿಂದೆ ಸರಿದ ಪರಿಣಾಮ ಗ್ರಾಮ ಸ್ಥಳಾಂತರದ ಕನಸು ಇನ್ನೂ ನನಸಾಗಿಲ್ಲ.

2008 ರಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ತೊಂದರೆಗೆ ಸಿಲುಕಿದ ಗ್ರಾಮಗಳ ಸ್ಥಳಾಂತರಕ್ಕಾಗಿ ಸರ್ಕಾರ ದೇಣಿಗೆ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿತು. ಆದರೆ, ದಾನಿಗಳು ಹಿಂದೆ ಸರಿದುದನ್ನೆ ನೆಪ ಮಾಡಿಕೊಂಡು ಸರ್ಕಾರ ಈ ಗ್ರಾಮದ ಸ್ಥಳಾಂತರ ವಿಚಾರವನ್ನು ಕೈಬಿಟ್ಟಿರುವುದಕ್ಕೆ ಸರ್ಕಾರ ಸಾರ್ವಜನಿಕರ ಆಕ್ರೋಶ ಎದುರಿಸಬೇಕಾಗಿದೆ.

ಆಸರೆ ಯೋಜನೆಯಡಿ ಪ್ರವಾಹಪೀಡಿತ ಗ್ರಾಮಗಳಲ್ಲಿ ಮನೆಗಳನ್ನು ಕಟ್ಟಿಕೊಟ್ಟಿರುವಂತೆಯೇ ಇಲ್ಲೂ ಅಂತಹದ್ದೇ ಮನೆ ನಿರ್ಮಿಸಿ ಕೊಟ್ಟರೆ ಮಾತ್ರ ಊರು ಬಿಟ್ಟು ಹೋಗುತ್ತೇವೆ. ಇಲ್ಲವಾದರೆ, ಸತ್ತರೂ ಚಿಂತೆಯಿಲ್ಲ. ಸರ್ಕಾರ ತೋರಿಸಿದ ನಿವೇಶನದಲ್ಲಿ ಹೋಗಿ ವಾಸಿಸುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹತ್ತು ಬಾರಿ ನಡುಗಡ್ಡೆ
 ಈ ಗ್ರಾಮ 45 ವರ್ಷಗಳಲ್ಲಿ 10ಕ್ಕೂ ಹೆಚ್ಚು ಬಾರಿ ಪ್ರವಾಹಕ್ಕೆ ತುತ್ತಾಗಿ ನಡುಗಡ್ಡೆಯಾಗಿದೆ. 1967 ರಲ್ಲಿ ಮೊದಲ ಬಾರಿ ತೀವ್ರ ಪ್ರವಾಹಕ್ಕೆ ತುತ್ತಾದಾಗಲೇ ಗ್ರಾಮ ಸ್ಥಳಾಂತರದ ಕೂಗೂ ಕೇಳಿ ಬಂದಿತ್ತು. 1992 ರಲ್ಲಿ ಮತ್ತೊಮ್ಮೆ  ಪ್ರವಾಹಕ್ಕೆ ತುತ್ತಾದಾಗ ಜಿಲ್ಲಾಡಳಿತವು ಗ್ರಾಮವನ್ನು ಸ್ಥಳಾಂತರಿಸಲು ನಿರ್ಧರಿಸಿತ್ತು.
 
2009 ರಲ್ಲಿ ಬಿಜೆಪಿ ಸರ್ಕಾರ ಆಸರೆ ಯೋಜನೆ ಆರಂಭಿಸಿದಾಗ ಮತ್ತೆ ಈ ಕಾರ್ಯಕ್ಕೆ ಚಾಲನೆ ದೊರೆಯಿತು. 16 ಎಕರೆ ಸಾಕಾಗುವುದಿಲ್ಲ ಎಂದು ಮತ್ತೆ 10 ಎಕರೆ ಜಮೀನು ಖರೀದಿಸಿದ ಸರ್ಕಾರ, 300 ಮನೆಗಳನ್ನು ನಿರ್ಮಿಸಲು ಕರ್ನಾಟಕ ಗುತ್ತಿಗೆದಾರರ ಸಂಘದ ಜತೆ ಒಪ್ಪಂದ ಮಾಡಿಕೊಂಡಿತು. ತದನಂತರ ಗುತ್ತಿಗೆದಾರರ ಸಂಘ ಒಪ್ಪಂದದಿಂದ ಹಿಂದೆ ಸರಿದಿದ್ದರಿಂದ ಸ್ಥಳಾಂತರ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.

ನಿವೇಶನ ಹಂಚಿಕೆ

`ಮನೆಗಳನ್ನು ನಿರ್ಮಿಸಲು ಆಗುವುದಿಲ್ಲ ಎಂದು ಗೊತ್ತಾದ ಮೇಲೆ ಸರ್ಕಾರ ನಿವೇಶನ ರಚಿಸಿ, ಮನೆಗಳನ್ನು ನೀವೇ ಕಟ್ಟಿಕೊಳ್ಳಿ ಎಂದು ಸಂತ್ರಸ್ತರಿಗೆ ಪಟ್ಟಾಗಳನ್ನು ವಿತರಿಸಿದೆ. ಆ ಜಾಗದಲ್ಲಿ ವಿದ್ಯುತ್, ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗಿದೆ~ ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ತಿಳಿಸುತ್ತಾರೆ.
ಆದರೆ ಪಟ್ಟಾ ವಿತರಿಸಿ ಒಂದೂವರೆ ವರ್ಷವಾದರೂ ಅಲ್ಲಿ ಯಾವ ಸೌಲಭ್ಯವೂ ಇಲ್ಲ. ಹೀಗಾಗಿ ಯಾವ ಕುಟುಂಬವೂ ಅಲ್ಲಿಗೆ ತೆರಳಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.