ADVERTISEMENT

ಯುವಕರು ಬದುಕು ಕಟ್ಟಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 7:00 IST
Last Updated 1 ಫೆಬ್ರುವರಿ 2011, 7:00 IST

ಹಾವೇರಿ(ಹಾನಗಲ್ಲ): ‘ಯುವ ಜನತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ತಾವೇ ಮುಂದಾಗುವಂತಹ ಮನೋಭಾವ ಅವರಲ್ಲಿ ಬೆಳೆಸಬೇಕಿದೆ. ಆಗ ದಾರಿ ತಪ್ಪುತ್ತಿರುವ ಯುವಕರನ್ನು ಸರಿದಾರಿಗೆ ತರಲು ಸಾಧ್ಯವಾಗುತ್ತದೆ’

‘ದೇಶ ಅರ್ಪಣಾ ಭಾವದ ಸೇವೆಯನ್ನು ಅಪೇಕ್ಷಿಸುತ್ತಿದೆ ಎಂಬುದನ್ನು ಯುವಜನತೆ ಮನವರಿಕೆ ಮಾಡಿಕೊಳ್ಳಬೇಕು’, ‘ಯುವಕರಲ್ಲಿ ಸಮಯ ಪರಿಪಾಲನೆ ಪರಿಪಾಠವೇ ಇಲ್ಲದಾಗಿದೆ.ಇತ್ತೀಚಿನ ದಿನಗಳಲ್ಲಿ ವಾಹಿನಿಗಳಿಂದ ಯುವ ಸಮುದಾಯ ದಾರಿ ತಪ್ಪುತ್ತಿದ್ದಾರೆ. ಇಂತಹ ಅಭಿಪ್ರಾಯಗಳು ಸ್ವತಃ ಯುವಕರಿಂದಲೇ ಹಾನಗಲ್ಲನಲ್ಲಿ ಭಾನುವಾರ ನಡೆದ ನಾಲ್ಕನೇ ಜಿಲ್ಲಾ ಉತ್ಸವದ ಯುವಗೋಷ್ಠಿಯಲ್ಲಿ ಕೇಳಿಬಂದವು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕೆ.ಸಿ.ಕುಲಕರ್ಣಿ, ‘ಯುವಕರು ದೇಶದ ದೊಡ್ಡ ಆಸ್ತಿ ಅವರನ್ನು ನಂಬಿಕೊಂಡು ದೇಶ ದೊಡ್ಡ ಆಶಾಭಾವನೆ ಹೊತ್ತು ನಿಂತಿದೆ. ಅದಕ್ಕಾಗಿ ಯುವಕರು ತಮ್ಮ ಜವಾಬ್ದಾರಿ ಅರಿತು ತಮ್ಮ ಹಾಗೂ ದೇಶದ ಭವಿಷ್ಯ ರೂಪಿಸಬೇಕಿದೆ’ ಎಂದು ಹೇಳಿದರು. ಸಮುದಾಯದ ಆಶಾಭಾವನೆಯಂತೆ ಯುವಸಮೂಹ ತಮ್ಮ ಸಾಮರ್ಥ್ಯವನ್ನು ರುಜುವಾತು ಮಾಡಬೇಕಿದೆ ಎಂದರು.

‘ದೇಶದಾದ್ಯಂತ ತಾಂಡವಾಡುವ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಯುವಕರು ಮುಂದೆ ಬರಬೇಕಿದೆ ಎಂದು  ಪತ್ರಕರ್ತ ಗಂಗಾಧರ ಹೂಗಾರ ಆಶಯ ನುಡಿಗಳನ್ನಾಡಿದರು.

ಅತಿಥಿಯಾಗಿದ್ದ ಪತ್ರಕರ್ತ ಶಿವಾನಂದ ಗೊಂಬಿ ಮಾತನಾಡಿದರು. ಯುವ ಸಂವಾದದಲ್ಲಿ ಎಂ.ಬಿ.ಹಳೇಮನಿ, ಕೃಷ್ಣ ಜವಳಿ, ಷಣ್ಮುಖಪ್ಪ ಮುಚ್ಚಂಡಿ, ನಾಗರಾಜ ನಡುವಿನಮಠ, ಅಶೋಕ ಕೊಂಡ್ಲಿ, ಗಿರಿಜಾ ನಂದಿಹಳ್ಳಿ, ತೀರ್ಥಪ್ರಸಾದ ಸ್ಥಾನಿಕ, ಬಸವರಾಜ ಕೂಡಲಮಠ, ನಾಗರಾಜ ಹುಲ್ಲತ್ತಿ, ಎಚ್.ಎನ್.ಹೂಗಾರ, ಸಂತೋಷ ಅಪ್ಪಾಜಿ, ವಸಂತ ಕಡತಿ, ಚಂದ್ರಶೇಖರ ಕುಳೇನೂರು, ಸದಾಶಿವಪ್ಪ ಮುಂತಾದವರು ಭಾಗವಹಿಸಿದ್ದರು.ನಿರಂಜನ ಗುಡಿ ಸ್ವಾಗತಿಸಿದರು. ಐ.ಎ.ಲೋಕಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಜಡೆಗೊಂಡರ ನಿರೂಪಿಸಿದರು. ಗಿರೀಶ ದೇಶಪಾಂಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.