ADVERTISEMENT

ರಂಗಪಂಚಮಿ: ಕಾಮದಹನ, ಬಣ್ಣದೋಕುಳಿ ಇಂದು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 6:32 IST
Last Updated 17 ಮಾರ್ಚ್ 2014, 6:32 IST

ಹಾವೇರಿ: ಚುನಾವಣಾ ಕಾವು ರಂಗೇತ್ತಿರುವಾಗಲೇ ಹೋಳಿ ಹಬ್ಬದ ರಂಗ ಪಂಚಮಿಗೆ ನಗರ ಸಜ್ಜು ಗೊಂಡ್ದಿದು, ಸೋಮವಾರ ಬೆಳಿಗ್ಗೆ ಕಾಮದಹನ, ರಂಗಪಂಚಮಿ ಬಣ್ಣದೊಕಳಿ ನಡೆಯಲಿದೆ.

ಹಬ್ಬದ ಹಿನ್ನೆಲೆಯಲ್ಲಿ ಮುಂಜಾ ಗೃತಾ ಕ್ರಮವಾಗಿ ನಗರದಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಐದು ದಿನಗಳ ರತಿ ಕಾಮರನ್ನು ಪ್ರತಿಸ್ಠಾಪಿಸಲಾಗ್ದಿದು, ಸರ್ಕಾರಿ ಚಾವಡಿಯಲ್ಲಿ ಮೂರು ದಿನಗಳ ರತಿ ಕಾಮರನ್ನು ಪ್ರತಿಷ್ಠಾಪಿಸ ಲಾಗುತ್ತದೆ. ರಂಗ ಪಂಚಮಿ ದಿನ ಬೆಳಿಗ್ಗೆ ರತಿಕಾಮರ ದಹನ ಮಾಡುತ್ತಿದ್ದಂತೆ ಪರಸ್ಪರ ಬಣ್ಣ ಎರಚಿ ಬಣ್ಣದ ಹಬ್ಬಕ್ಕೆ ಚಾಲನೆ ನೀಡಿ ಸಂಜೆವರೆಗೆ  ಬಣ್ಣದಾಟ ನಡೆಯುತ್ತದೆ.

ಸಾರ್ವಜನಿಕರು ಸಿದ್ಧದೇವಪುರ ಗ್ರಾಮಕ್ಕೆ ಬಂಡಿ ಮೂಲಕ ತೆರಳಿ ಹೋಳಿ ಹಬ್ಬದ ಪ್ರಯುಕ್ತ ಪರಸ್ಪರ ಬಣ್ಣ ಎರಚಿ ಸೌಹಾರ್ದತೆ ಮೆರೆಯುತ್ತಾರಲ್ಲದೇ, ನಗರದ ಗ್ರಾಮದೇವತೆ ಓಣಿಯಿಂದ ಆರಂಭವಾಗುವ ಹೋಳಿ ಬಂಡಿ, ಸೋಗಿನ ಬಂಡಿಗಳು, ಗೌಡರ ಓಣಿ, ದೇಸಾಯಿ ಕೇರಿ, ಕಲ್ಲು ಮಂಟಪ ರಸ್ತೆ, ದೊಡ್ಡ ಬಸವೇಶ್ವರ ದೇವಸ್ಥಾನ, ಬಸ್ತಿ ಓಣಿ, ಎಂಜಿ ರಸ್ತೆ, ಗೌಳಿ ಗಲ್ಲಿ ಮೂಲಕ ಸಿದ್ಧದೇವಪುರಕ್ಕೆ ಬರಲಿವೆ.

ನಂತರ ಯಾಲಕ್ಕಿ ಓಣಿ, ಗುಜ್ಜರ ದೇವಸ್ಥಾನ, ಕುಂಬಾರರ ಓಣಿ, ಪುರದ ಓಣಿ, ಹತ್ತರಗೇರಿ, ಎಂಜಿ ರಸ್ತೆ, ಮೇಲಿನ ಪೇಟೆ, ಹಳೆ ಅಂಚೆ ಕಚೇರಿ ಮೂಲಕ ದ್ಯಾಮವ್ವ ಗುಡಿಗೆ ಮೆರವಣಿಗೆ ಪೂರ್ಣಗೊಳಿಸಲಿವೆ.

ಹೋಳಿ ಹಬ್ಬದಂಗವಾಗಿ ನಗರದ ಹೋಳಿ ಆಚರಣೆ ಸಮಿತಿ ಯುವಕರಿಗಾಗಿ ಹಲಗೆ ಬಾರಿಸುವ ಸ್ಪರ್ಧೆ,ಸೋಗಿನ ಬಂಡಿಗಳ ಸ್ಪರ್ಧೆ ಆಯೋಜಿಸಲಾಗಿದ್ದು, ಮೂರು ದಿನಗಳಿಂದ ಸೋಗಿನ ಬಂಡಿ ಸ್ಪರ್ಧೆಗಳು, ಹಲಗೆ ಬಾರಿಸುವ ನಡೆದಿವೆ. ಹೋಳಿ ಹಬ್ಬದ ದಿನದಂದು ಯುವಕರಿಗೆ ಗಡಿಗೆ ಒಡೆಯುವ ಸ್ಪರ್ಧೆ, ಸೋಗಿನ ಸ್ಪರ್ಧೆ ಆಯೋಜಿಸಲಾಗಿದೆ.

ಹೋಳಿ ಹಬ್ಬದಂಗವಾಗಿ ಸೋಮವಾರ ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆವರೆಗೆ ನಗರದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.