ADVERTISEMENT

ರಟ್ಟಿಹಳ್ಳಿ: ವಿಎಚ್‌ಪಿ, ಬಜರಂಗದಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 5:10 IST
Last Updated 2 ಅಕ್ಟೋಬರ್ 2012, 5:10 IST

ಹಿರೇಕೆರೂರ: ತಾಲ್ಲೂಕಿನ ರಟ್ಟೀಹಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಪೊಲೀಸರು ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸೋಮವಾರ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಂಕರರಾವ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಸರ್ವಜ್ಞ ವೃತ್ತದವರೆಗೆ ಸಾಗಿ ಬಂದು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಟ್ಟೀಹಳ್ಳಿಯಲ್ಲಿ ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆ ಮೇಲೆ ಅನಿರೀಕ್ಷಿತವಾಗಿ ಲಾಠಿ ಪ್ರಹಾರ ಹಾಗೂ ಅಶ್ರುವಾಯು ಸಿಡಿಸುವ ಮೂಲಕ ಹಿಂದೂ ಮೆರವಣಿಗೆ ಮೇಲೆ ಪೊಲೀಸರು ದೌರ್ಜನ್ಯ ಮಾಡಿ, ಅಮಾಯಕ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ. ಗಲಾಟೆಯ ಕಾರಣದಿಂದ ನಡು ರಸ್ತೆಯಲ್ಲಿದ್ದ ಗಣೇಶನ ಮೂರ್ತಿಗಳನ್ನು ಅಗೌರವದಿಂದ ವಿಸರ್ಜನೆ ಮಾಡಿ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪೊಲೀಸ್ ದೌರ್ಜನ್ಯದ ಲಾಭ ಪಡೆದ ಕೆಲವು ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿ ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿತಕ್ಕೆ ಕಾರಣರಾಗಿದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಕಾರಣರಾದ ಪೊಲೀಸ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿ ಪ್ರಾಂತ ಹಿಂದೂ ಜಾಗರಣಾ ವೇದಿಕೆ  ಸಂಘಟನಾ ಕಾರ್ಯದರ್ಶಿ ಸೂ.ಕೃಷ್ಣಮೂರ್ತಿ, ತಾಲ್ಲೂಕು ಬಜರಂಗ ದಳದ ಸಂಚಾಲಕ ಶಿವಕುಮಾರ ಪ್ಯಾಟೇರ, ದೇವರಾಜ ಹಂಚಿನಮನಿ, ವಿಜಯ ಮುದಿಗೌಡ್ರ, ಅನಿಲ ಹಲವಾಗಿಲ, ಅಜಯ ಕಲ್ಯಾಣಿ, ನವೀನ ಹಲವಾಗಿಲ, ವಿವೇಕ ಅರಳಿ, ಶಿವು ಚಿಂದಿ, ಸಂತೋಷ ಬೆಳಗುತ್ತಿ, ಸಚಿನ್ ಬಡಳ್ಳಿ, ಪ್ರಶಾಂತ ಕೋರಿಶೆಟ್ಟರ್, ಸುಪ್ರೀತ್ ಆರಾಧ್ಯಮಠ, ಸಂದೇಶ ಯತ್ತಿನಹಳ್ಳಿ, ಎಸ್.ಆರ್.ರಾಘವೇಂದ್ರ, ವಿನಾಯಕ ವಾಲಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.