ADVERTISEMENT

ರಸ್ತೆ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 10:10 IST
Last Updated 9 ಅಕ್ಟೋಬರ್ 2012, 10:10 IST

ಶಿಗ್ಗಾವಿ: ಪಟ್ಟಣದ 22ನೇ ವಾರ್ಡ್‌ದಲ್ಲಿ ಖಾಸಗಿ ನಿವೇಶನ ಹಾಗೂ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿ ರುವ ಪುರಸಭೆಯ ಕ್ರಮವನ್ನು ಖಂಡಿಸಿ ಸಾರ್ವಜನಿಕರು ಎಂಜಿನಿಯರ್‌ಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ  ನಡೆಯಿತು.

ಪಟ್ಟಣದ ಗಾಂಧಿ ನಗರದ ಖಾಸಗಿ ಜಾಗೆಯಲ್ಲಿರುವ ನಿವೇಶನ ಹಾಗೂ ಮನೆಗಳನ್ನ ಒಡೆದು ಹಾಕಿ  ಪುರಸಭೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಈ ರಸ್ತೆ ನಿರ್ಮಾಣಕ್ಕೆ ಅದರ ಮಾಲೀಕರು ಜಾಗೆಯ ಹಕ್ಕನ್ನು ಬಿಟ್ಟುಕೊಟ್ಟಿಲ್ಲ. ಆದರೂ ವಾರ್ಡ್ ಸದಸ್ಯರ ಸ್ವಂತ ಹಿತಾಸಕ್ತಿಗೆ ಪುರಸಭೆ ಎಂಜಿನಿಯರ್ ಕ್ರಿಯಾ ಯೋಜನೆ ತಯಾರಿಸಿ ಅದಕ್ಕೆ ಅನುಮೋದನೆ ಪಡೆದು ಕಾಮಗಾರಿಯ ಗುತ್ತಿಗೆಯನ್ನು ನೀಡಿದ್ದಾರೆ ಎಂದು ಆರೋಪಿಸಿದರು. ಕಾನೂನು ಬಾಹಿರ ಕಾಮಗಾರಿಯನ್ನು ಕೈಗೊಳ್ಳಲು ನಾವು ಬಿಡುವುದಿಲ್ಲ ಎಂದರು.

ಪುರಸಭೆ ಸದಸ್ಯೆ ವೀಣಾ ಕುರ್ಡೇಕರ ಖಾಸಗಿ ಜಾಗದ ಮೇಲೆ ರಸ್ತೆ ನಿರ್ಮಾಣಕ್ಕೆ ಶಿಫಾರಸ್ಸು ಮಾಡಿದ್ದಾರೆ. ಅಲ್ಲದೆ  ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳನ್ನು ಪೀಡಿಸುತ್ತಿದ್ದಾರೆ ಎಂದು ನಾಗರಿಕರು ದೂರಿದರಲ್ಲದೆ, ಸದಸ್ಯೆಯ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಮುಖ್ಯಾ ಧಿಕಾರಿ ಎಸ್.ಹೆಚ್.ನಾಯ್ಕರ, ಖಾಸಗಿ ಜಾಗೆಯಲ್ಲಿ ಸರ್ಕಾರಿ ಅನುದಾನ ಬಳಕೆ ಮಾಡಿ ಕಾಮಗಾರಿ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಹಿಂದಿನ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್‌ನಿರ್ಣಯ  ಕೈಗೊಂಡಿದ್ದಾರೆ. ಈ ಕಾಮ ಗಾರಿಗೆ ನಿಗದಿಪಡಿಸಲಾದ ಅನುದಾನ ವನ್ನು ಬೇರೊಂದು ಕಾಮಗಾರಿಗೆ ಬಳಕೆ ಮಾಡುವುದಾಗಿ ಹೇಳಿದರು.

ಇಷ್ಟಕ್ಕೆ ಪ್ರತಿಭಟನೆ ಕೈಬಿಡದ ಜನರು ಕಾಮಗಾರಿ ಕೈಬಿಟ್ಟಿರುವ ಕುರಿತು ಹಿಂಬರಹ ನೀಡಬೇಕು ಕಾನೂನು ಬಾಹಿರ ರಸ್ತೆ ನಿರ್ಮಾಣಕ್ಕೆ ಮಂದಾದ ಎಂಜಿನಿಯರ್ ಮೇಲೆ ಕ್ರಮ ಜರುಗಿಸ ಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಮುಖ್ಯಾಧಿಕಾರಿಗಳು ಒಪ್ಪಿ ಕೊಂಡ ನಂತರ ಪ್ರತಿಭಟನೆ ಹಿಂದೆ ಪಡೆದರು.

ರಾಮಣ್ಣ ಪವಾರ, ವೀರಭದ್ರಪ್ಪ ದೊಡ್ಡಬಾರ್ಕಿ, ಫಿರೋಜ್  ಕಾಮನ ಹಳ್ಳಿ, ಅಶೋಕ ರಾಮಣಮಲ್ಲೇಶಪ್ಪ ಬಾರ ಕೇರ, ನಾಗಪ್ಪ ಚಾಕಾಪುರ, ಖಾಸಿಂಸಾಬ್ ಬೆಳಗಲಿ, ಚಂದ್ರಪ್ಪ ಹಾದಿಮನಿ, ಮಹಾದೇವಪ್ಪ, ಮುದಕಪ್ಪ ಬಾರಕೇರ, ರಾಮಣ್ಣ ಮಣ್ಣವಡ್ಡರ, ಸುಂಕಪ್ಪ ಮಣ್ಣವಡ್ಡರ, ಲಕ್ಷಪ್ಪ ಬಾರಕೇರ, ನಾಗಪ್ಪ ಬಾರಕೇರ ಹಾಜರಿದ್ದರು.

ವಾರ್ಷಿಕ ಶಿಬಿರ
ಅಕ್ಕಿಆಲೂರ: ಸಮೀಪವಿರುವ ಮೂಡೂರ ಅಜಗುಂಡಿಕೊಪ್ಪದಲ್ಲಿ ಸ್ಥಳೀಯ ಎನ್.ಡಿ.ಪಿ.ಯು. ಕಾಲೇಜಿನ ಎನ್‌ಎಸ್‌ಎಸ್. ವಾರ್ಷಿಕ ಶಿಬಿರ ಇದೇ 10ರಂದ ಸಂಜೆ 4ಕ್ಕೆ ಉದ್ಘಾಟನೆ ನಡೆ ಯುವುದು.

ತಾಪಂ ಅಧ್ಯಕ್ಷೆ ಲಲಿತವ್ವ ಹಿರೇಮಠ ಶಿಬಿರವನ್ನು ಉದ್ಘಾಟಿಸುವರು. ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ ಧ್ವಜಾರೋಹಣ ನೆರೆವೇರಿಸಲಿದ್ದಾರೆ ಎಂದು ಶಿಬಿರಾಧಿಕಾರಿ ಎಸ್.ಬಿ.ಕಲ್ಲೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.