ADVERTISEMENT

ರೈತರಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 6:40 IST
Last Updated 15 ಮಾರ್ಚ್ 2011, 6:40 IST

ಹಿರೇಕೆರೂರ: ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಖಂಡಿಸಿ, ರೈತ ಪರವಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘದ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ಪಟ್ಟಣದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.ರೈತಸಂಘದ ರಾಜ್ಯ ಕಾರ್ಯದರ್ಶಿ ಮಂಜುನಾಥಗೌಡ, ‘ಅಕ್ರಮ-ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿರುವ ನೂರಾರು ರೈತರಿಗೆ ಸುಮಾರು 15 ವರ್ಷಗಳು ಕಳೆಯುತ್ತ ಬಂದರೂ ಸರಿಯಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ, ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಹಣ ನೀಡಿದವರಿಗೆ ಸಂಪರ್ಕ ನೀಡಲಾಗುತ್ತಿದೆ. ಇಲಾಖೆಯಲ್ಲಿ ನಿತ್ಯ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ವಿ.ಕೆಂಚಳ್ಳೇರ, ‘ಬೇಕಾಬಿಟ್ಟಿ ವಿದ್ಯುತ್ ಪೂರೈಕೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ನೀರಿಲ್ಲದೇ ಬೆಳೆಗಳು ಒಣಗುತ್ತಿವೆ. ಕಾರಣ ನಿರಂತರವಾಗಿ 8 ತಾಸು ತ್ರೀಫೇಸ್ ವಿದ್ಯುತ್ ನೀಡಬೇಕು. ಗ್ರಾಮೀಣ ಪ್ರದೇಶಗಳಿಗೆ ರಾತ್ರಿಪೂರ್ಣ ಸಿಂಗಲ್‌ಫೇಸ್ ನೀಡಬೇಕು. ತಾಲ್ಲೂಕಿನ 900 ಪಂಪ್‌ಸೆಟ್‌ಗಳಿಗೆ ಕಂಬ ಮತ್ತು ವೈರುಗಳನ್ನು ಪೂರೈಕೆ ಮಾಡಬೇಕು. ಪಂಪ್‌ಸೆಟ್‌ಗಳ ಹಳೆಯ ಬಾಕಿ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡರಾದ ನಾಗನಗೌಡ ಪಾಟೀಲ, ಮಲ್ಲನಗೌಡ ಮಾಳಗಿ, ಮಹೇಶ ಕೊಟ್ಟೂರ, ಶಿವಾನಂದ ಹುಲ್ಲಿನಕೊಪ್ಪದ, ಹೂವನಗೌಡ ಮಳವಳ್ಳಿ, ಬಸನಗೌಡ ಗಂಗಪ್ಪಳವರ, ಗಂಗನಗೌಡ ಮುದಿಗೌಡ್ರ, ಕರಬಸಪ್ಪ ಹುಲ್ಲಿನಕೊಪ್ಪದ, ನಾಗಪ್ಪ ನಿಂಬಿಗೊಂದಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ರೈತಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಸ್ಕಾಂ ಕಾರ್ಯಾಲಯಕ್ಕೆ ತೆರಳಿದರು.ಹಾವೇರಿಯಿಂದ ಆಗಮಿಸಿದ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಎಂ. ಹಿದಾಯತ್ ಉಲ್ಲಾ, ಇಇ ಓಂಕಾರಪ್ಪ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.