ADVERTISEMENT

ಲಿಂಗ ಸಮಾನತೆ ನಮ್ಮೆಲ್ಲರ ಹೊಣೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 9:56 IST
Last Updated 27 ಡಿಸೆಂಬರ್ 2017, 9:56 IST

ಶಿಗ್ಗಾವಿ: ’ಲಿಂಗ ತಾರತಮ್ಯ ಮನುಕುಲಕ್ಕೆ ಮಾರಕ' ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಧನ ಘೋಡಕೆ ಹೇಳಿದರು. ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನಲ್ಲಿ ಮಂಗಳವಾರ ಆರೋಗ್ಯ ಇಲಾಖೆ ವತಿಯಿಂದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳ ತಡೆ ಕಾಯ್ದೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಶಿಶು ಎಂದಾಕ್ಷಣ ನಿರಾಕರಣೆ ಬೇಡ, ಮನುಕುಲದ ಸಂತತಿ ಸಾಗಿ ಬರಲು ಹೆಣ್ಣು ಮಕ್ಕಳ ಪಾತ್ರ ಪುರುಷರಷ್ಟೇ ಸಮಾನವಾಗಿದೆ. ಭ್ರೂಣ ಹತ್ಯೆ ಅಪರಾಧವಾಗಿದೆ. ಇವುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಇಂಥ ಪ್ರವೃತ್ತಿಯನ್ನು ಪ್ರಜ್ಞಾವಂತ ಯುವಕರು ತಡೆಯಲು ಮುಂದಾಗಬೇಕು’ ಎಂದರು.

ವಕೀಲ ಪುಟ್ಟಪ್ಪ ಕಲ್ಯಾಣ ಮಾತನಾಡಿ, ಬಾಲ್ಯ ವಿವಾಹ, ಅನಕ್ಷರತೆ, ವರದಕ್ಷಿಣೆ, ಭ್ರೂಣ ಹತ್ಯೆ ಸೇರಿದಂತೆ ಹಲವು ಅನಿಷ್ಟ ಪದ್ಧತಿಯಿಂದ ಹೆಣ್ಣು ಶಿಶುಗಳ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಮಹಿಳೆಯರು ಎಚ್ಚೆತ್ತುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅಂಥಹ ಅನಿಷ್ಟ ಪದ್ದತಿಗಳ ವಿರೋಧ ಹೋರಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ADVERTISEMENT

ಹುಬ್ಬಳ್ಳಿ ಸಂಕ್ರಾಮಿಕ ರೋಗ ತಜ್ಞೆ ಡಾ.ಜೋಸ್ನಾ ರಾಯಣ್ಣವರ ಮಾತನಾಡಿ, ಅನಿಷ್ಟ ಪದ್ಧತಿಗಳ ತಡೆಯಲು ಸಂಘ,ಸಂಸ್ಥೆಗಳ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಕಾರ್ಯರ್ತರು ಸ್ವ ಪ್ರೇರಣೆಯಿಂದ ಜನಜಾಗೃತಿ ಮೂಡಿಸಲು ಸಹಕರಿಸಬೇಕು ಎಂದರು. ತಾಲ್ಲೂಕು ಆರೋಗ್ಯ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಕನಕ್ಕನವರ ಮಾತನಾಡಿದರು.

ಹುಬ್ಬಳ್ಳಿ ಸಮಾಜ ವಿಜ್ಞಾನ ಭೋಧಕ ಎಂ.ಎಫ್‌.ಕುರವಳ್ಳಿ, ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪಾರವ್ವ ಆರೇರ್‌ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್‌.ವಿ.ಸರ್ಜಾಪುರ ಇದ್ದರು. ಪ್ರೊ.ಕೆ.ಬಸಣ್ಣ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.