ADVERTISEMENT

ವಿದ್ಯಾರ್ಥಿಗಳಿದ್ದಾರೆ ಆದರೆ, ಕೊಠಡಿಗಳಿಲ್ಲ...

​ಪ್ರಜಾವಾಣಿ ವಾರ್ತೆ
Published 19 ಜೂನ್ 2017, 5:20 IST
Last Updated 19 ಜೂನ್ 2017, 5:20 IST
ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡ ಕೊಠಡಿಯ ನೋಟ
ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡ ಕೊಠಡಿಯ ನೋಟ   

ಬ್ಯಾಡಗಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾಗಿತಿ ಕ್ಷೀಣಿಸುತ್ತಿದೆ ಎಂಬ ದೂರು ಸಾಮಾನ್ಯ. ಆದರೆ, ತಾಲ್ಲೂಕಿನ ಗುಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿದೆ. ಆದರೆ, ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕೊಠಡಿಗಳ ಸಮಸ್ಯೆ ಎದುರಾಗಿದೆ.

ಒಂದರಿಂದ ಏಳನೇ ತರಗತಿ ವರೆಗೆ ಪಾಠಗಳು ನಡೆಯುವ ಈ ಶಾಲೆಯಲ್ಲಿ ಪ್ರಸಕ್ತ ವರ್ಷ 260 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಏಳನೇ ತರಗತಿಯೊಂದರಲ್ಲಿಯೇ 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ, ಪುಟ್ಟ ಕೊಠಡಿಯಲ್ಲಿ  ಅಷ್ಟೂ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

‘ಏಳನೇ ತರಗತಿಗೆ ಇನ್ನೊಂದು ಕೋಣೆಯ ಅವಶ್ಯಕತೆ ಇದೆ. ಶಿಥಿಲಗೊಂಡ 2 ಕೊಠಡಿಗಳನ್ನು ಕೆಡವಲು 2014ರಲ್ಲಿಯೇ ಅನುಮತಿ ಪಡೆಯಲಾಗಿದೆ. ಅದಕ್ಕೆ ತಗಲುವ ವೆಚ್ಚ ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವುಗಳನ್ನು ಕೆಡವಲು ಸಾಧ್ಯವಾಗಿಲ್ಲ. ಇನ್ನೊಂದು ವರ್ಗಕೋಣೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಕುಮಾರ ವರೂರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಇದು ಕೇವಲ ಗುಂಡೇನಹಳ್ಳಿ ಶಾಲೆಯ ದುಸ್ಥಿತಿಯಲ್ಲ. ತಾಲ್ಲೂಕಿನಲ್ಲಿ 158ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದು, ಅದರಲ್ಲಿ 12 ಶಾಲಾ ಕಟ್ಟಡಗಳು ಅಪಾಯದ ಹಂತದಲ್ಲಿವೆ.

ಅಲ್ಲದೇ, ತಾಲ್ಲೂಕಿನ ಬಹುತೇಕ ಪ್ರಾಥಮಿಕ ಶಾಲೆಗಳು ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಆಟೋಪಕರಣ ಹಾಗೂ ಪೀಠೋಪಕರಣಗಳ ಕೊರತೆ ಎದುರಿಸುತ್ತಿವೆ. ಈ ಪೈಕಿ ಉರ್ದು ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪ್ರಮಾಣ ಹೆಚ್ಚಿದೆ ಎಂದು ಮೂಲಗಳು ಹೇಳಿವೆ.

ತಾಲ್ಲೂಕಿನ ಚಿನ್ನಿಕಟ್ಟಿ, ಹೆಡಿಗ್ಗೊಂಡ, ಇಂಗಳಗೊಂದಿ ಪ್ಲಾಟ್‌, ಗುಂಡೇನಹಳ್ಳಿ, ಮೋಟೆಬೆನ್ನೂರ, ಆಣೂರು ಸೇರಿದಂತೆ 12ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ಅಪಾಯದ ಶಿಥಿಲಗೊಂಡಿದ್ದು, ತರಗತಿಗೆ ಬೇರೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಶಾಲೆಗಳ ದುರಸ್ತಿಗಾಗಿ ಜಿಲ್ಲಾ ಪಂಚಾಯ್ತಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿ ವರ್ಷಗಳೇ ಕಳೆದರೂ, ಯಾವುದೇ ಅನುದಾನ ಸಿಕ್ಕಿಲ್ಲ.

‘ಮೋಟೆಬೆನ್ನೂರ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 250ಕ್ಕೂ ಅಧಿಕ ಮಕ್ಕಳು ಶಿಕ್ಷಣ ಕಲಿಯುತ್ತಿವೆ. ಆದರೆ, ಇಲ್ಲಿ ಶೌಚಾಲಯವೇ ಇಲ್ಲ. ಇದರಿಂದ ಮಕ್ಕಳಿಗೆ ಶಿಕ್ಷಕರಿಗೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮೂಲಕ ಅನುದಾನ ಪಡೆಯಲು ಮಾಡಿದ ಯತ್ನ ಸಫಲವಾಗಲಿಲ್ಲ. ಕಚೇರಿಗೆ ಅಲೆದು ಹೈರಾಣಾಗಿ ಹೋಗಿದ್ದೇವೆ’ ಎಂದು ಸ್ಥಳೀಯ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಗೌರಾಪುರ ಹಾಗೂ ಸದಸ್ಯ ಉಮೇಶ ಸವಣೂರ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.