ADVERTISEMENT

`ವೃತ್ತಿಪರ ಕಾಲೇಜು ಸ್ಥಾಪಿಸಿ'

ಮುಖ್ಯಮಂತ್ರಿಗೆ ಎಸ್‌ಎಫ್‌ಐ ಮನವಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 6:02 IST
Last Updated 4 ಜೂನ್ 2013, 6:02 IST

ಹಾವೇರಿ: ಜಿಲ್ಲೆಯಲ್ಲಿ ಸರ್ಕಾರಿ ಐಟಿಐ, ಡಿಪ್ಲೊಮಾ, ಬಿ.ಇಡಿ, ಬಿ.ಪಿ.ಎಡ್, ಪದವಿ ಮಹಿಳಾ ಕಾಲೇಜು ಹಾಗೂ ಕಾನೂನು ಕಾಲೇಜುಗಳನ್ನು ಮಂಜೂರು ಮಾಡಬೇಕು ಎಂದು ಭಾರತ ವಿದ್ಯಾರ್ಥಿ ಪಡರೇಷನ್ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಭಾನುವಾರ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ ಎಸ್‌ಎಫ್‌ಐ ಪದಾಧಿಕಾರಿಗಳು, ಹಾವೇರಿ ಜಿಲ್ಲಾ ಕೇಂದ್ರವಾಗಿ ಹದಿನೈದು ವರ್ಷ ಕಳೆದರೂ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಶೈಕ್ಷಣಿಕವಾಗಿ ತುಂಬಾ ಹಿಂದುಳಿದೆ. ಇದಕ್ಕೆ ಪೂರಕವಾದ ಕಾಲೇಜುಗಳು ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ವೃತ್ತಿಪರ ಕಾಲೇಜುಗಳು ಇಲ್ಲದ್ದರಿಂದ ಬಡ ಹಾಗೂ ಮಧ್ಯಮ ವಿದ್ಯಾರ್ಥಿಗಳು ದುಬಾರಿ ಹಣ ತೆತ್ತು ಶಿಕ್ಷಣ ಕಲಿಯದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಗೆ ಈಗಾಗಲೇ ಮಂಜೂರಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜ್ ಕಟ್ಟಡ ಕಾಮಗಾರಿ ಆರಂಭಿಸಬೇಕು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಊಟದ ಭತ್ಯೆಯನ್ನು 3,500 ರೂಪಾಯಿಗಳಿಗೆ ಹೆಚ್ಚಿಸಬೇಕು. ವಸತಿ ನಿಯಲಕ್ಕೆ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ವಸತಿ ನಿಲಯಕ್ಕೆ ಪ್ರವೇಶ ಕಲ್ಪಿಸಬೇಕು. ಈಗಿರುವ ವಸತಿ ನಿಲಯಗಳಿಗೆ ಸ್ವಂತಕಟ್ಟಡದ ಜೊತೆಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೋನೆಶನ್ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಹೇಳಿದ್ದಾರೆ.

ಪ್ರಸಕ್ತ ಬಟೆಜ್‌ನಲ್ಲಿ ಶಿಕ್ಷಣಕ್ಕಾಗಿ ಶೇ 30 ರಷ್ಟು ಹಣ ಮೀಸಲಿಡಬೇಕು. ಖಾಸಗಿ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಯನ್ನು ಕೈಬಿಟ್ಟು, ಸರ್ಕಾರಿ ವಿವಿಗಳ ಸ್ಥಾಪನೆ ಗಮನ ಹರಿಸಬೇಕು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ `ಲೈಂಗಿಕ ಕಿರುಕುಳ ವಿರೋಧಿ' ಸಮಿತಿ ರಚಿಸಬೇಕು. ಖಾಲಿ ಇರುವ ಶಿಕ್ಷಕರ, ಉಪನ್ಯಾಸಕರ ಮತ್ತು ಭೋದಕೇತರ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಶೀಘ್ರದಲ್ಲಿಯೇ ಆದೇಶ ನೀಡಬೇಕು. ಶಿಕ್ಷಣದ ಕೋಮುವಾದೀಕರಣ ಬಿಟ್ಟು, ವೈಜ್ಞಾನಿಕ ಪ್ರಗತಿ ಮತ್ತು ಉದ್ಯೋಗಾಧಾರಿತ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ರಾಜ್ಯ ಘಟಕದ ಉಪಾಧ್ಯಕ್ಷ ನಾರಾಯಣ ಕಾಳೆ, ಜಿಲ್ಲಾ ಸಮಿತಿ ಅಧ್ಯಕ್ಷ ಬಸವರಾಜ ಪೂಜಾರ, ಉಪಾಧ್ಯಕ್ಷ ಸುಭಾಷ್ ಎಂ ಮತ್ತು ಮಂಜುನಾಥ ಪೂಜಾರ, ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ, ಬ್ಯಾಡಗಿ   ತಾಲ್ಲೂಕು ಅಧ್ಯಕ್ಷ ವಿಜಯಕುಮಾರ ಶಿಡ್ಲಣ್ಣನವರ, ಉಪಾಧ್ಯಕ್ಷ ಬಸವರಾಜ ಬಾರ್ಕಿ ಮತ್ತು  ವಿನಾಯಕ ವೈ, ಕಾರ್ಯದರ್ಶಿ ವಸಂತಕುಮಾರ ಬ್ಯಾಟಪ್ಪನವರ, ಮಲ್ಲೇಶ ಗೋಟಪ್ಪನವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.