ADVERTISEMENT

‘ಶಂಕರ್‌ ವ್ಯಕ್ತಿತ್ವಕ್ಕೆ ಬಿಜೆಪಿ ಹಿಡಿಸದು’

ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವ ಶಂಕರ್‌ಗೆ ಕ್ಷೇತ್ರದ ಜನರ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 11:36 IST
Last Updated 19 ಮೇ 2018, 11:36 IST

ರಾಣಿಬೆನ್ನೂರು: ಕ್ಷೇತ್ರದ ಕೆಪಿಜೆಪಿ ಶಾಸಕ ಆರ್. ಶಂಕರ್ ಅವರು ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಅವರು ಕೆ.ಎಸ್‌.ಈಶ್ವರಪ್ಪ ಅವರೊಂದಿಗೆ ಕಾಣಿಸಿಕೊಂಡಾಗ ಅವರು ಬಿಜೆಪಿಗೆ ಹೋಗುತ್ತಾರೆ ಎನ್ನುವ ಗುಸುಗುಸು ಕ್ಷೇತ್ರದಲ್ಲಿತ್ತು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಶಂಕರ್‌ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್‌– ಜೆಡಿಎಸ್‌ ಕೂಟಕ್ಕೆ ಬೆಂಬಲ ನೀಡಬಹುದು ಎಂಬ ಮಾತುಹರಿದಾಡುತ್ತಿವೆ.

ಕಾಂಗ್ರೆಸ್‌ನ ಜತೆ ಇರುವುದಾಗಿ ಶಂಕರ್‌ ಈಗಾಗಲೇ ಸುದ್ದಿ ಮಾಧ್ಯಮಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರ ನಡೆ ಏನಿರಬೇಕು ಎಂದು ಮತದಾರರನ್ನು ಕೇಳಿದಾಗ ಭಿನ್ನ ಉತ್ತರ ಬಂದಿದೆ.

ADVERTISEMENT

‘ಮುಂದಿನ ಐದು ವರ್ಷ ಆಡಳಿತ ನಡೆಸಬಹುದಾದ ಪಕ್ಷದ ಜೊತೆಗೆ ಇರಬೇಕು. ಹೀಗಾಗಿ, ಯಾರು ಮೇಲುಗೈ ಸಾಧಿಸಬಹುದು ಎಂಬುದನ್ನು ಕೂಲಕಂಷವಾಗಿ ಪರಿಶೀಲಿಸಿ ನಂತರ ನಿರ್ಧಾರ ಕೈಗೊಳ್ಳಬೇಕು’ ಎಂದು ಆರ್‌. ಶಂಕರ್‌ ಅಭಿಮಾನಿಗಳ ಬಳಗದ ಜಗದೀಶ್‌ ಎಲಿಗಾರ ಹೇಳಿದರು.‌

‘ಜೆಡಿಎಸ್‌ – ಕಾಂಗ್ರೆಸ್ ಮೈತ್ರಿಕೂಟವನ್ನು ಬೆಂಬಲಿಸುವುದೇ ಸೂಕ್ತ. ಎಲ್ಲ ಧರ್ಮ, ಜಾತಿ, ವರ್ಗಗಳನ್ನು ಸಮಾನ
ವಾಗಿ ಕಾಣುವ ಆರ್. ಶಂಕರ್‌ ವ್ಯಕ್ತಿತ್ವಕ್ಕೆ ತಕ್ಕಂತೆ ಈ ಪಕ್ಷಗಳ ಸಿದ್ಧಾಂತಗಳಿವೆ’ ಎಂದು ಕೆಪಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಪ್ರಿಯಾಂಕಾ ಹೇಳಿದರು.

‘ಸಿದ್ದರಾಮಯ್ಯ ಸರ್ಕಾರವು ಹಿಂದುಳಿದವರಿಗೆ, ಬಡವರಿಗೆ, ಪರಿಶಿಷ್ಟರಿಗೆ, ರೈತರಿಗೆ ಸಾಕಷ್ಟು ಕೊಡುಗೆ ನೀಡಿದೆ.ಇಂತಹ ಕಾರ್ಯಕ್ರಮಗಳು ಮುಂದುವರಿಯಬೇಕಾದರೆ, ಜೆಡಿಎಸ್– ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿಸುವುದು ಉತ್ತಮ. ಅವರು ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುವ ವಿಶ್ವಾಸ ಇದೆ’ ಎಂದು ಗುತ್ತಿಗೆದಾರ ಕಿಶೋರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.