ADVERTISEMENT

`ಸಕಾಲ'ದಿಂದ ಭ್ರಷ್ಟಾಚಾರ ಗಣನೀಯ ಕಡಿಮೆ'

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 9:50 IST
Last Updated 18 ಡಿಸೆಂಬರ್ 2012, 9:50 IST

ಹಾವೇರಿ: `ಸಕಾಲ ಯೋಜನೆ ಅನುಷ್ಠಾನಕ್ಕೆ ತಂದ ಮೇಲೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಹಾವಳಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಎರಡನೇ ಹಂತದಲ್ಲಿ 12 ಇಲಾಖೆಗಳ 114 ಸೇವೆಗಳನ್ನು ಸಕಾಲ ವ್ಯಾಪ್ತಿಗೆ ಸೇರ್ಪಡೆ ಮಾಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಕಾಲ ಯೋಜನೆ ಜಾರಿಗೆ ತರುವ ಮುನ್ನ ಸರ್ಕಾರಿ ಕಚೇರಿಗಳು ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ತಾಣವಾಗಿ ಮಾರ್ಪಟ್ಟಿದ್ದವು. ಈಗ ಯಾವ ಅಧಿಕಾರಿ ಬಳಿ ದಯನೀಯವಾಗಿ ಬೇಡಿಕೊಳ್ಳದೇ ಅಧಿಕಾರಯುತವಾಗಿ ಅರ್ಜಿ ಸಲ್ಲಿಸಿ ಸಕಾಲದಲ್ಲಿ ಅವರಿಗೆ ಬೇಕಾದ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಾರೆ. ಇದು ಆಡಳಿತದಲ್ಲಿ ಹೊಸ ಬದಲಾವಣೆ ತರಲು ಸಾಧ್ಯವಾಗಿದೆ ಎಂದರು.

ಮೊದಲನೇ ಹಂತದಲ್ಲಿ ಆರು ಇಲಾಖೆಗಳ 151 ಸೇವೆಗಳನ್ನು ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿಸಲಾಗಿತ್ತು. ಈಗ ಮತ್ತೆ 12 ಇಲಾಖೆಗಳ 114 ಸೇವೆಗಳನ್ನು ಸೇರಿಸಲಾಗಿದೆ. ಇದರಿಂದ ಒಟ್ಟು 265 ಸೇವೆಗಳು ಸಕಾಲ ವ್ಯಾಪ್ತಿಗೆ ಸೇರಿಸಿದಂತಾಗಿದೆ ಎಂದರು.

ಅರ್ಜಿಗಳ ಹೆಚ್ಚಿಗೆ ಬರುತ್ತಿವೆ ಎನ್ನುವ ಕಾರಣಕ್ಕಾಗಿ ಸಾರ್ವಜನಿಕರಿಂದ ಬರುವ ಅರ್ಜಿಯನ್ನು ಸ್ವೀಕರಿಸಲು ವಿಳಂಬ ಮಾಡದಂತೆ ಮೇಲಾಧಿಕಾರಿಗಳು ನೋಡಿಕೊಳ್ಳಬೇಕು. ಅಂತಹ ಸಂದರ್ಭಗಳು ಉಂಟಾಗದಂತೆ ಕೆಳಗಿನ ಅಧಿಕಾರಿಗಳ ಮೇಲೆ ನಿಗಾ ಇಡಬೇಕೆಂದು ಸಲಹೆ ಮಾಡಿದರು.

ಯೋಜನೆ ಜಾರಿಗೆ ಬಂದ ಎಂಟು ತಿಂಗಳಲ್ಲಿ ಹಾವೇರಿ ಜಿಲ್ಲೆ ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದೆ. ಇದನ್ನು ಮುಂದುವರೆಸಿಕೊಂಡು ಹೋಗುವುದರ ಜತೆಗೆ ಆಡಳಿತದಲ್ಲಿ ಇನ್ನಷ್ಟು ಸುಧಾರಣೆ ತರಲು ಪ್ರಯತ್ನಿಸಬೇಕೆಂದು ಹೇಳಿದರು.

ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸಕಾಲ ಯೋಜನೆ ದೇಶದಲ್ಲಿಯೇ ಮಾದರಿ ಯೋಜನೆಯಾಗಿದೆ. ರಾಜ್ಯ ಜಾರಿಗೆ ತಂದ ಯೋಜನೆಯನ್ನು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಗುಜರಾತ್‌ನಂತಹ ರಾಜ್ಯಗಳು ಕೂಡಾ ಅನುಕರಣೆ ಮಾಡಲು ಮುಂದಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಈಗಾಗಲೇ ಸಕಾಲದಲ್ಲಿ ಸಾಕಷ್ಟು ಕೆಲಸ ಮಾಡಿರುವ ಜಿಲ್ಲೆಗಳಲ್ಲಿ ಮುಂದುವರೆದು ಅರ್ಜಿದಾರರಿಗೆ ಆನ್‌ಲೈನ್ ಮೂಲಕವೇ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಜಾರಿಗೆ ತರಬೇಕಿದೆ. ಈ ವಿನೂತನ ಯೋಜನೆಯನ್ನು ಹಾವೇರಿ ಜಿಲ್ಲೆಯಿಂದಲೇ ಆರಂಭಿಸಲು ಪ್ರಯತ್ನಿಸಲಾಗುವುದು ಎಂದ ಅವರು, ಈ ಯೋಜನೆಯ ಮುಂದುವರೆದ ಭಾಗವನ್ನು ಜಾರಿಗೆ ತರುವ ಬಗ್ಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಜತೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು.

ಅದೇ ರೀತಿ ನೆಮ್ಮದಿ ಕೇಂದ್ರವನ್ನು ನಾಡ ಕಚೇರಿ ವ್ಯಾಪ್ತಿಗೆ ತಂದು ನಾಡ ಕಚೇರಿ ಬಲವರ್ಧನೆಗೆ ಸರ್ಕಾರ ಮುಂದಾಗಿದೆ. ಬರುವ ದಿನಗಳಲ್ಲಿ ಸರ್ಕಾರಿ ಸಂಸ್ಥೆಯ ಮೂಲಕವೇ ಅಗತ್ಯ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿ.ಪಂ.ಅಧ್ಯಕ್ಷ ಶಂಕ್ರಣ್ಣ ಮಾತನವರ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ನೆಹರೂ ಓಲೇಕಾರ, ಜಿ.ಶಿವಣ್ಣ, ವಿಧಾನಪರಿಷತ್ ಸದಸ್ಯ ಶಿವರಾಜ ಸಜ್ಜನರ, ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋರ್ ಹಾಜರಿದ್ದರು.

ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಸ್ವಾಗತಿಸಿದರು. ಉಪವಿಭಾಗಾಧಿಕಾರಿ ಕೆ. ಚನ್ನಬಸಪ್ಪ ನಿರೂಪಿಸಿದರು. ಜಿ.ಪಂ. ಉಪಕಾರ್ಯದರ್ಶಿ ಗೋವಿಂದಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.