ADVERTISEMENT

ಸಡಗರದ ಸೀಗೆ ಹುಣ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 6:20 IST
Last Updated 10 ಅಕ್ಟೋಬರ್ 2011, 6:20 IST

ಅಕ್ಕಿಆಲೂರ: ರೈತ ಸಮೂಹ ಇಲ್ಲಿ ಭಾನುವಾರ ಸೀಗೆಹುಣ್ಣಿಮೆಯನ್ನು ಸಕಲ ಭಕ್ತಿಭಾವಗಳೊಂದಿಗೆ ಸಡಗರದಿಂದ ಆಚರಿಸಿದರು.

ಗ್ವಾಲಕವ್ವ ದೇವಿ ವಾಸವಿರುವ ಕಾರಣ ಭಾನುವಾರ ಅಥವಾ ಗುರುವಾರ ಮಾತ್ರ ಹುಣ್ಣಿಮೆ ಆಚರಣೆಯ ನಿಯಮ ಇಲ್ಲಿದೆ. ಹೀಗಾಗಿ ಎರಡು ದಿನ ಮುಂಚಿತವಾಗಿಯೇ ಸೀಗೆ ಹುಣ್ಣಿಮೆ ಆಚರಿಸಲಾಯಿತು.

ಬೆಳಿಗ್ಗೆ ಹೊಲಗಳಿಗೆ ತೆರಳಿದ ರೈತ ಸಮೂಹ ಬೆಳೆದು ನಿಂತಿರುವ ಇಳುವರಿಯನ್ನು ಪೂಜಿಸಿತು. ಇಳುವರಿ ಮತ್ತಷ್ಟು ಹುಲುಸಾಗಿ ಬೆಳೆಯಲಿ ಎಂಬ ಆಶಾಭಾವನೆಯೊಂದಿಗೆ ನಾಲ್ಕು ದಿಕ್ಕಿನಲ್ಲಿ ಚೆರಗ ಚೆಲ್ಲಲಾಯಿತು. ಹೊಲದಲ್ಲಿ ಪಾಂಡವರನ್ನು ಮಾಡಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆಯಲ್ಲಿ ಮುತ್ತೈದೆ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯವನ್ನು ನೆರವೇರಿಸಲಾಯಿತು. ರೈತನ ಮಿತ್ರ ಎನಿಸಿರುವ ಜಾನುವಾರುಗಳಿಗೆ, ಕೃಷಿ ಸಲಕರಣೆಗಳನ್ನು ಪೂಜಿಸಿದರು.

 ಪೂಜೆ ಸಲ್ಲಿಸಿದ ಬಳಿಕ ರೈತ ಸಮೂಹ ಬಂಧುಗಳು, ಮಿತ್ರರು ಹಾಗೂ ಹಿತೈಷಿಗಳ ಜೊತೆಗೆ ಸಹಪಂಕ್ತಿ ಭೋಜನೆ ನಡೆಸಿದರು. ಬಗೆಬಗೆಯ ಅಡುಗೆ, ಸಿಹಿ ತಿನಿಸುಗಳನ್ನು ತಯಾರಿಸಲಾಗಿತ್ತು. ವಿಶೇಷವಾಗಿ ಖರ್ಚಿಕಾಯಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ವಿವಿಧ ತರಕಾರಿ ಪಲ್ಲೆ, ಬುತ್ತಿ ಸೇರಿದಂತೆ ತಹೇವಾರಿ ಅಡುಗೆ ಶೀಗಿ ಹುಣ್ಣಿಮೆಗೆಂದೇ ಸಿದ್ಧಗೊಂಡಿದ್ದವು.

ಭತ್ತ ಹಾಗೂ ಅಡಿಕೆ ತೆನೆ ಕಟ್ಟಿಕೊಳ್ಳುತ್ತಿರುವ ಈ ಸಮಯದಲ್ಲಿ ಭೂಮಿ ತಾಯಿ ಗರ್ಭ ಧರಿಸಿದ್ದಾಳೆ ಎಂಬ ನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಗರ್ಭ ಧರಿಸಿರುವ ಭೂಮಿ ತಾಯಿಗೆ ಸೀಮಂತ ಕಾರ್ಯ ನೆರವೇರಿಸುವ ಅರ್ಥಪೂರ್ಣ ಆಚರಣೆ ಇಲ್ಲಿ ಶ್ರದ್ಧೆ ಹಾಗೂ ಭಕ್ತಿಗಳೊಂದಿಗೆ ನೆರವೇರಿತು. ಬೆಳಿಗ್ಗೆ ಚಕ್ಕಡಿಗಳ ಮೂಲಕ ರೈತರು ಹೊಲ, ಗದ್ದೆಗಳಿಗೆ ತೆರಳುತ್ತಿದ್ದುದು ಇಲ್ಲಿ ಕಂಡು ಬಂದಿತು.
ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸೀಗೆಹುಣ್ಣಿಮೆ ಆಚರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.