ADVERTISEMENT

ಸರ್ಕಾರಿ ಸೌಲಭ್ಯಗಳಿಗೆ ಆಧಾರ್‌ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 7:46 IST
Last Updated 17 ಜೂನ್ 2017, 7:46 IST
ಜಿಲ್ಲಾಡಳಿತ ಸಭಾಂಗಣದಲ್ಲಿ ಗುರುವಾರ ನಡೆದ ‘ಆಧಾರ್ ಜೋಡಣೆ ಹಾಗೂ ಸಂಬಂಧಿಸಿದ ಸೇವೆಗಳ ಬಗ್ಗೆ ಜಾಗೃತಿ ಕಾರ್ಯಾಗಾರ’ದಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ
ಜಿಲ್ಲಾಡಳಿತ ಸಭಾಂಗಣದಲ್ಲಿ ಗುರುವಾರ ನಡೆದ ‘ಆಧಾರ್ ಜೋಡಣೆ ಹಾಗೂ ಸಂಬಂಧಿಸಿದ ಸೇವೆಗಳ ಬಗ್ಗೆ ಜಾಗೃತಿ ಕಾರ್ಯಾಗಾರ’ದಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ   

ಹಾವೇರಿ: ‘ಸರ್ಕಾರದ ಯಾವುದೇ ಸೌಲಭ್ಯ ಹಾಗೂ ಭವಿಷ್ಯದ ಎಲ್ಲ ಸೇವೆಗಳನ್ನು ಪಡೆಯಬೇಕಾದರೆ, ಆಧಾರ್ ಕಾರ್ಡ್‌ನ ಸಂಖ್ಯೆ ಕಡ್ಡಾಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಹೇಳಿದರು. ಬೆಂಗಳೂರಿನ ಇ–ಆಡಳಿತ ಹಾಗೂ ಜಿಲ್ಲಾ ಆಡಳಿತದ ಆಶ್ರಯದಲ್ಲಿ ಜಿಲ್ಲಾಡಳಿತ ಸಭಾಂಗಣದಲ್ಲಿ, ಅಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಾಗಿ ಗುರುವಾರ ನಡೆದ ‘ಆಧಾರ್ ಜೋಡಣೆ ಹಾಗೂ ಸಂಬಂಧಿಸಿದ ಸೇವೆಗಳ ಬಗ್ಗೆ ಜಾಗೃತಿ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯು, ಆಧಾರ್‌ ಜೋಡಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅರಿತುಕೊಂಡು, ಆಧಾರ್ ಜೋಡಣೆ ಕಾರ್ಯಗಳನ್ನು ಚುರುಕುಗೊಳಿಸಬೇಕು. ಆಧಾರ್ ಸಂಖ್ಯೆಯ ಬಳಕೆ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಐ.ಟಿ.ಕಾಯ್ದೆ, ಆಧಾರ್ ಕಾಯ್ದೆ, ಡಿಜಿಟಲ್ ಇಂಡಿಯಾದಲ್ಲಿ ಪಡೆದು, ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕು’ ಎಂದರು.

ಆಧಾರ್ ನೋಂದಣಿಯಲ್ಲಿ 4 ವರ್ಷದ ಒಳಗಿನ ಮಕ್ಕಳು, 5ರಿಂದ 17 ವರ್ಷದ ಒಳಗಿನ ವಯೋಮಾನದವರು ಹಾಗೂ 18 ವರ್ಷದ ಮೇಲಿನವರು ಎಂದು ಮೂರು ವಿಭಾಗಗಳಾಗಿ ವರ್ಗೀಕರಣ ಮಾಡಲಾಗಿದೆ. ಜಿಲ್ಲೆಯಲ್ಲಿ 4 ವರ್ಷದ ಒಳಗಿನ ಒಟ್ಟು 66,821 ಮಕ್ಕಳು ನೋಂದಣಿ ಆಗದೇ ಬಾಕಿ ಉಳಿದಿವೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಹೆಚ್ಚು ಗಮನಹರಿಸಬೇಕು. ಅಲ್ಲದೇ, ಜಿಲ್ಲೆಯಲ್ಲಿ ಉಳಿದ ಎಲ್ಲ ವರ್ಗದಗಳ ನೋಂದಣಿಯು ಸಂಪೂರ್ಣವಾಗಬೇಕು’ ಎಂದು ಸೂಚಿಸಿದರು.

ADVERTISEMENT

ಬೆಂಗಳೂರಿನ ಇ–-ಆಡಳಿತ ಕಚೇರಿ ಸಂಪನ್ಮೂಲ ವ್ಯಕ್ತಿ ವಂಶಿ ಮಾತನಾಡಿ,‘ಪ್ರತಿಯೊಬ್ಬ ನಾಗರಿಕರ ಆಧಾರ್ ಸಂಖ್ಯೆಯನ್ನು ಹೊಂದಬೇಕಾಗಿರುವುದು ಅವಶ್ಯಕ. ಸರ್ಕಾರದ ಸೌಲಭ್ಯ ಪಡೆಯುವಾಗ, ಆಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಸೇರಿಸುವುದು ಕಡ್ಡಾಯವಾಗಿದೆ. ತಾವು ಇಲಾಖೆಗಳಿಗೆ ನೀಡುವ ಆಧಾರ್ ಸಂಖ್ಯೆಯನ್ನು ಸಂರಕ್ಷಿಸಲಾಗುವುದು. ಯಾವುದೇ ಕಾರಣಕ್ಕೆ ವೈಯಕ್ತಿಕ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ. ಈ ಕುರಿತಂತೆ ‘ರಾಷ್ಟ್ರೀಯ ಆಧಾರ್ ಕಾಯ್ದೆ’ ಜಾರಿಗೊಳಿಸಲಾಗಿದೆ’ ಎಂದು ವಿವರಿಸಿದರು.

‘ಆಧಾರ್ ನೋಂದಣಿ ಉಚಿತವಾಗಿದ್ದು, ಅಂಚೆ ಕಚೇರಿ ಸೇರಿದಂತೆ ಕಾಯಂ ಆಧಾರ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. 4 ವರ್ಷದ ಮಕ್ಕಳಿಗೂ ಆಧಾರ್ ನೋಂದಾಯಿಸಿಕೊಂಡು, ಐದು ಹಾಗೂ 15 ವರ್ಷಕ್ಕೆ, ಆಧಾರ್‌ ಸಂಖ್ಯೆ ಯನ್ನು ಬೈಯೋಮೆಟ್ರಿಕ್‌ಗೆ ನವೀಕರಿಸಿಕೊಳ್ಳಬೇಕು’ ಎಂದರು. ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯ ನಿರ್ವಾಹಕಾಧಿಕಾರಿ ಅಧಿಕಾರಿ ಕೆ.ಬಿ.ಅಂಜನಪ್ಪ ಹಾಗೂ ಶ್ರೇಯಸ್ ರಾವತ್ ಇದ್ದರು.

* * 

ಆಧಾರ್‌ ಸಂಖ್ಯೆ ಯಾವ ಉದ್ದೇಶಕ್ಕೆ ಪಡೆಯುತ್ತಾರೋ, ಅದಕ್ಕೆ ಮಾತ್ರ ಅಧಿಕಾರಿಗಳು ಬಳಸಬೇಕು. ಸಾರ್ವಜನಿಕರ ಆಧಾರ್ ಸಂಖ್ಯೆಗೆ ರಾಷ್ಟ್ರೀಯ ಸುರಕ್ಷತೆ ಇದೆ ವಂಶಿ, ಸಂಪನ್ಮೂಲ ವ್ಯಕ್ತಿ,
ಇ–ಆಡಳಿತ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.