ADVERTISEMENT

‘ಸಾರಿಗೆ ನಿಯಮ ಉಲ್ಲಂಘಿಸಿದರೆ ಕ್ರಮ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 6:53 IST
Last Updated 13 ಅಕ್ಟೋಬರ್ 2017, 6:53 IST

ಹಾವೇರಿ: ‘ಕಾಂಟ್ರ್ಯಾಕ್ಟ್‌ ಕ್ಯಾರೇಜ್’ ಪರವಾನಗಿ ಪಡೆದು, ‘ಸ್ಟೇಜ್ ಕ್ಯಾರೇಜ್’ ಆಗಿ ಕಾರ್ಯ ನಿರ್ವಹಿಸುವ ಬಸ್‌ಗಳ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ಖಾಸಗಿ ಬಸ್‌ಗಳು ಗ್ರಾಮೀಣ ರಸ್ತೆಯ ಪರವಾನಗಿ ಪಡೆದುಕೊಂಡು ಮುಖ್ಯ ರಸ್ತೆ (ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು)ಯಲ್ಲಿ ಸಂಚರಿಸುತ್ತಿವೆ. ಅಲ್ಲದೇ, ಕಾನೂನಿಗೆ ವಿರುದ್ಧವಾಗಿ ಲಗೇಜ್‌ ಸಾಗಿಸುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಹಬ್ಬ, ರಜೆಗಳ ಸಂದರ್ಭದಲ್ಲಿ ಅಧಿಕ ಹಣ (ಟಿಕೆಟ್‌) ಸಂಗ್ರಹಿಸುವುದು, ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು –ಮೂರು ಬಸ್‌ಗಳು ಸಂಚರಿಸುವುದು, ವಾಹನದ ಎದುರು ಮತ್ತು ಹಿಂಭಾಗದಲ್ಲಿ ಬೇರೆ ಬೇರೆ ನೋಂದಣಿ ಸಂಖ್ಯೆ ಹೊಂದಿರುವ ಬಗ್ಗೆಯೂ ದೂರುಗಳಿವೆ. ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಅಂತರ ನಿಗಮ ವರ್ಗಾವಣೆ ಶೀಘ್ರವೇ ಜಾರಿಗೆ ಬರಲಿದೆ. ಆದರೆ, ಆಯಾ ನಿಗಮದಲ್ಲಿ ಖಾಲಿ ಹುದ್ದೆಗಳ ಆಧಾರದಲ್ಲಿ ವರ್ಗಾವಣೆ ನೀಡಲು ಸಾಧ್ಯ’ ಎಂದರು. ‘9 ಲಕ್ಷ ಕಿ.ಮೀ.ಗಿಂತ ಹೆಚ್ಚು ಸಂಚರಿಸಿದ 906 ಬಸ್‌ಗಳನ್ನು ಹಿಂಪಡೆದುಕೊಳ್ಳಲಾಗುವುದುಮತ್ತು ದೂರ ಪ್ರಯಾಣದ ನಾನ್ ಎ.ಸಿ. ಸ್ಲೀಪರ್ ಬಸ್‌ಗಳನ್ನು ಹೆಚ್ಚಿಸಲಾಗುವುದು’ ಎಂದ ಅವರು, ‘ಬಸ್ ಹಾಗೂ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಅಮಿತ್ ಶಾ: ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯಕ್ಕೆ ಬಂದು ಹೋದ ಬಳಿಕ ಬಿಜೆಪಿಯವರು ದಾಖಲೆ ಇಲ್ಲದೇ ಆರೋಪ ಮಾಡಲು ಶುರು ಮಾಡಿದ್ದಾರೆ. ಆರೋಪ ಮಾಡಲು ಇಲ್ಲದ ದಾಖಲೆಗಳನ್ನು ಹುಡುಕುತ್ತಿದ್ದಾರೆ. ಇದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಶೋಭೆ ತರುವ ವಿಚಾರವಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.