ADVERTISEMENT

ಸಾಲ ಬಾಧೆ: ಒಂದೇ ಊರಲ್ಲಿ ಇಬ್ಬರು ರೈತರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST

ಹಾವೇರಿ: ಸಾಲದ ಬಾಧೆ ತಾಳಲಾರದೆ ಒಂದೇ ಊರಿನ ಇಬ್ಬರು ರೈತರು ಪ್ರತ್ಯೇಕ ಘಟನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ನೆಗಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಇವರನ್ನು ಕರಬಸಪ್ಪ ತಿರಕಪ್ಪ ಸನದಿ (56) ಹಾಗೂ ರಾಜುರೆಡ್ಡಿ ಹನುಮರೆಡ್ಡಿ ಶೆಟ್ಟೆಪ್ಪನವರ (32) ಎಂದು ಗುರುತಿಸಲಾಗಿದೆ. ಕರಬಸಪ್ಪ ಮನೆಯಲ್ಲಿ, ರಾಜುರೆಡ್ಡಿ ಅವರು ನೆಗಳೂರಿನ ಸಮೀಪದ ದೊಡ್ಡಕರೆ ಸಮೀಪದ ತಮ್ಮ ಜಮೀನಿನಲ್ಲಿಯೇ ವಿಷ ಸೇವಿಸಿ ಅಸ್ವಸ್ಥರಾಗಿದ್ದರು. ಹೊಸರಿತ್ತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ಮೂಲಗಳು ತಿಳಿಸಿವೆ.

ಕರಬಸಪ್ಪ 9 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಅದಕ್ಕಾಗಿ ಸೆಂಟ್ರಲ್ ಬ್ಯಾಂಕ್‌ನಲ್ಲಿ ರೂ 2 ಲಕ್ಷ, ಮಹಿಂದ್ರಾ ಫೈನಾನ್ಸ್‌ನಲ್ಲಿ ರೂ 2.50 ಲಕ್ಷ ರೂ ಹಾಗೂ ಗ್ರಾಮೀಣ ವಿಕಾಸ ಬ್ಯಾಂಕ್‌ನಲ್ಲಿ 26,000 ರೂಪಾಯಿ ಸಾಲ ಮಾಡಿದ್ದರು. ಕಳೆದ ವರ್ಷ ಸರಿಯಾದ ಬೆಳೆ ಬಾರದ ಕಾರಣ ಸಾಲ ತೀರಿಸಲಾಗದೆ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇವರಿಗೆ ಹೆಂಡತಿ ಹಾಗೂ ನಾಲ್ವರು ಗಂಡು ಮಕ್ಕಳು ಇದ್ದಾರೆ.

ಅದೇ ಗ್ರಾಮದ ಯುವ ರೈತ ರಾಜುರೆಡ್ಡಿ ಸಹ 8 ಎಕರೆ ಜಮೀನು ಹೊಂದಿದ್ದು, ಟ್ರ್ಯಾಕ್ಟರ್ ಮತ್ತು ಬೆಳೆ ಸಾಲವಾಗಿ ಮಲಪ್ರಭಾ ಗ್ರಾಮೀಣ ಬ್ಯಾಂಕ್‌ನಲ್ಲಿ ರೂ 1.50 ಲಕ್ಷ, ಮಹೇಂದ್ರ ಫೈನಾನ್ಸ್‌ನಲ್ಲಿ ರೂ 3 ಲಕ್ಷ ಹಾಗೂ ಗ್ರಾಮದ ಕೆಲವರಲ್ಲಿ 25,000 ರೂಪಾಯಿ ಕೈಸಾಲ ಮಾಡಿದ್ದರು ಎಂದು ಅವರ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.