ADVERTISEMENT

ಸ್ನೇಕ್ ಕ್ಯಾಚರ್‌ ಆದ ಪೊಲೀಸ್‌ ಕಾನಸೆ್ಟಬಲ್‌..!

ನಗರ ಸಂಚಾರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 5:40 IST
Last Updated 9 ಡಿಸೆಂಬರ್ 2013, 5:40 IST

ಹಾವೇರಿ: ಮೈಮೇಲೆ ಖಾಕಿ, ಕೈಯ್ಯಲ್ಲೊಂದು ಲಾಠಿ, ತಲೆ ಮೇಲೊಂದು ಟೋಪಿ ಹಾಕಿಕೊಂಡರೆ ಪೊಲೀಸ್‌. ಅದೇ ಕೈಯಲ್ಲೊಂದು ಕಬ್ಬಿಣದ ಸ್ಟಿಕ್‌, ವಯರ್‌ ಇಲ್ಲದ ಸೆಟಲ್‌ಬ್ಯಾಡ್ಮಿಂಟನ್‌ ಬ್ಯಾಟ್, ಕಪ್ಪು ಚೀಲ ಹಿಡಿದು ಹೊರಟರೆ ಸ್ನೇಕ್‌ ಕ್ಯಾಚರ್‌.

ಹೌದು, ವೃತ್ತಿಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಆದ ಡಮ್ಮಳ್ಳಿ ರಮೇಶ ಅವರು, ಹಾವುಗಳನ್ನು ಹಿಡಿಯುವ ಪ್ರವೃತ್ತಿಯನ್ನು ರೂಡಿಸಿಕೊಂಡಿದ್ದಾರೆ. ಹೀಗಾಗಿ ರಮೇಶ ಅವರು ನಗರದ ಜನತೆಗೆ ಪೊಲೀಸ್‌ಗಿಂತ ಸ್ನೇಕ್‌ ರಮೇಶ ಎಂದೇ ಚಿರಪರಿಚಿತರಾಗಿದ್ದಾರೆ.

ರಮೇಶ ತಮ್ಮ ವೃತ್ತಿಯ ಬಿಡುವಿಲ್ಲದ ಕೆಲಸದ ನಡುವೆಯೂ, ಹಾವು ಹಿಡಿಯುವುದನ್ನು ಸಮಾಜ ಸೇವೆ ಎಂದುಕೊಂಡಿದ್ದಾರೆ. ಇಂತಹ ಸ್ಥಳದಲ್ಲಿ ಹಾವು ಬಂದಿದೆ ಬನ್ನಿ ಎಂಬ ಕರೆ ಬಂದರೆ ಸಾಕು, ಕೈಯಲ್ಲಿ ಕಬ್ಬಿಣದ ಸಿ್ಟಿಕ್‌ ಹಾಗೂ ಕಪ್ಪು ಚೀಲವೊಂದನ್ನು ಹಿಡಿದು ಬೈಕ್‌ ಏರಿಬಿಡುತ್ತಾರೆ.

ಕರೆ ಮಾಡಿದವರಿಗೆ ಹಾವು ಮಾತ್ರ ಕಣ್ಣಿಗೆ ಕಾಣುವಂತೆ ನೋಡಿಕೊಳ್ಳಿ, ಸಂದಿ, ಗೊಂದಿಗಳಲ್ಲಿ ಹೋಗಲು ಬಿಡಬೇಡಿ ಎನ್ನುವ ಸಲಹೆ ನೀಡುತ್ತಲೇ ಹಾವು ಇರುವ ಸ್ಥಳಕ್ಕೆ ತಲುಪುತ್ತಾರೆ. ಎಂತಹದೇ ಸಂದಿಗೊಂದಿರಲಿ, ಮಾಳಿಗೆ, ಮೇಲಾ್ಛವಣಿಗಳಿರಲಿ ಹಾವು ಕಣ್ಣಿಗೆ ಕಾಣುತ್ತಿದ್ದರೆ ಸಾಕು ಅದನ್ನು ಹಿಡಿದು ಕೈಯಲ್ಲಿರುವ ಕಪ್ಪು ಚೀಲಕ್ಕೆ ಹಾಕಿ, ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುತ್ತಾರೆ.

ಮೀನಿನಿಂದ ಹಾವಿನವರೆಗೆ: ಹಾವೇರಿ ಜಿಲ್ಲೆ ಹಿರೇಕೆರೂರ ತಾಲ್ಲೂಕಿನ ಡಮ್ಮಳ್ಳಿ  ಗ್ರಾಮದ ರಮೇಶ ಅವರು, ತಂದೆ ಹನುಮಂತಪ್ಪನ ಜತೆ ಊರಿನ ಕೆರೆಗಳಲ್ಲಿ ಮೀನು ಹಿಡಿಯಲು   ಬಲೆ ಹಾಕುತ್ತಿದ್ದರು. ಎಷ್ಟೋ ಬಾರಿ ಮೀನಿನ ಜತೆ ಕೆರೆಯಲ್ಲಿರುವ ಹಾವುಗಳು ಬಲೆಯಲ್ಲಿ ಸಿಕ್ಕಿ ಬೀಳುತ್ತಿದ್ದವು.

ಅಂತಹ ಹಾವುಗಳನ್ನು ಹೊಡೆಯದೇ ಸುರಕ್ಷಿತವಾಗಿ ಕಾಡಿಗೆ ಇಲ್ಲವೇ ಕೆರೆಗೆ ಬಿಡುವುದನ್ನು ಅವರ ತಂದೆಯ ಸಲಹೆ ಮೇರೆಗೆ ರೂಡಿಸಿಕೊಂಡಿದ್ದರು. ಅದುವೇ ಹಾವುಗಳನ್ನು ಹಿಡಿಯಲು ಪ್ರೇರಣೆಯಾಯಿತು ಎನ್ನುತ್ತಾರೆ ಸ್ನೇಕ್ ರಮೇಶ.
ಪೊಲೀಸ್‌ ಇಲಾಖೆಯಲ್ಲಿ ಸೇವೆಗೆ ಸೇರಿದ ಮೇಲೆ ಹೆಗ್ಗೇರಿ ಕೆರೆ ಹಾಗೂ ಕೆರಿಮತ್ತಿಹಳ್ಳಿಯ ಮಧ್ಯದಲ್ಲಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಿತ್ಯ ಕಾಣಿಸಿಕೊಳ್ಳುತ್ತಿದ್ದ ಹಾವುಗಳನ್ನು ಹಿಡಿದು, ಬೇರೆಡೆಗೆ ಬಿಟ್ಟು ಬರುವುದು ಅವರಿಗೆ ಸಾಮಾನ್ಯವಾಗಿತ್ತು.

ಹಾವೇರಿಯ ಹೊರವಲಯದಲ್ಲಿರುವ ಎಸ್‌ಪಿ ಅವರ ಮನೆಯಲ್ಲಿ ಬೇರೆ ಬೇರೆ ಜಾತಿಯ 29 ಹಾವುಗಳನ್ನು ಹಿಡಿದಿರುವುದು ಸೇರಿದಂತೆ ಹಾವೇರಿ ನಗರ ಹಾಗೂ ಸುತ್ತಮುತ್ತಲು ಕನಿಷ್ಠ ಒಂದೂವರೆ ಸಾವಿರ ಹಾವುಗಳನ್ನು ಹಿಡಿದು ಕಾಡಿಗೆ ಕಳುಹಿಸಿದ್ದಾರೆ.

ಕಳೆದ 10–15 ವರ್ಷ ಹಾವುಗಳನ್ನು ಹಿಡಿಯುತ್ತಿದ್ದಾರೆ. ಹಿಡಿದ ಹಾವುಗಳಲ್ಲಿ ವಿಷಪೂರಿತ ಹಾವುಗಳನ್ನು ಕಬ್ಬೂರ, ಕರ್ಜಗಿ, ಗೌರಾಪುರ ಅರಣ್ಯ ಪ್ರದೇಶದಲ್ಲಿ ಬಿಡುವ ಅವರು, ಸಾಮಾನ್ಯ ಹಾವುಗಳನ್ನು ಊರ ಹೊರವಲಯದ ಜಮೀನುಗಳಲ್ಲಿ ಬಿಟ್ಟು ಬರುತ್ತಾರೆ. ಅದಕ್ಕಾಗಿ ಯಾರ ಬಳಿಯೂ ಹಣ ಪಡೆದಿಲ್ಲ. ಜನರೇ ಪೆಟ್ರೋಲ್‌ ಕರ್ಚಿಗೆ ನೂರು, ಇನ್ನೂರು ಕೊಟ್ಟಿದ್ದನ್ನು ಪಡೆಯುವ ರಮೇಶ, ಈವರೆಗೆ ಒಮ್ಮೆಯೂ ಹಾವುಗಳ ಕಡಿತಕ್ಕೆ ಒಳಗಾಗಿಲ್ಲ ಎಂದು ತಿಳಿಸುತ್ತಾರೆ ಅವರ ಸಹದ್ಯೋಗಿ ಮಿತ್ರರು.

ಮೈಸೂರಲ್ಲಿ ತರಬೇತಿ: ಹಿಂದಿನ ಎಸ್‌ಪಿ ಡಾ.ಚೇತನಸಿಂಗ್‌ ರಾಥೋರ ಅವರು, ಹಾವುಗಳನ್ನು ಹಿಡಿಯುವುದು ಒಂದು ಕಲೆ,  ಈಗಾಗಲೇ ಅದು ನಿನಗೆ ಕರಗತವಾಗಿದೆ. ಇನ್ನಷ್ಟು ಎಚ್ಚರಿಕೆ ಜತೆಗೆ ಪರಿಣಿತಿ ಪಡೆಯಲು ಮೈಸೂರಿನ ಸ್ನೇಕ್‌ಶ್ಯಾಮ್‌ ಬಳಿ ಸಲಹೆ ಪಡೆಯುವಂತೆ ತಿಳಿಸಿ ಆರ್ಥಿಕ ಸಹಾಯ ನೀಡಿ ಕಳುಹಿಸಿಕೊಟ್ಟಿದ್ದರು. ಆವಾಗಿನಿಂದ ಮತ್ತಷ್ಟು ಜಾಗರೂಕತೆಯಿಂದ ಹಾವುಗಳನ್ನು ಹಿಡಿಯುವುದನ್ನು ರೂಢಿಸಿಕೊಂಡಿದ್ದೇನೆ ಎಂದು ರಮೇಶ ತಿಳಿಸುತ್ತಾರೆ.

ಅರೆಮಲೆನಾಡು ಪ್ರದೇಶವಾಗಿರುವ ಹಾವೇರಿ ನಗರ ಸೇರಿದಂತೆ ಸುತ್ತ ಮುತ್ತಲೂ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಹೊಡೆದು ಕೊಲ್ಲಬೇಡಿ ಎಂಬುದು ರಮೇಶ ಮನವಿ.

ತಮ್ಮ ಮನೆಯ ಬಳಿ ಹಾವುಗಳು ಕಾಣಿಸಿಕೊಂಡಾಗ ಮೊಬೈಲ್‌ 9742563214 ಗೆ ಕರೆ ಮಾಡಿ ರಮೇಶ ಅವರನ್ನು ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.