ADVERTISEMENT

ಹದಗೆಟ್ಟ ರಸ್ತೆಯಲ್ಲಿ ಮುರಿದು ನಿಂತ ರಥ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 7:25 IST
Last Updated 14 ನವೆಂಬರ್ 2012, 7:25 IST

ಹಾವೇರಿ: ನಗರದ ಎಂ.ಜಿ.ರಸ್ತೆಯಲ್ಲಿ ಸಾಗುತ್ತಿದ್ದ ವೀರಭದ್ರೇಶ್ವರ ರಥದ ಅಚ್ಚು ಮುರಿದು ಅರ್ಧ ದಾರಿಯಲ್ಲಿ ರಥ ನಿಂತುಕೊಂಡ ಘಟನೆ ಮಂಗಳವಾರ ನಡೆಯಿತು.

ಕಳೆದ ಮೂರು ದಿನಗಳಿಂದ ನಡೆದ ಜಾತ್ರಾ ಮಹೋತ್ಸವದಲ್ಲಿ ಮೂರನೇ ದಿನವಾದ ಇಂದು ವೀರಭದ್ರೇಶ್ವರ ದೇವಸ್ಥಾನದಿಂದ ಪುರಸಿದ್ದೇಶ್ವರ ದೇವಸ್ಥಾನದ ವರೆಗೆ ರಥೋತ್ಸವ ನಡೆಯಬೇಕಿತ್ತು.

ಆದರೆ, ಎಂ.ಜಿ.ರಸ್ತೆಯ ಚಾವಡಿ ಬಳಿ ಏಕಾಏಕಿ ರಥದ ಅಚ್ಚು ಮುರಿದುಬಿಟ್ಟಿತು. ಇದರಿಂದ ರಥ ಮುಂದೆ ಸಾಗಲಾರದೇ ಅಲ್ಲಿಯೇ ನಿಂತುಕೊಂಡಿತು.

ಈ ಸಂದರ್ಭದಲ್ಲಿ ರಥದಲ್ಲಿದ್ದ ಉತ್ಸವ ಮೂರ್ತಿಯನ್ನು ಭಕ್ತರು,ಪಾಲಿಕೆಯಲ್ಲಿ ಹೊತ್ತು ನಿಗದಿತ ಸ್ಥಳಕ್ಕೆ ಕೊಂಡೊಯ್ದು ರಥೋತ್ಸವದ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು.

ಹದಗೆಟ್ಟ ರಸ್ತೆ ಕಾರಣ: ಅತಿಕ್ರ ಮಣ ತೆರವುಗೊಳಿಸಿ ಒಂದು ವರ್ಷ ಕಳೆದರೂ ನಗರಸಭೆ ಎಂ.ಜಿ.ರಸ್ತೆ ಯನ್ನು ದುರಸ್ತಿಗೊಳಿಸದ ಕಾರಣ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆ ತುಂಬ ತೆಗ್ಗುಗುಂಡಿಗಳು ಬಿದ್ದಿವೆ. ಅದೇ ರಸ್ತೆಯಲ್ಲಿ ಅನಿವಾರ್ಯವಾಗಿ ರಥ ಸಾಗಬೇಕಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತದೆ.

ಜಾತ್ರ ಸಮಿತಿಯವರು ಜಾತ್ರಾ ಮಹೋತ್ಸವಕ್ಕೂ ಮುನ್ನ ಸ್ಥಳೀಯ ಶಾಸಕ ನೆಹರೂ ಓಲೇಕಾರ ಹಾಗೂ ನಗರಸಭೆ ಅಧ್ಯಕ್ಷರು, ಅಧಿಕಾರಿಗಳನ್ನು ಕರೆದು ರಥ ಸಾಗುವ ರಸ್ತೆಯಲ್ಲಿರುವ ತಗ್ಗು ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚುವಂತೆ ಮನವಿ ಮಾಡಿದ್ದರು.

ಆದರೆ, ನಗರಸಭೆ ಅಧಿಕಾರಿಗಳು, ಅಧ್ಯಕ್ಷರು ದುರಸ್ತಿಗೊಳಿಸುವ ಭರವಸೆ ನೀಡಿಯೂ ಹಾಗೆ ಬಿಡಲಾಗಿದೆ ಎಂದು ಭಕ್ತರು ಆರೋಪಿಸಿದರು.

ರಸ್ತೆಯಲ್ಲಿ ಸಾರ್ವಜನಿಕರೇ ಓಡಾ ಡುವುದು ಕಷ್ಟವಾಗಿದೆ. ನಗರಸಭೆ ಕಳೆದ ಮೂರು ವರ್ಷಗಳಿಂದ ನಗರ ವನ್ನು ಸುಧಾರಣೆ ಮಾಡುವ ನೆಪದಲ್ಲಿ ಹಾಳು ಮಾಡಿದೆಯಲ್ಲದೇ, ಹಾಳು ಮಾಡಿದ ರಸ್ತೆಗಳ ಕಾಮಗಾರಿಯನ್ನೂ ನಿಗದಿತ ಸಮಯಕ್ಕೆ ದುರಸ್ತಿ ಮಾಡದೇ ಹಾಗೆ ಬಿಡುವ ಮೂಲಕ ಜನರಷ್ಟೇ ಅಲ್ಲದೇ ದೇವರ ರಥ ಕೂಡಾ ಮುರಿದು ಹೋಗುವಂತೆ ಮಾಡಿದ್ದಾರೆ ಎಂದು ಭಕ್ತರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.