ADVERTISEMENT

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ: 32 ಸಿರಿಧಾನ್ಯಗಳ ಸಂರಕ್ಷಣೆ

ಹರ್ಷವರ್ಧನ ಪಿ.ಆರ್.
Published 15 ಅಕ್ಟೋಬರ್ 2018, 20:00 IST
Last Updated 15 ಅಕ್ಟೋಬರ್ 2018, 20:00 IST
ಹಾವೇರಿಯ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳನ್ನು ಪರಿಶೀಲಿಸುತ್ತಿರುವುದು. ಪ್ರಗತಿಪರ ರೈತ ಚನ್ನಬಸಪ್ಪ ಕೊಂಬಳಿ, ಧಾರವಾಡ ಕೃಷಿ ವಿ.ವಿ.ಯ ವಿಸ್ತರಣಾ ನಿರ್ದೇಶಕ ಡಾ. ಆರ್.ಆರ್. ಪಾಟೀಲ, ಜಿ.ಪಂ. ಸಿಇಒ ಸಿ.ಟಿ. ಶಿಲ್ಪಾನಾಗ್, ಕೇಂದ್ರದ ಮುಖ್ಯಸ್ಥ ಡಾ.ಪಿ.ಅಶೋಕ,  ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಇದ್ದಾರೆ.
ಹಾವೇರಿಯ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳನ್ನು ಪರಿಶೀಲಿಸುತ್ತಿರುವುದು. ಪ್ರಗತಿಪರ ರೈತ ಚನ್ನಬಸಪ್ಪ ಕೊಂಬಳಿ, ಧಾರವಾಡ ಕೃಷಿ ವಿ.ವಿ.ಯ ವಿಸ್ತರಣಾ ನಿರ್ದೇಶಕ ಡಾ. ಆರ್.ಆರ್. ಪಾಟೀಲ, ಜಿ.ಪಂ. ಸಿಇಒ ಸಿ.ಟಿ. ಶಿಲ್ಪಾನಾಗ್, ಕೇಂದ್ರದ ಮುಖ್ಯಸ್ಥ ಡಾ.ಪಿ.ಅಶೋಕ,  ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಇದ್ದಾರೆ.   

ಹಾವೇರಿ:ರಾಣೆಬೆನ್ನೂರು ತಾಲ್ಲೂಕಿನ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರವು 32 ಸಿರಿಧಾನ್ಯಗಳನ್ನು ಸಂರಕ್ಷಣೆ ಮಾಡುತ್ತಿದ್ದು, ರೈತರ ಸಹಭಾಗಿತ್ವದಲ್ಲಿ ವಿಸ್ತರಣಾ ಚಟುವಟಿಕೆಗೆ ಮುಂದಾಗಿದೆ.

‘ಈ ಧಾನ್ಯಗಳಲ್ಲಿ ಇಥಿಯೋಪಿಯಾದ ‘ಟೆಫ್‌’ ಮತ್ತು ಮೆಕ್ಸಿಕೊದ ‘ಚಿಯಾ’ ಕೂಡ ಇದೆ. ಅಳಿವಿನಂಚಿನಲ್ಲಿರುವ ಮುಳ್ಳು ನವಣೆ, ಕೆಂಪು ನವಣೆ, ಬೆಟ್ಟದ ಕೆಳಗಿನ ಸಾಮೆ, ಮಲ್ಲಿಗೆ ಸಾಮೆಯನ್ನೂ ಸಂರಕ್ಷಿಸಲಾಗುತ್ತಿದೆ. ‘ಗ್ರಾಂ’ ಲೆಕ್ಕದಲ್ಲಿ ಕೆಲವು ರೈತರಿಂದ ಪಡೆದ ಬೀಜಗಳನ್ನು ಕೇಂದ್ರದ ಪ್ರಾತ್ಯಕ್ಷಿಕೆ ಹೊಲದಲ್ಲಿ ಬೆಳೆದಿದ್ದೇವೆ. ಈಗ ಫಸಲು ಬಂದಿದೆ. ಈ ಪೈಕಿ ಒಂದಷ್ಟು ಸಂರಕ್ಷಿಸಿ ಇಡುತ್ತೇವೆ. ಉಳಿದುದನ್ನು ಆಸಕ್ತ ರೈತರಿಗೆ ನೀಡುತ್ತೇವೆ. ಆ ಮೂಲಕವೂ ಸಿರಿಧಾನ್ಯ ಸಂರಕ್ಷಣೆಯಾಗಲಿದೆ’ ಎಂದು ಕೇಂದ್ರದ ಮುಖ್ಯಸ್ಥರಾದ ಹಿರಿಯ ವಿಜ್ಞಾನಿ ಡಾ. ಪಿ. ಅಶೋಕ ವಿವರಿಸಿದರು.

‘ಸಿರಿಧಾನ್ಯ ಬೆಳೆಯುವ ಬಗೆ, ಅವುಗಳಲ್ಲಿರುವ ಉತ್ತಮ ಅಂಶಗಳು, ಬೆಳೆಯನ್ನು ಲಾಭದಾಯಕ ಮಾಡುವ ನಿಟ್ಟಿನಲ್ಲಿ ಅಧ್ಯಯನ ನಡೆಸುತ್ತಿದ್ದೇವೆ. ಎಂಥ ಕಠಿಣ ಸ್ಥಿತಿಯಲ್ಲೂ ಅವುಗಳನ್ನು ಬೆಳೆಯಬಹುದು. ನೀರು, ಗೊಬ್ಬರ ಇತ್ಯಾದಿಗಳ ಅಗತ್ಯ ಕಡಿಮೆ’ ಎಂದರು.

ADVERTISEMENT

‘ಸಂಸ್ಕರಣೆಯು ಸ್ವಲ್ಪ ಕ್ಲಿಷ್ಟಕರವಾದ ಕಾರಣ ರೈತರು ಬೆಳೆಯುವುದನ್ನು ಬಿಟ್ಟಿದ್ದಾರೆ. ಹೀಗಾಗಿ ಕೇಂದ್ರದಲ್ಲಿ ಸಂಸ್ಕರಣಾ ಘಟಕ ಶೀಘ್ರವೇ ಕಾರ್ಯಾರಂಭ ಮಾಡಲಿದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಆರ್.ಆರ್. ಪಾಟೀಲ ತಿಳಿಸಿದರು.

‘ನಮ್ಮ ಪೂರ್ವಜರುಸಿರಿಧಾನ್ಯ ಬೆಳೆಯುತ್ತಿದ್ದು, ಸ್ವಾವಲಂಬಿಗಳಾಗಿದ್ದರು. ಜನ– ಜಾನುವಾರುಗಳ ಆರೋಗ್ಯ ಮಾತ್ರವಲ್ಲ ನೆಲ, ನೀರು, ಗಾಳಿ ಸೇರಿದಂತೆ ಪರಿಸರದ ಆರೋಗ್ಯವನ್ನೂ ಕಾಪಾಡುತ್ತದೆ. ದೇಹಕ್ಕೆ ಬೇಕಾದ ನಾರು, ಪೌಷ್ಟಿಕಾಂಶಗಳು ಇವೆ. ಆದರೆ, ‘ಕ್ರಾಂತಿ’ಯ ಹೆಸರಿನಲ್ಲಿ ಬಂದ ಆಧುನಿಕ ಕೃಷಿ ಪದ್ಧತಿಯು ‘ಸಾಮಾಜಿಕ ಸ್ವಾಸ್ಥ್ಯ’ಕ್ಕೇ ಹೊಡೆತ ನೀಡಿತು. ಈಗ ವಿಜ್ಞಾನಿಗಳೇ ಸಿರಿಧಾನ್ಯಗಳ ಸಂರಕ್ಷಣೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ’ ಎಂದು ಪ್ರಗತಿಪರ ರೈತ ಚನಬಸಪ್ಪ ಕೊಂಬಳಿ ಶ್ಲಾಘಿಸಿದರು.

‘ಅತಿಯಾದ ಬಡತನವಿದ್ದರೂ ಮೆಕ್ಸಿಕೋ, ಇಥಿಯೋಪಿಯಾ, ಜಮೈಕಾ ಮತ್ತಿತರ ದೇಶಗಳ ಜನತೆ ಓಟದಲ್ಲಿ ಮುಂದಿದ್ದಾರೆ. ಅಲ್ಲಿಯೂ ಸಿರಿಧಾನ್ಯಗಳೇ ಆಹಾರವಾಗಿದ್ದು, ವಂಶವಾಹಿಯೇ ಬಲಿಷ್ಠವಾಗಿದೆ. ನಮ್ಮ ರಾಜ್ಯದಲ್ಲೂ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಸಿರಿಧಾನ್ಯಗಳಿದ್ದವು’ ಎಂದು ಕೊಂಬಳಿ ಹೇಳಿದರು.

ಕೇಂದ್ರದಲ್ಲಿನ ಸಿರಿಧಾನ್ಯಗಳು

ಇಥಿಯೋಪಿಯಾದ ‘ಟೆಫ್‌’, ಮೆಕ್ಸಿಕೊದ ‘ಚಿಯಾ’ ಸೇರಿದಂತೆ ನವಣೆ, ತೆನಿ–07, ದೊಡ್ಡ ತಲೆ ನವಣೆ, ಸಣ್ಣ ನವಣೆ, ಮುಳ್ಳು ನವಣೆ, ಕೆಂಪು ನವಣೆ, ಕೆಂಪು ಹುಲ್ಲು ನವಣೆ, ನವಣೆ (ಕೊಂಬಳಿ), ಸಾಮೆ, ಬೆಟ್ಟದ ಕೆಳಗಿನ ಸಾಮೆ, ಹಾಲು ಸಾಮೆ, ಚನ್ನ ಸಾಮೆ, ಕಪ್ಪು ಸಾಮೆ, ಕರಿ ಸಾಮೆ, ಹರ ಸಾಮೆ, ಮಲ್ಲಿಗೆ ಸಾಮೆ, ರಾಜಗಿರಿ, ಸುವರ್ಣ ರಾಜಗಿರಿ, ಕೊರಲೆ, ಕೊರಲೆ (ಕೊಂಬಳಿ), ಹಾರಕ, ಹಾರಕ (ಕೊಂಬಳಿ), ಬರಗು, ಊದಲು (ಕೊಂಬಳಿ), ಊದರಲು, ರಾಗಿ, ದೊಡ್ಡ ರಾಗಿ, ಉಂಡೆರಾಗಿ, ರಾಗಿ ನಾಟಿಪದ್ಧತಿ ಹಾಗೂ ಸಜ್ಜೆ (ಕೊಂಬಳಿ).

*ವಿಶೇಷ ಅಸ್ಥೆ ವಹಿಸಿ ಸಿರಿಧಾನ್ಯಗಳ ಸಂರಕ್ಷಣೆ ಮಾಡಿದ್ದೇವೆ. ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದೇವೆ.
–ಡಾ.ಪಿ. ಅಶೋಕ
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃವಿಕೇ ಹನುಮನಮಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.