ADVERTISEMENT

ಹಾನಗಲ್‌ಗೆ ತುಂಗಭದ್ರಾ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 7:35 IST
Last Updated 10 ನವೆಂಬರ್ 2012, 7:35 IST

ಹಾನಗಲ್: `ರೂ. 60 ಕೋಟಿ ವೆಚ್ಚದಲ್ಲಿ 75 ಕಿ.ಮೀ ದೂರದ ತುಂಗಭದ್ರಾ ನದಿಯಿಂದ ಹಾನಗಲ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆ ಸದ್ಯದಲ್ಲಿ ಅನುಷ್ಠಾನಗೊಳ್ಳಲಿದೆ~ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಹೇಳಿದರು.

ಶುಕ್ರವಾರ ನೂತನವಾಗಿ ಕಾರ್ಯಾರಂಭಗೊಂಡ ಹಾನಗಲ್ ಪುರಸಭೆಯ ಸುಸಜ್ಜಿತ ಕಟ್ಟಡ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 1973 ರಲ್ಲಿ ಧರ್ಮಶಾಲೆಯ ಶಿಥಿಲ ಕಟ್ಟಡದಲ್ಲಿ ಆರಂಭಗೊಂಡ ಹಾನಗಲ್ ಪುರಸಭೆಗೆ ಸುಸಜ್ಜಿತ ವಿಶಾಲ ಕಚೇರಿ ದೊರಕಿದ್ದರಿಂದ ಅಭಿವೃದ್ಧಿ ಕಾಮಗಾರಿಗಳು ಚುರುಕುಗೊಳ್ಳಲಿವೆ.

ಪ್ರಯತ್ನವಿದ್ದಲ್ಲಿ ಬದಲಾವಣೆ ಸಾಧ್ಯವಿದೆ ಎಂಬುದಕ್ಕೆ ಹಾನಗಲ್ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಸಾಕ್ಷಿಯಾಗಿದೆ. ಸದ್ಯದಲ್ಲಿ ಇಲ್ಲಿನ ಸ್ಟೇಟ್ ಬ್ಯಾಂಕ್ ಎದುರಿನ ರಸ್ತೆ ಮತ್ತು ಕೆ.ಇ.ಬಿ ಎದುರಿನ ರಸ್ತೆಗಳ ಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ ವೃತ್ತಗಳನ್ನು ನಿರ್ಮಿಸಲಾಗುವುದು.

ಇದೇ ತಿಂಗಳಲ್ಲಿ 275 ಫಲಾನುಭವಿಗಳಿಗೆ ಆಶ್ರಯ ನಿವೇಶನದ ಪಟ್ಟಾ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದ ಸಚಿವ ಉದಾಸಿ, ಇನ್ನೆರಡು ತಿಂಗಳಲ್ಲಿ ಬರುವ ಪುರಸಭೆ ಚುನಾವಣೆಯಲ್ಲಿ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
 
ಪ್ರಾಸ್ತಾವಿಕವಾಗಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಪಟ್ಟಣದ ಮೂಲಸೌಕರ್ಯ ಜಾರಿಗೊಳಿಸುವಲ್ಲಿ ಸಚಿವ ಉದಾಸಿ ಕಾಳಜಿ ವಹಿಸಿದ್ದರಿಂದ ಹಾನಗಲ್ಲಿನ ಚಿತ್ರಣ ಬದಲಾಗಿದೆ. ಚುನಾಯಿತ ಪ್ರತಿನಿಧಿಗಳ ಕಾರ್ಯದಕ್ಷತೆ ಸಹಕಾರ ನೀಡಿದೆ ಎಂದರು.

ಎ.ಪಿ.ಎಂ.ಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ. ಎಸ್. ಬಳ್ಳಾರಿ ಮಾತನಾಡಿದರು. ಪುರಸಭಾಧ್ಯಕ್ಷೆ ಹಸಿನಾಭಿ ನಾಯ್ಕನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರೋಜಾ ಹುಳ್ಳಿಕಾಶಿ, ಮಾಜಿ ಅಧ್ಯಕ್ಷರಾದ ಎಂ.ಬಿ.ಕಲಾಲ, ಎಸ್.ಕೆ.ಪೀರಜಾದೆ, ಲಕ್ಷ್ಮವ್ವ ಹಳೆಕೋಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಲಾ ಪವಾಡಿ ವೇದಿಕೆಯಲ್ಲಿದ್ದರು.  ಶ್ರುತಿ ಕೋಡದ ಪ್ರಾರ್ಥಿಸಿದರು. ಮುಖ್ಯಾಧಿಕಾರಿ ಎ. ರಮೇಶ ಸ್ವಾಗತಿಸಿದರು. ಶಿವಾನಂದ ಕ್ಯಾಲಕೊಂಡ ನಿರೂಪಿಸಿದರು. ದುರ್ಗಾರಾಮ ಉತಳೇಕರ ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.