ಹಾವೇರಿ: ಆತ್ಮೀಯ ನಾಗರಿಕರೆ, `ಜಗತ್ತು ಆತನನ್ನು ಮಹಾತ್ಮಾ ಎಂದು ಕರೆಯುತ್ತದೆ. ಸತ್ಯ, ಅಹಿಂಸೆಯನ್ನು ಪರಿಪಾಲನೆ ಆತನ ಧ್ಯೇಯವಾಕ್ಯ. ಆತ ಹೇಳಿರುವ ತತ್ವಾದರ್ಶ ಹಾಗೂ ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಜೀವನ ಪಾವನ ಎನ್ನುವ ಕೊಟ್ಯಂತರ ಮನಸ್ಸು ಗಳು ಜಗತ್ತಿನಲ್ಲಿವೆ. ಅದು ನನಗೆ ಹೆಮ್ಮೆಯ ಸಂಗತಿ~.
ಅಂತಹ ಮಹಾನ್ ವ್ಯಕ್ತಿ ನಾಮದೇಯ ಹೊಂದಿರುವ ಸಂತೋಷಕ್ಕಿಂತ ಬೇರೋಂದು ಸಂತೋಷವಿಲ್ಲ. ಇಡೀ ದೇಶದಲ್ಲಿ ನಾನೊಬ್ಬನೆ ಅಲ್ಲ. ದೇಶದ ಬಹುತೇಕ ನಗರ ಪಟ್ಟಣ ಗಳಲ್ಲಿಯೂ ನನ್ನಂತೆಯೇ ಆ ವ್ಯಕ್ತಿಯ ಹೆಸರಿನ್ನಿಟ್ಟುಕೊಂಡು ನನ್ನ ಅಣ್ಣ ತಮ್ಮಂದಿರು ಹೆಮ್ಮೆ ಪಟ್ಟಿದ್ದಾರೆ, ಇನ್ನೂ ಪಡುತ್ತಲಿದ್ದಾರೆ.
ಆದರೆ, ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ ರುವ ನನಗೆ ಆ ಮಹಾತ್ಮನ ಹೆಸರಿಟ್ಟ ಆರಂಭ ದಲ್ಲಿ ನನ್ನಂತಹ ಅದೃಷ್ಟಶಾಲಿ ಇನ್ನಾರು ಇಲ್ಲ. ಹೂವಿನ ಜತೆ ನಾರು ಸ್ವರ್ಗ ಸೇರಿದಂತೆ, ಆ ಮಹಾತ್ಮನ ಹೆಸರಿನ ಜತೆ ನನ್ನನ್ನು ನೆನಪಿಸಿಕೊಳ್ಳುತ್ತಾರೆ ಎನ್ನುವ ಸಂತೋಷ ದಿಂದಲೇ ನನ್ನನ್ನು ಅದೃಷ್ಟಶಾಲಿ ಎಂದು ಕರೆದುಕೊಂಡಿದ್ದೆ, ಆದರೆ, ಈಗ ನಾನೊಬ್ಬ ದುರದೃಷ್ಟಶಾಲಿ ಅನ್ನಿಸತೊಡಗಿದೆ.
ಆ ಮಹಾನ್ ವ್ಯಕ್ತಿ ಬೇರಾರು ಅಲ್ಲ ಮಹಾತ್ಮಾ ಗಾಂಧಿ. ಆತನ ಹೆಸರನ್ನಿಟ್ಟು ಕೊಂಡು ಕೆಲವು ದಶಕಗಳೇ ಕಳೆದಿವೆ. ನಾಮಕರಣ ಮಾಡಿದ ದಿನದಿಂದ ಇಲ್ಲಿವರೆಗೆ ಒಂದೇ ಒಂದು ದಿನವೂ ಜನರಿಗೆ ಬೇಜಾರಾ ಗುವಂತೆ ನಡೆದುಕೊಂಡಿಲ್ಲ. ನಡೆದುಕೊಳ್ಳು ವುದು ಇಲ್ಲ.
ಆದರೆ, ಜನರೆ ನನ್ನ ಸಾಮರ್ಥ್ಯವನ್ನು ತಿಳಿಯದೇ ನನ್ನ ಮೇಲೆ ಹೆಚ್ಚಿನ ಜನ ಹಾಗೂ ವಾಹನಗಳು ಅವಲಂಬನ ಆಗಿದ್ದರಿಂದ ನಾನು ಸಹಜವಾಗಿ ಚಿಕ್ಕವನಂತೆ ಕಂಡು ಜನರಿಗೆ ಕಿರಿಕಿರಿ ಮಾಡಿದ್ದುಂಟು. ಅದೇ ಕಾರಣಕ್ಕಾಗಿ ನನ್ನನ್ನು ಇನ್ನಷ್ಟು ವಿಸ್ತರಿಸಲು 10-12 ವರ್ಷಗ ಳಿಂದಲೇ ನಗರಸಭೆ ಚಿಂತನೆ ನಡೆದಿತ್ತು. ಆದರೆ, ಬೇರೆ ಕಾರಣದಿಂದ ಅದು ಸಾಧ್ಯವಾಗಿರ ಲಿಲ್ಲ.
ನನ್ನ ಅಕ್ಕಪಕ್ಕದಲ್ಲಿರುವ ನನ್ನ ಹಳೆಯ ಸ್ನೇಹಿತರು (ಮನೆ, ಅಂಗಡಿಗಳು) ಇರುವುದ ರಿಂದ ಅವರ ಅಸ್ತಿತ್ವಕ್ಕೆ ಧಕ್ಕೆ ಬರಬಹುದೆಂಬ ಕಾರಣಕ್ಕಾಗಿ ನನ್ನ ವಿಸ್ತಾರ ವಿಳಂಬವಾಯಿತು.
ಆದರೆ, ದಿನದಿಂದ ದಿನಕ್ಕೆ ಜನರಿಗೆ ಅಷ್ಟೇ ಅಲ್ಲದೇ ನನ್ನ ಜತೆಯಲ್ಲಿಯೇ ಇದ್ದು, ವ್ಯಾಪಾರ ವಹಿವಾಟು ಮಾಡುವ ಬಹುತೇಕ ವ್ಯಾಪಾರಿ ಬಂಧುಗಳಿಗೆ ತೊಂದರೆ ಆಗುತ್ತಿರುವುದನ್ನು ಕಣ್ಣಾರೆ ಕಂಡು ಮರುಗುತ್ತಿದ್ದೆ. ಆದರೆ, ಏನೂ ಮಾಡಲಾರದ ಅಸಹಾಯಕತೆ ನನ್ನನ್ನು ಸುಮ್ಮನಿರುವಂತೆ ಮಾಡಿತ್ತು.
ಕೆಲವೇ ಜನರಿಗೆ ಆಗುವ ತೊಂದರೆಗಿಂತ ಬಹಳಷ್ಟು ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ನಗರಸಭೆ ನನ್ನನ್ನು ವಿಸ್ತರಿಸಲು ನಿರ್ಧರಿಸಿ, ಮೂರು ತಿಂಗಳ ಹಿಂದೆ ಒಂದು ದಿನ ಬೆಳಗಿನ ಜಾವ ನನ್ನ ಹಳೆಯ ಸ್ನೇಹಿತರ (ಕಟ್ಟಡಗಳ)ನ್ನು ಜೆಸಿಬಿ ಯಂತ್ರಗಳ ಮೂಲಕ ಹಿಂದೆ ಸರಿಸಿದರು.
ಈ ಸಂದರ್ಭದಲ್ಲಿ ಕೆಲವರು ಅಂಗವಿಕಲರಾದರೆ, ಇನ್ನೂ ಕೆಲವರು ಲೋಕ ದಲ್ಲಿಯೇ ಇನ್ನಿಲ್ಲವಾದರು. ಇದರಿಂದ ನನ್ನ ಸ್ನೇಹಿತರಿಗೆ ನೋವು, ಬೇಜಾರು ಆದರೂ, ಬಹಳಷ್ಟು ಜನರಿಗೆ ಖುಷಿಯಾಗಿತ್ತು. ನಾನು ಕೂಡಾ `ಒಂದನ್ನು ಪಡೆಯಬೇಕಾದರೆ, ಇನ್ನೊಂದನ್ನು ಕಳೆದುಕೊಳ್ಳಬೇಕೆಂಬ~ ಭಗವ ದ್ಗೀತೆಯಲ್ಲಿನ ನುಡಿಯನ್ನು ನೆನಪಿಸಿಕೊಂಡು ಸ್ನೇಹಿತರಿಗೆ ಆದ ನೋವು, ಬೇಜಾರಿಗೆ ತಲೆ ಕೆಡಿಸಿಕೊಳ್ಳದೇ ಬಹಳಷ್ಟು ಜನರಿಗೆ ಅನುಕೂಲವಾಗಲು ನಿರ್ಧರಿಸಿದ್ದೆ.
ಆ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು ಕೇವಲ 15 ದಿನಗಳಲ್ಲಿ ನನ್ನನ್ನು ಸುಂದರಗೊಳಿಸುವ ಭರವಸೆ ನೀಡಿದ್ದರು. ಇದರಿಂದ ಸ್ನೇಹಿತರ ನೋವು ಬೇಗ ಮರೆಯಾಗಬಹುದೆಂಬ ಖುಷಿ ಯಾಗಿತ್ತು. ಆದರೆ, ನಗರಸಭೆ ಅಧಿಕಾರಿ ಗಳು ತಾವಾಡಿದ ಮಾತಿನಂತೆ ನಡೆದು ಕೊಳ್ಳಲಿಲ್ಲ. ಬದಲಾಗಿ, ಮೊದಲಿದ್ದ ನನ್ನ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದರು.
ನನ್ನ ಎಡ,ಬಲದಲ್ಲಿ ಸುಮ್ಮನೆ ಹರಿದು ಹೋಗುತ್ತಿದ್ದ ಚರಂಡಿ ನೀರು ನನ್ನ ಮೇಲೆ ಹರಿಯಲಾರಂಭಿಸಿತು. ವರ್ಷಕ್ಕೊಮ್ಮೆ ನಡೆಯುವ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನನ್ನ ಮೇಲೆ ಶಿವಬಸವ ಹಾಗೂ ಶಿವಲಿಂಗ ಶ್ರೀಗಳ ಭಾವಚಿತ್ರದ ಮೆರವಣಿಗೆ ಹೊರಟು ಹೋದಾಗ ಧನ್ಯತಾ ಭಾವ ಮೂಡು ತ್ತಿತ್ತು.
ಚರಂಡಿ ನೀರಿನಿಂದ ನಾನು ಮಲಿನ ಗೊಂಡಿದ್ದರಿಂದ ಪರ್ಯಾಯ ಮಾರ್ಗದ ಬಗ್ಗೆ ಚರ್ಚೆ ನಡೆದಾಗ ನನಗಂತೂ ಎಲ್ಲಿಲ್ಲದ ನೋವು, ಸಂಕಟವಾಗಿತ್ತು. ಕೊನೆಗೆ ಮಠದ ಆಡಳಿತ ಮಂಡಳಿ ಮೂಲ ಮಾರ್ಗ ಬಿಟ್ಟು ಬೇರೆಕಡೆ ಮೆರವಣಿಗೆ ಸಾಗುವುದಿಲ್ಲ ವೆಂದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೆ. ಆಗ ನಗರಸಭೆಯವರು 10ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ ಮೇಲೆ ಹರಿಯುವ ಚರಂಡಿ ನೀರನ್ನು ಪಕ್ಕದಲ್ಲಿ ಹರಿಯುವಂತೆ ಮಾಡಿದರು. ಮೆರವಣಿಗೆಯೂ ಸಾರಾಗವಾಗಿ ನಡೆಯಿತು.
ಇದಕ್ಕೆ ನಾನಾಗಲಿ, ನನ್ನ ಹೆಸರಾಗಲಿ ಕಾರಣ ವಲ್ಲ. ನನ್ನನ್ನು ಹಾಗೆ ಮಾಡ್ತೇನಿ, ಹೀಗೆ ಮಾಡ್ತೇನಿ ಎಂದು ಹೇಳಿ, ಮರೆತಿರುವ ನಗರ ಭೆ ಅಧಿಕಾರಿಗಳು, ನಗರಸಭೆ ಸದಸ್ಯರು ಹಾಗೂ ಜನಪ್ರತಿನಿಧಿಗಳು ಕಾರಣರಾಗಿದ್ದಾರೆ.
ಯಾರು ಸತ್ಯ, ಅಹಿಂಸೆಯ ಪ್ರತಿಪಾದಕರಾಗಿ ್ದದರೂ, ಅವರ ಹೆಸರನ್ನು ಹೊಂದಿರುವ ನನಗೆ ಸುಳ್ಳು ಹೇಳುವ ಮೂಲಕ ಜನರಿಗೆ ವಂಚನೆ ಮಾಡುತ್ತಿರುವ ಜನಪ್ರತಿನಿಧಿಗಳನ್ನು ಕಂಡು ನನಗೆ ಯಾಕಾದರೂ ಆ ಮಹಾನ್ ವ್ಯಕ್ತಿಯ ಹೆಸರಿಟ್ಟರೋ ಎನ್ನುವ ನೋವು ಕಾಡುತ್ತಿದೆ.
ಆತನ ಮಾರ್ಗದಲ್ಲಿ ನಡೆದರೆ, ಜೀವನ ಪಾವನ ಎನ್ನುವ ವ್ಯಕ್ತಿಗಳೂ ಸಹ, ಇಂದಿನ ಗಲೀಜು, ಮಲೀನತೆ ನೋಡಿ ಆ ಮಾರ್ಗದಲ್ಲಿ ನಡೆಯುವುದೇ ಪಾಪ ಎನ್ನುವ ಸ್ಥಿತಿಗೆ ಬಂದಿದ್ದಾರೆ. ಅದೇ ಕಾರಣಕ್ಕೆ ಅಂದು ಅದೃಷ್ಟ ಶಾಲಿಯಾದ ನನಗೆ ಇಂದು ದುರದೃಷ್ಟ ಶಾಲಿ ಅನು ಸುತ್ತಿದೆ. ನಾನು ಮರಳಿ ಅದೃಷ್ಟ ಶಾಲಿಯಾಗುವಂತೆ ನೀವು ನನ್ನನ್ನು ಹಾರೈಸಿ.
ಇಂತಿ ನಿಮ್ಮ ಸೇವೆಯ, ಮಹಾತ್ಮಗಾಂಧಿ ರಸ್ತೆ, ಹಾವೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.